Advertisement

ಪತಂಜಲಿ ಬಿಎಸ್ಸೆನ್ನೆಲ್‌ ಪ್ಲಾನ್‌ ಬಿಡುಗಡೆ

12:06 PM Jul 23, 2018 | |

ಬೆಂಗಳೂರು: ರಾಜ್ಯದಲ್ಲಿರುವ ಪತಂಜಲಿ ಸಮೂಹದ ಸದಸ್ಯರಿಗೆಂದೇ ಭಾರತ್‌ ಸಂಚಾರ ನಿಗಮದ (ಬಿಎಸ್‌ಎನ್‌ಎಲ್‌) ಕರ್ನಾಟಕ ವೃತ್ತವು “ಪತಂಜಲಿ ಬಿಎಸ್‌ಎನ್‌ಎಲ್‌ ಪ್ಲಾನ್‌’ ಎಂಬ ವಿಶೇಷ ಪ್ರಿಪೇಯ್ಡ ಪ್ಲಾನ್‌ ಒಂದನ್ನು ಬಿಡುಗಡೆ ಮಾಡಿದೆ.

Advertisement

ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಯೋಗ ಗುರು ಬಾಬಾ ರಾಮ್‌ದೇವ್‌ ಹಾಗೂ ಬಿಎಸ್‌ಎನ್‌ಎಲ್‌ ಕರ್ನಾಟಕ ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ಆರ್‌.ಮಣಿ ಅವರು ಹೊಸ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದರು.

ಬಾಬಾ ರಾಮ್‌ದೇವ್‌ ಮಾತನಾಡಿ, ಬಿಎಸ್‌ಎನ್‌ಎಲ್‌ ದೇಶಾದ್ಯಂತ ಉತ್ತಮ ಟೆಲಿಕಾಂ ಜಾಲ ಹೊಂದಿದೆ. ಅದರಲ್ಲೂ ಪ್ರಾದೇಶಿಕ ಮಟ್ಟದಲ್ಲಿ ಉತ್ತಮ ನೆಟ್‌ವರ್ಕ್‌ ಸೌಲಭ್ಯ ಹೊಂದಿದೆ. ಹಾಗಾಗಿ ಸಂಸ್ಥೆಯ ಎಲ್ಲ ಸದಸ್ಯರು, ಕಾರ್ಯಕರ್ತರು ಬಿಎಸ್‌ಎನ್‌ಎಲ್‌ ಸೇವೆ ಬಳಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.

ಪೂರ್ಣ ಪ್ರಮಾಣದ ಎರಡು ಸ್ವದೇಶಿ ಕಂಪನಿಗಳು ದೇಶದಲ್ಲಿ ನಿಸ್ವಾರ್ಥ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಅದೇ ಕಾರ್ಯದ ಭಾಗವಾಗಿ ಒಂದುಗೂಡಿವೆ. ರಾಜ್ಯದಲ್ಲಿರುವ ಪತಂಜಲಿ ಮಳಿಗೆ, ಕೇಂದ್ರಗಳ ಸದಸ್ಯರಿಗೆ ಬೇಡಿಕೆಗೆ ಅನುಗುಣವಾಗಿ ಸಿಮ್‌ಗಳನ್ನು ತಲುಪಿಸಲಾಗುವುದು ಎಂದು ಬಿಎಸ್‌ಎನ್‌ಎಲ್‌ ಮುಖ್ಯ ಪ್ರಧಾನ ವ್ಯವಸ್ಥಾಪಕ ಆರ್‌.ಮಣಿ ಹೇಳಿದರು.

ಬಿಎಸ್‌ಎನ್‌ಎಲ್‌ “ಕಾಮನ್‌ ಯೂಸೇಜ್‌ ಗ್ರೂಪ್‌’ ಯೋಜನೆಯಡಿ ನೂರಾರು, ಸಾವಿರಾರು ಮಂದಿಯನ್ನು ಒಳಗೊಂಡ ಸಮೂಹಗಳಿಗೆ ವಿಶೇಷ ಪ್ಲಾನ್‌ ರೂಪಿಸಿ ನೀಡುತ್ತಿದೆ. ಅದರಂತೆ ಪತಂಜಲಿ ಸಂಸ್ಥೆಗೆಂದೇ “ಪ್ಯಾನ್‌ ಭಾರತ್‌’ ಯೋಜನೆಯನ್ನು ಕಳೆದ ಮೇ ತಿಂಗಳಲ್ಲಿ ಹರಿದ್ವಾರದಲ್ಲಿ ಆರಂಭಿಸಲಾಗಿತ್ತು.

Advertisement

ಮಹಾರಾಷ್ಟ್ರ, ಕೇರಳದಲ್ಲೂ ಆರಂಭವಾಗಿದೆ. ಪತಂಜಲಿ ಸಂಸ್ಥೆಯಡಿ ರಾಜ್ಯದಲ್ಲಿರುವ ಸದಸ್ಯರಿಗಾಗಿ ನಿಗಮದ ಕರ್ನಾಟಕದ ವೃತ್ತದಿಂದ “ಪತಂಜಲಿ ಬಿಎಸ್‌ಎನ್‌ಎಲ್‌ ಪ್ಲಾನ್‌’ ರೂಪಿಸಲಾಗಿದೆ ಎಂದು ಬಿಎಸ್‌ಎನ್‌ಎಲ್‌ ಉಪ ಪ್ರಧಾನ ವ್ಯವಸ್ಥಾಪಕ (ಮಾರಾಟ ಮತ್ತು ಮಾರ್ಕೆಟಿಂಗ್‌) ಹೇಮಾದ್ರಿ ಹೇಳಿದರು.

ಪತಂಜಲಿ ಸಮೂಹದಡಿ ರಾಜ್ಯದಲ್ಲಿ 27,000ಕ್ಕೂ ಹೆಚ್ಚು ಮಳಿಗೆ, ಕೇಂದ್ರಗಳಿವೆ ಎಂಬ ಮಾಹಿತಿ ಇದೆ. ಸದಸ್ಯತ್ವ ಗುರುತಿನ ಚೀಟಿ ಆಧರಿಸಿ ಒಬ್ಬರಿಗೆ ಒಂದು ಸಿಮ್‌ ನೀಡಲಾಗುತ್ತದೆ. ಅಪರಿಮಿತ ಉಚಿತ ಕರೆ, ದೇಶಾದ್ಯಂತ ಉಚಿತ ರೋಮಿಂಗ್‌ ಸೌಲಭ್ಯ, ನಿತ್ಯ 2 ಜಿಬಿ ಡೇಟಾ, ನಿತ್ಯ 100 ಉಚಿತ ಎಸ್‌ಎಂಎಸ್‌ ಹಾಗೂ ಉಚಿತ ಪತಂಜಲಿ ಪಿಆರ್‌ಬಿಟಿ ಸೌಲಭ್ಯವಿರಲಿದೆ. ಸದ್ಯ ಮಾರುಕಟ್ಟೆಯಲ್ಲಿ ಅತಿ ಮಿತವ್ಯಯದ ಪ್ಲಾನ್‌ ಇದಾಗಿದೆ ಎಂದು ತಿಳಿಸಿದರು.

ಬಿಎಸ್‌ಎನ್‌ಎಲ್‌ ಬೆಂಗಳೂರು ಟೆಲಿಕಾಂ ಜಿಲ್ಲೆಯ ಪ್ರಿನ್ಸಿಪಲ್‌ ಜನರಲ್‌ ಮ್ಯಾನೇಜರ್‌ ಜನಾರ್ಧನ ರಾವ್‌, ಪ್ರಧಾನ ವ್ಯವಸ್ಥಾಪಕ (ಮಾರಾಟ ಮತ್ತು ಮಾರ್ಕೆಟಿಂಗ್‌) ಸುರೇಂದ್ರನ್‌, ಕರ್ನಾಟಕ ವೃತ್ತದ ಪ್ರಧಾನ ವ್ಯವಸ್ಥಾಪಕ (ಮಾರಾಟ ಮತ್ತು ಮಾರ್ಕೆಟಿಂಗ್‌) ವಿವೇಕ್‌ ಜೈಸ್ವಾಲ್‌, ಪ್ರಧಾನ ವ್ಯವಸ್ಥಾಪಕ (ಮೊಬೈಲ್‌ ಸರ್ವಿಸ್‌) ಬಿ.ವೆಂಕಟೇಶ್ವರಲು, ಭಾರತ್‌ ಸ್ವಾಭಿಮಾನ್‌ ನ್ಯಾಸ್‌ ಕರ್ನಾಟಕ ಮುಖ್ಯಸ್ಥ ಶಾಂತಿಲಾಲ್‌ ಜೈನ್‌, ಪ್ರಮುಖರಾದ ಜೈದೀಪ್‌ ಆರ್ಯ, ಮಂಜುನಾಥ್‌ ಇತರರು ಉಪಸ್ಥಿತರಿದ್ದರು.

ಯಾರಿಗೆಲ್ಲಾ ವಿಶೇಷ ಪ್ಲಾನ್‌ ಅನ್ವಯ: ಪತಂಜಲಿ ಸಂಸ್ಥೆಯ ಭಾರತ್‌ ಸ್ವಾಭಿಮಾನ್‌ ನ್ಯಾಸ್‌ (ಟ್ರಸ್ಟ್‌) ಸದಸ್ಯರು, ಪತಂಜಲಿ ಯೋಗ ಸಮಿತಿ, ಮಹಿಳಾ ಪತಂಜಲಿ, ಯುವ ಭಾರತ್‌, ಪತಂಜಲಿ ಕಿಸಾನ್‌ ಸೇವಾ ಸದಸ್ಯರು, ಸ್ವದೇಶಿ ಸಮೃದ್ಧಿ ಕಾರ್ಡ್‌ ಹೊಂದಿರುವವರು ಈ ಪ್ಲಾನ್‌ಗಳನ್ನು ಪಡೆಯಬಹುದು.

ಪತಂಜಲಿ ಸಂಸ್ಥೆಗಳ ಉದ್ಯೋಗಿಗಳು ತಮ್ಮ ಗುರುತಿನ ಚೀಟಿ ಆಧಾರದ ಮೇಲೆ ಸಿಮ್‌ ಪಡೆಯಬಹುದು. ಸದಸ್ಯರು ಈಗಾಗಲೇ ಬಳಸುತ್ತಿರುವ ಮೊಬೈಲ್‌ ಸಂಖ್ಯೆಯನ್ನೇ ಬಿಎಸ್‌ಎನ್‌ಎಲ್‌ನ ಹೊಸ ಪ್ಲಾನ್‌ಗೆ ಪೋರ್ಟ್‌ ಮಾಡಿಕೊಳ್ಳಲು ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next