ನವದೆಹಲಿ: ದಾರಿ ತಪ್ಪಿಸುವ ಜಾಹೀರಾತುಗಳ ಸಂಬಂಧ ಸುಪ್ರೀಂ ಕೋರ್ಟ್ ಸಾಕಷ್ಟು ಕಠಿಣ ಕ್ರಮಕ್ಕೆ ಮುಂದಾಗಿದ್ದು, ಜಾಹೀರಾತುದಾರರು ತಮ್ಮ ಉತ್ಪನ್ನಗಳ ಕುರಿತು ಸ್ವ-ಘೋಷಣೆಯನ್ನು ಮಾಡಬೇಕು. ಆ ಬಳಿಕವಷ್ಟೇ ಜಾಹೀರಾತುಗಳನ್ನು ಪ್ರಸಾರ ಮಾಡಬೇಕು ಎಂದು ಹೇಳಿದೆ.
ಪತಂಜಲಿಯ ಹಾದಿ ತಪ್ಪಿಸುವ ಜಾಹೀರಾತು ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠವು, “1994ರ ಕೇಬಲ್ ಟೆಲಿವಿಷನ್ ನಿಯಮಗಳ ಅನುಸಾರ ಜಾಹೀರಾತು ನೀಡುವ ಮುಂಚೆ ಸ್ವ-ಘೋಷಣೆ ಹೊರಡಿಸಬೇಕು. ಆ ಬಳಿಕವಷ್ಟೇ ಚಾನೆಲ್‌ಗಳಲ್ಲಿ ಜಾಹೀರಾತು ಪ್ರಸಾರಕ್ಕೆ ಅವಕಾಶ ಕಲ್ಪಿಸಬೇಕು. ಈ ಸ್ವ-ಘೋಷಣೆಗಳನ್ನು ಸರ್ಕಾರದ ಪ್ರಸಾರ ಸೇವಾ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಮುದ್ರಣ ಮಾಧ್ಯಮಕ್ಕೂ ಇದೇ ರೀತಿ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು” ಎಂದು ಹೇಳಿದೆ.
ತಾವು ಖರೀದಿಸುವ ಉತ್ಪನ್ನಗಳ ಬಗ್ಗೆ, ವಿಶೇಷವಾಗಿ ಆಹಾರ ಉತ್ಪನ್ನಗಳ ಕುರಿತು ಗ್ರಾಹಕರಿಗೆ ಸಂಪೂರ್ಣ ಅರಿವು ಇರಬೇಕು. ಶಾಸನಾತ್ಮಕ ನಿಬಂಧನೆಗಳಿರುವುದು ಗ್ರಾಹಕರ ಸೇವೆಗೋಸ್ಕರ ಎಂದು ಪೀಠ ಅಭಿಪ್ರಾಯಪಟ್ಟಿತು. ಪತಂಜಲಿಯ ಕೆಲವು ಉತ್ಪನ್ನಗಳ ಮೇಲೆ ನಿಷೇಧದ ಹೊರತಾಗಿಯೂ ಇನ್ನೂ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿತು.
ಸೆಲೆಬ್ರಿಟಿಗಳು ಕೂಡ ಉತ್ತರದಾಯಿಗಳು!
ಯಾವುದೇ ಗ್ರಾಹಕ ಉತ್ಪನ್ನಗಳಿಗೆ ಜಾಹೀರಾತು ನೀಡುವ ಸೆಲೆಬ್ರಿಟಿಗಳು, ಪ್ರಭಾವಿಗಳು, ಸಾರ್ವಜನಿಕ ವ್ಯಕ್ತಿಗಳು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ವರ್ತಿಸಬೇಕು ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.