ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಗೆ ಈಗಿನ್ನು ಕೇವಲು ನಾಲ್ಕು – ಐದು ತಿಂಗಳು ಮಾತ್ರವೇ ಬಾಕಿ ಉಳಿದಿವೆ. ಈ ನಡುವೆ ಬಿಜೆಪಿ ಜತೆಗೆ ಸೀಟು ಹಂಚಿಕೊಳ್ಳುವ ವಿಷಯದಲ್ಲಿ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಮತು ಅವರ ಪುತ್ರ ಚಿರಾಗ್ ಪಾಸ್ವಾನ್ ಇಂದು ಶುಕ್ರವಾರ ಮಧ್ಯಾಹ್ನ ಕೇಂದ್ರ ಹಣಕಾಸು ಸಚಿವ ಅರುಣ್ ಜೇತ್ಲಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಎನ್‌ಡಿಎ ಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಚಿರಾಗ್ ಪಾಸ್ವಾನ್ ಸುಳಿವು ಕೊಟ್ಟಿರುವ ನಡುವೆಯೇ ಇಂದಿನ ನಡೆಯುವ ಸೀಟು ಹಂಚಿಕೆ ಮಾತುಕತೆ ಕುತೂಹಲ ಕೆರಳಿಸಿದೆ.
ಎನ್‌ಡಿಎ ಮಿತ್ರಪಕ್ಷವಾಗಿದ್ದ ಉಪೇಂದ್ರ ಕುಶ್ವಾಹ ನೇತೃತ್ವದ ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಸ್‌ಪ) ಸೀಟು ಹಂಚಿಕೆ ವಿಷಯದಲ್ಲಿ ಅಸಮಾಧಾನ ಗೊಂಡು ಈಗಾಗಲೇ ಬಿಹಾರದಲ್ಲಿನ ಯುಪಿಎ ತೆಕ್ಕೆಯನ್ನುಸೇರಿಕೊಂಡಿದೆ.
ಪಾಸ್ವಾನ್ ಮತ್ತು ಅವರ ಪುತ್ರ ಚಿರಾಗ್ ನಿನ್ನೆ ಗುರುವಾರವೇ ಸೀಟು ಹಂಚಿಕೆ ಸಂಬಂಧ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಹೊಸದಿಲ್ಲಿಯಲ್ಲಿ ಭೇಟಿಯಾಗಿದ್ದಾರೆ.
ಚಿರಾಗ್ ಪಾಸ್ವಾನ್ ಅವರು ಮಾಧ್ಯಮ ದೊಂದಿಗೆ ಮಾತನಾಡುತ್ತಾ, ಬಿಜೆಪಿ ರಾಮ ಮಂದಿರದಂತಹ ವಿಷಯದ ಕಡೆಗೆ ವಾಲಿದ್ದು ಅದೀಗ ಅಭಿವೃದ್ಧಿ ಸಾಧನೆಯಂಹ ನೈಜ ವಿಷಯಗಳೆಡೆಗೆ ಮರಳಬೇಕಾಗಿದೆ ಎಂದು ಹೇಳಿದ್ದಾರೆ.
ಈ ನಡುವೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಅವರು ಪಾಸ್ವಾನ್ ನೇತೃತ್ವದ ಎಲ್‌ಜೆಪಿ ಯನ್ನು ಯುಪಿಎ ತೆಕ್ಕೆಗೆ ತೆಗೆದುಕೊಳ್ಳುವ ಸುಳಿವು ನೀಡಿದ್ದಾರೆ.