Advertisement
ತುಮಕೂರು: ರಾಜ್ಯದ ರಾಜಧಾನಿಗೆ ಹತ್ತಿರವಾಗಿ ಎಲ್ಲಾ ಕ್ಷೇತ್ರದಲ್ಲೂ ಪ್ರಗತಿಯ ದಾಪುಗಾಲು ಹಾಕುತ್ತಿರುವ ಹಾಗೂ ಬೆಂಗಳೂರಿಗೆ ಉಪ ನಗರವಾಗಿ ಬೆಳೆಯುತ್ತಿರುವ ಕಲ್ಪತರು ನಾಡಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್‌ನಲ್ಲಿ ಮಹತ್ವದ ಯೋಜನೆ ಪ್ರಕಟಿಸಿಲ್ಲ. ಜನ ನಿರೀಕ್ಷಿಸಿದ್ದ ಸರ್ಕಾರಿ ಮೆಡಿಕಲ್ ಕಾಲೇಜು, ತುಮಕೂರು-ಬೆಂಗಳೂರು ಮೆಟ್ರೋ, ವಿವಿ ಕ್ಯಾಂಪಸ್ ನಿರ್ಮಾಣಕ್ಕೆ ಅನುದಾನ ಬಗ್ಗೆ ಪ್ರಸ್ತಾಪಿಸದಿರುವುದು ನಿರಾಸೆ ಮೂಡಿಸಿದೆ.
Related Articles
Advertisement
ಎತ್ತಿನಹೊಳೆಗೆ 1500 ಕೋಟಿ: ಕುಡಿಯುವ ನೀರಿನ ಹಾಹಾಕಾರ ಎದುರಿಸುತ್ತಿರುವ ತುಮಕೂರು, ಹಾಸನ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ಶೀಘ್ರ ಕುಡಿಯುವ ನೀರು ಒದಗಿಸುವ ಸಲುವಾಗಿ “ಎತ್ತಿನಹೊಳೆ ಯೋಜನೆ’ಗೆ ಸರ್ಕಾರ ಆದ್ಯತೆ ನೀಡಿದ್ದು, ಸದರಿ ಯೋಜನೆಯ ಮೊದಲನೇ ಹಂತದ ಲಿಫ್ಟ್ ಕಾಂಪೋನೆನೆಂಟ್’ ಕಾಮಗಾರಿ ಪೂರ್ಣಗೊಳಿಸಿ ಮುಂಗಾರು ಹಂಗಾಮಿನಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಳಿಸಲು ಕಾಮಗಾರಿ ರೂಪಿಸಲಾಗಿದ್ದು, ಅದಕ್ಕಾಗಿ ಯೋಜನೆಗೆ 1500 ಕೋಟಿ ರೂ.ನೀಡಿದ್ದಾರೆ. ಇದರಿಂದ ಈ ಭಾಗದಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯ ಕಾಮಗಾರಿ ಇನ್ನೂ ಚುರುಕಾಗಲಿದೆ.
ಕೈಗಾರಿಕಾ ಪಾರ್ಕ್: ಕಲ್ಪತರು ನಾಡು ಎಂದೇ ಪ್ರಖ್ಯಾತಿ ಪಡೆದಿರುವ ತುಮಕೂರು ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಹೆಚ್ಚು ತೆಂಗು ಬೆಳೆಯುವ ರೈತರಿದ್ದಾರೆ. ರೈತರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದು, ಇವರಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲು ಸರ್ಕಾರ ಬಜೆಟ್‌ನಲ್ಲಿ ತೆಂಗು ಆಧಾರಿತ ಕೈಗಾರಿಕಾ ಪಾರ್ಕ್ ತಿಪಟೂರಿನಲ್ಲಿ ಸ್ಥಾಪಿಸಲು ನಿರ್ಧರಿಸಿದೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಸ್ಥಾಪನೆಯಾಗುತ್ತಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳಲ್ಲಿ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ ಮತ್ತು ಇದರಿಂದ ಕೈಗಾರಿಕಾ ಉದ್ಯಮ ಕ್ಷೇತ್ರಗಳ ಉನ್ನತ ಮಟ್ಟದ ಡೊಮೈನ್‌ಗಳಲ್ಲಿ ಕೌಶಲ್ಯ ತರಬೇತಿ ನೀಡುವುದರ ಮೂಲಕ ರಾಜ್ಯದ ಯುವ ಜನತೆಗೆ ಉದ್ಯೋಗ ಅವಕಾಶ ಹೆಚ್ಚಿಸುವುದು, ಮುಂದಿನ 5 ವರ್ಷಗಳಲ್ಲಿ 12,600 ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡುಸುವ ಗುರಿ ಹೊಂದಲಾಗಿದೆ.
ಕುಣಿಗಲ್‌ಗೆ ಅಗ್ನಿಶಾಮಕ ಠಾಣೆ: ರಾಜ್ಯದ ವಿವಿಧ ಕಡೆಗಳಲ್ಲಿ 10 ನೂತನ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪನೆ ಮಾಡಲಾಗುತ್ತಿದ್ದು, ತುಮಕೂರು ಜಿಲ್ಲೆಯ ತಾಲೂಕು ಕೇಂದ್ರ ಕುಣಿಗಲ್‌ಗೆ ಅಗ್ನಿಶಾಮಕ ಠಾಣೆ ಘೋಷಿಸಿದ್ದು, ಕುಣಿಗಲ್ ತಾಲೂಕಿನ ಜನರಿಗೆ ಸಂತಸ ತಂದಿದೆ. ಅಲೆಮಾರಿ ಸಮುದಾಯಕ್ಕೆ ಒತ್ತು ನೀಡಿರುವುದು ಜಿಲ್ಲೆಯಲ್ಲಿರುವ ಅಲೆಮಾರಿ ಸಮುದಾಯಕ್ಕೆ ಅನುಕೂಲವಾಗಿದೆ.
ತುಮಕೂರು ಜಿಲ್ಲೆ ಸದಾ ಬರಗಾಲ ಎದುರಿಸುತ್ತಿದ್ದರೂ, ಕೃಷಿಪ್ರಧಾನವಾಗಿದೆ. ಈ ಬಜೆಟ್‌ನಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಮನ್ನಣೆ ನೀಡಿರುವುದು, ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ವಾರ್ಷಿಕ 10 ಸಾವಿರ ನೆರವು, ರೈತರ ಅಧಿಕ ಬಡ್ಡಿ ದರ ತಪ್ಪಿಸಲು ಹೊಸ ಕಾರ್ಯಕ್ರಮ ಜಾರಿಗೆ ತಂದಿರುವುದು, ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಸ್ಥಾಪನೆ, ಮಣ್ಣು, ನೀರು ಪರೀಕ್ಷೆಗೆ ಸಹಕಾರಿ, ರೈತರ ಮನೆಬಾಗಿಲಿಗೆ ಕೀಟನಾಶಕ ಒದಗಿಸಲು ಕ್ರಮ ಕೈಗೊಂಡಿರುವುದು ರೈತರಿಗೆ ಆಶಾದಾಯಕವಾಗಿದೆ. ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗುವಂತೆ, ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಮಾರುಕಟ್ಟೆ ಮಧ್ಯಪ್ರವೇಶಿಸಿ ಕೃಷಿ ಉತ್ಪನ್ನ ಖರೀದಿಸುವ ಆವರ್ತ ನಿಧಿಗೆ ಬಜೆಟ್‌ನಲ್ಲಿ 2 ಸಾವಿರ ಕೋಟಿ ಮೀಸಲಿಟ್ಟಿರುವುದು ರೈತರ ನೆರವಾಗಲಿದೆ.
* ಚಿ.ನಿ.ಪುರುಷೋತ್ತಮ್