ಶಿವಮೊಗ್ಗ: ರಾಷ್ಟ್ರದ ಐಕ್ಯತೆ, ಸಮಗ್ರತೆ ಮತ್ತು ಭದ್ರತೆ ಕಾಪಾಡಲು ನಮ್ಮನ್ನು ಅರ್ಪಿಸಿಕೊಳ್ಳೋಣ ಹಾಗೂ ಸ್ವತ್ಛತೆಗೆ ಮೊದಲ ಆದ್ಯತೆ ನೀಡೋಣ ಎಂದು ಎಂಎಲ್‌ಸಿ ಡಿ.ಎಸ್. ಅರುಣ್ ತಿಳಿಸಿದರು. ಕೇಂದ್ರ ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಶಿವಮೊಗ್ಗ ಮಹಾನಗರ ಪಾಲಿಕೆ, ಪಶು ವೈದ್ಯಕೀಯ ಮಹಾವಿದ್ಯಾಲಯ, ಎನ್ನೆಸ್ಸೆಸ್ ಘಟಕ, ರೋಟರಿ ಉತ್ತರ, ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಸೋಮವಾರ ಕಾಶಿಪುರ ಸರ್ಕಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ “ರಾಷ್ಟ್ರೀಯ ಏಕತಾ ದಿವಸ ‘ಹಾಗೂ “ಯುನಿಟಿ ರನ್’ ಮತ್ತು ಸ್ವದೇಶದ ಅಖಂಡತೆಗೆ ಪಟೇಲರ ಕೊಡುಗೆ ಅಪಾರ ಭಾರತ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆಯಿಂದ ಭಾರತದ ಏಕೀಕರಣ ಸಾಧಿಸಲಾಯಿತು ಹಾಗೂ ರಾಷ್ಟ್ರದ ಆಂತರಿಕ ಭದ್ರತೆಯನ್ನು ಖಾತರಿಪಡಿಸಿ ಅಖಂಡತೆಗೆ ನಿಜವಾದ ವ್ಯಾಖ್ಯಾನ ನೀಡಿದ ಅವರ ತ್ಯಾಗ, ಸೇವೆ, ಹೋರಾಟ ಅವಿಸ್ಮರಣೀಯ ಎಂದರು.
ಅಖಂಡ ಭಾರತದ ಪರಿಕಲ್ಪನೆಯ ರೂವಾರಿ, ದೇಶದ ಪ್ರಥಮ ಉಪಪ್ರಧಾನಿ ಹಾಗೂ ಗೃಹ ಸಚಿವರಾಗಿ ಭಾರತಾಂಬೆಯ ಸೇವೆಗೈದ ಉಕ್ಕಿನ ಮನುಷ್ಯ, ಧೀಮಂತ ನಾಯಕ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜಯಂತಿ ದಿನದ ಅಂಗವಾಗಿ ಎಲ್ಲಾ ಸಂಘ- ಸಂಸ್ಥೆಯವರು ಇಂದು ಅರ್ಥಪೂರ್ಣ ಕಾರ್ಯಕ್ರಮ ಆಚರಣೆ ಮಾಡುತ್ತಿದ್ದಾರೆ ಎಂದು ಅಭಿನಂದಿಸಿದರು.
ಮಹಾನಗರ ಪಾಲಿಕೆಯ ಮೇಯರ್ ಶಿವಕುಮಾರ್ ಮಾತನಾಡಿ, ಈಗಾಗಲೇ ಸ್ವಚ್ಛತೆಯ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದೇವೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸವನ್ನು ಬಿಸಾಡಬಾರದು ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿ ಪರಿಸರವನ್ನು ಕಾಪಾಡುವಲ್ಲಿ ನಮ್ಮ ಜೊತೆ ಕೈಜೋಡಿಸಬೇಕೆಂದು ನುಡಿದರು.
ಮಹಾನಗರ ಪಾಲಿಕೆಯ ಸದಸ್ಯೆ ಅನಿತಾ ರವಿಶಂಕರ್ ಮಾತನಾಡಿ, ಈಗಾಗಲೇ ಪ್ರಧಾನಿಯವರ ಕನಸಿನಂತೆ ಸ್ವಚ್ಛತೆ ಬಗ್ಗೆ ಸಾಕಷ್ಟು ಅರಿವು ಮೂಡಿಸಿದರೂ ಸಹ ಜನರು ಇಂದಿಗೂ ತಮ್ಮ ಮನೆಯನ್ನು ಮಾತ್ರ ಸ್ವಚ್ಛವಾಗಿಟ್ಟುಕೊಂಡು ಕಸವನ್ನು ಎಲ್ಲೆಂದರಲ್ಲಿ ಹಾಕುತ್ತಿರುವುದು ತುಂಬಾ ವಿಷಾದನೀಯ. ಹಾಗಾಗಿ ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿದರೆ ಪೋಷಕರಿಗೆ ತಲುಪುತ್ತದೆ ಎಂದರು.
ನೆಹರು ಯುವ ಕೇಂದ್ರದ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ. ಅವರು ಮಾತನಾಡಿ, 31 ದಿನಗಳ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇಂದು ಅಭಿಯಾನದ ಕೊನೆಯ ದಿನವನ್ನು ಕಾಶಿಪುರ ಸರ್ಕಲ್‌ನಿಂದ ಪ್ರಾರಂಭಿಸಿ ವಿವಿಧ ಬಡಾವಣೆಗಳಲ್ಲಿ, ಗ್ರಾಮಗಳಲ್ಲಿ ನೆರವೇರಿಸಲಾಗುವುದು. ಇಂದು ಪಶುವೈದ್ಯಕೀಯ ಮಹಾವಿದ್ಯಾಲಯದ ಎನ್.ಎಸ್. ಎಸ್. ಘಟಕದ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಬಡಾವಣೆಗಳಲ್ಲಿ ಸ್ವತ್ಛತೆಯನ್ನು ಮಾಡುವುದರ ಮುಖಾಂತರ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದಾರೆ ಎಂದರು.
ಅಭಿಯಾನದಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯದ ಪ್ರೊ| ಗಣೇಶ್ ಉಡುಪ, ಪಶು ವೈದ್ಯಕೀಯ ಮಹಾವಿದ್ಯಾಲಯ ಎನ್.ಎಸ್.ಎಸ್. ಸಂಯೋಜಕ ಡಾ| ಧೂಳಪ್ಪ ಡಾ| ಹರೀಶ್ ಎಂ.ಎನ್., ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಅಧ್ಯಕ್ಷ ಜಗದೀಶ್ ಸರ್ಜಾ, ಪ್ರೊ| ಎ.ಎಸ್.ಚಂದ್ರಶೇಖರ್, ವಾರೀಜಾ ಜಗದೀಶ್, ಜಿ. ವಿಜಯಕುಮಾರ್, ಕಾರ್ಯದರ್ಶಿ ವೆಂಕಟೇಶ್, ಉಷಾ, ಭಾರತಿ ಚಂದ್ರಶೇಖರ್ ಇತರರು ಇದ್ದರು.