ಹೊಸದಿಲ್ಲಿ: ಯೋಗ ಗುರು ರಾಮದೇವ್ ಅವರು ತುಂಬಾ ಪ್ರಭಾವ ಹೊಂದಿದ್ದು, ಆದರೆ ಅವರು ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪತಂಜಲಿ ಆಯುರ್ವೇದ ಮತ್ತು ಅದರ ಸ್ಥಾಪಕರಾದ ಬಾಬಾ ರಾಮದೇವ್ ಮತ್ತು ಬಾಲಕೃಷ್ಣ ವಿರುದ್ಧದ ದಾರಿತಪ್ಪಿಸುವ ಜಾಹೀರಾತು ಪ್ರಕರಣದ ವಿಚಾರಣೆ ನಡೆಸುವ ವೇಳೆ ಸುಪ್ರೀಂ ಪೀಠವು ಈ ಅಭಿಪ್ರಾಯಪಟ್ಟಿದೆ.
ಇಂದಿನ ವಿಚಾರಣೆಯ ಆರಂಭದಲ್ಲಿ, ಹಿರಿಯ ವಕೀಲ ಬಲ್ಬೀರ್ ಸಿಂಗ್ ಅವರು ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಎ ಅಮಾನುಲ್ಲಾ ಅವರ ಪೀಠಕ್ಕೆ ಪತಂಜಲಿ ಸಂಸ್ಥೆಯು ತನ್ನ ಜಾಹೀರಾತುಗಳು ಇನ್ನೂ ಚಾಲನೆಯಲ್ಲಿರುವ ಟಿವಿ ಚಾನೆಲ್‌ಗಳಿಗೆ ಪತ್ರ ಬರೆದಿದೆ, ಪ್ರಶ್ನೆಯಲ್ಲಿರುವ ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಿದೆ ಎಂದು ಹೇಳಿದರು.
ಈ ಉತ್ಪನ್ನಗಳ ದಾಸ್ತಾನುಗಳ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯವು ಪತಂಜಲಿಯನ್ನು ಕೇಳಿದೆ. ಸದ್ಯಕ್ಕೆ ನ್ಯಾಯಾಲಯಕ್ಕೆ ಹಾಜರಾಗುವುದನ್ನು ಕೈ ಬಿಡುವಂತೆ ರಾಮದೇವ್ ಮತ್ತು ಬಾಲಕೃಷ್ಣ ಅವರ ಮನವಿಯನ್ನು ನ್ಯಾಯಾಲಯ ಒಪ್ಪಿಕೊಂಡಿದೆ.
“ರಾಮದೇವ್ ಅವರು ತುಂಬಾ ಪ್ರಭಾವ ಹೊಂದಿದ್ದಾರೆ, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು” ಎಂದು ಪೀಠ ಹೇಳಿತು. ಸಾಲಿಟರಿ ಜನರಲ್ ತುಷಾರ್ ಮೆಹ್ತಾ ಅವರು, “ರಾಮದೇವ್ ಅವರು ಯೋಗ ಕ್ಷೇತ್ರದಲ್ಲಿ ತುಂಬಾ ಕೆಲಸ ಮಾಡಿದ್ದಾರೆ” ಎಂದರು. ಆಗ ನ್ಯಾ.ಹಿಮಾ ಕೊಹ್ಲಿ ಅವರು, ‘ಅವರು ಯೋಗ ಕ್ಷೇತ್ರಕ್ಕೆ ಏನು ಮಾಡಿದ್ದರೆ ಅದು ಒಳ್ಳೆಯದು ; ಆದರೆ ಪತಂಜಲಿ ಉತ್ಪನ್ನಗಳ ವಿಚಾರ ಬೇರೆಯದು” ಎಂದರು.
ರಾಮದೇವ್ ಮತ್ತು ಬಾಲಕೃಷ್ಣ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 9 ರಂದು ನಡೆಯಲಿದೆ.