Advertisement
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಗುಜರಾತ್‌ನ ಇಂಧನ ಮತ್ತು ಪೆಟ್ರೋಲಿಯಂ ಸಚಿವ ಸೌರಭ್‌ಭಾಯ್ ಪಟೇಲ್, ದೇಶದ ಉಕ್ಕಿನ ಮನುಷ್ಯ, ಕೇಂದ್ರ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆಯನ್ನು ನರ್ಮದಾ ಜಿಲ್ಲೆಯ ಕೇವದಿಯಾ ಪ್ರದೇಶದ ಸರ್ದಾರ್ ಸರೋವರ ಜಲಾಶಯದ ಬಳಿ ನಿರ್ಮಿಸಲಾಗಿದ್ದು, ಅ.31ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಿದರು.
Related Articles
Advertisement
ಏಕತೆಯ ಪ್ರತಿಮೆ ಆವರಣದಲ್ಲಿ ಪಟೇಲ್ ವಸ್ತು ಸಂಗ್ರಹಾಲಯ, ಆಡಿಯೋ- ವಿಡಿಯೋ ಗ್ಯಾಲರಿ, ಸಂಶೋಧನಾ ಕೇಂದ್ರ ಪ್ರದರ್ಶನ ಆವರಣವಾಗಲಿದೆ. ರಾತ್ರಿ ವೇಳೆ ಪ್ರತಿಮೆಯ ಮೆರಗು ಹೆಚ್ಚಿಸುವಂತೆ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. 100 ಮಂದಿ ಯುವ ಗೈಡ್‌ಗಳನ್ನು ಸಜ್ಜುಗೊಳಿಸಲಾಗಿದೆ.
ಪ್ರತಿಮೆಯ ಒಳ ಭಾಗದಿಂದ 153 ಮೀಟರ್ ಎತ್ತರದಲ್ಲಿ ವೀಕ್ಷಣಾ ಗ್ಯಾಲರಿ ನಿರ್ಮಿಸಲಾಗಿದೆ. ಪ್ರತಿಮೆಯ ಎದೆ ಭಾಗದಲ್ಲಿನ ಗ್ಯಾಲರಿಗೆ ತಲುಪಲು ಎರಡು ಲಿಫ್ಟ್ಗಳನ್ನು ಅಳವಡಿಸಲಾಗಿದೆ. ಅಲ್ಲಿಂದ ಜಲಾಶಯ, ವಿಂಧ್ಯಾಚಲ ಪರ್ವತ ಶ್ರೇಣಿ, ನರ್ಮದಾ ನದಿ ಸೊಬಗನ್ನು ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಪ್ರತಿಮೆ ಸುತ್ತಮುತ್ತ ಎಲ್ಲ ರಾಜ್ಯಗಳು ತಮ್ಮದೇ ಸ್ವಂತ ಭವನ ನಿರ್ಮಾಣಕ್ಕೆ ಗುಜರಾತ್ ಸರ್ಕಾರದಿಂದ ಭೂಮಿ ನೀಡಲಾಗುವುದು. ಈಗಾಗಲೇ ಕೆಲ ರಾಜ್ಯಗಳು ಆಸಕ್ತಿ ತೋರಿದ್ದು, ಕರ್ನಾಟಕ ಸರ್ಕಾರವು ಈ ಬಗ್ಗೆ ಗಮನ ಹರಿಸಬಹುದು. ಪ್ರವಾಸೋದ್ಯಮ ದೃಷ್ಟಿಯಿಂದ ವಿಲಾಸಿ, ಐಷಾರಾಮಿ, ಸಾಧಾರಣ ಟೆಂಟ್‌ಗಳನ್ನು ನಿರ್ಮಿಸಿ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.
ಪಟೇಲ್ ಅವರ ಕೊಡುಗೆಯನ್ನು ಮುಂದಿನ ಪೀಳಿಗೆಗೂ ತಿಳಿಸುವ ಸಲುವಾಗಿ ಪ್ರತಿಮೆ ನಿರ್ಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಅ.31ರಂದು ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ಕಾರ್ಯಕ್ರಮಕ್ಕೆ ಕರ್ನಾಟಕದ ರಾಜ್ಯಪಾಲ ವಜುಭಾಯ್ ವಾಲಾ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.
ಗುಜರಾತ್ ಸರ್ಕಾರದ ಆರೋಗ್ಯ ಇಲಾಖೆ ಆಯುಕ್ತೆ ಜಯಂತಿ ರವಿ, ಗುಜರಾತ್ ಸಚಿವ ಜಯದ್ರತ್ ಸಿಂಗ್ ಪರಮರ್, ಶಾಸಕರಾದ ಶೈಲೇಶ್ ಬಬೋರ್, ಭರತ್‌ಭಾಯ್ ಪಟೇಲ್, ಬಿಕಾಭಾಯ್ ಭರಯ್ಯ, ಮಧು ಶ್ರೀವಾಸ್ತವ್, ಐಎಫ್ಎಸ್ ಅಧಿಕಾರಿ ಆರ್.ಕೆ.ಸುಗೂರ್ ಉಪಸ್ಥಿತರಿದ್ದರು.
ನಿವಾಸಿಗಳ ಕೊಡುಗೆ ಅಪಾರ: ಕಳೆದ 40- 50 ವರ್ಷಗಳಲ್ಲಿ ಗುಜರಾತ್‌ನ ಅಭಿವೃದ್ಧಿಗೆ ಗುಜರಾತ್‌ನ ಸ್ಥಳೀಯರು ಮಾತ್ರವಲ್ಲದೇ ದೇಶದ ನಾನಾ ಭಾಗಗಳಿಂದ ಬಂದು ನೆಲೆಸಿರುವ ಜನರ ಕೊಡುಗೆಯೂ ಮಹತ್ವದ್ದಾಗಿದೆ. ಗುಜರಾತ್‌ನ ಅಭಿವೃದ್ಧಿಗೆ ಕೊಡುಗೆ ನೀಡಿದ ಪ್ರತಿಯೊಬ್ಬರಿಗೂ ಆ ಕೊಡುಗೆಯ ಶ್ರೇಯ ನೀಡುತ್ತೇವೆ ಎಂದು ಗುಜರಾತ್‌ನ ಇಂಧನ ಮತ್ತು ಪೆಟ್ರೋಲಿಯಂ ಸಚಿವ ಸೌರಭ್‌ಭಾಯ್ ಪಟೇಲ್ ಹೇಳಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಇತ್ತೀಚೆಗೆ ಗುಜರಾತ್‌ನಲ್ಲಿ ವಲಸಿಗ ಕಾರ್ಮಿಕರ ಮೇಲೆ ನಡೆದ ಹಲ್ಲೆ, ಅಪ್ರಾಪೆ¤ ಮೇಲಿನ ಅತ್ಯಾಚಾರ, ಇತರ ಘಟನೆಗಳಿಂದ ಉತ್ತರಪ್ರದೇಶ ಹಾಗೂ ಬಿಹಾರದ ಜನ ಗುಜರಾತ್‌ನಿಂದ ತಾಯ್ನಾಡಿಗೆ ವಾಪಸ್ಸಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,
ಸಣ್ಣ ಪ್ರಮಾಣದಲ್ಲಿ ಉತ್ತರ ಭಾರತ ಮೂಲದ ಜನ ತಮ್ಮ ತಾಯ್ನಾಡಿಗೆ ತೆರಳಿದ್ದಾರೆ. ನವರಾತ್ರಿ ಆಚರಣೆ ಸಂದರ್ಭದಲ್ಲಿ ಇದು ಸಹಜ ಪ್ರಕ್ರಿಯೆ. ಆಚರಣೆ ಮುಗಿದ ಬಳಿಕ ವಾಪಸ್ಸಾಗುತ್ತಾರೆ. ಈ ಬಗ್ಗೆ ವಿಶ್ವಾಸವಿದೆ. ಸೋಮವಾರ ಉತ್ತರ ಪ್ರದೇಶದಲ್ಲಿದ್ದ ಗುಜರಾತ್ ಮುಖ್ಯಮಂತ್ರಿಗಳು ಕಾರ್ಮಿಕರು ರಾಜ್ಯಕ್ಕೆ ವಾಪಸ್ಸಾಗುವಂತೆ ಮನವಿ ಮಾಡಿದ್ದಾರೆ ಎಂದು ಹೇಳಿದರು.