Advertisement

ಪಶುಗಳಿಗೂ “ಆಧಾರ್‌’ಮಾದರಿ ವಿಶಿಷ್ಟ ಗುರುತಿನ ಇಯರ್‌ ಟ್ಯಾಗ್‌

03:45 AM Feb 04, 2017 | |

ಬೀದರ: ದೇಶವಾಸಿಗಳಿಗೆ ಆಧಾರ್‌ ಸಂಖ್ಯೆ ನೀಡುವಂತೆ ಜಾನುವಾರುಗಳಿಗೂ ವಿಶಿಷ್ಟ ಗುರುತಿನ ಬಿಲ್ಲೆಗಳನ್ನು (ಇಯರ್‌ ಟ್ಯಾಗ್‌) ಅಳವಡಿಸುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗೆ ಬೀದರ ಸೇರಿ ರಾಜ್ಯಾದ್ಯಂತ ಚಾಲನೆ ದೊರೆತಿದೆ. ಜಾನುವಾರುಗಳ ಪೋಷಣೆ ಮತ್ತು ಹಾಲು ಉತ್ಪಾದನೆ ಹೆಚ್ಚಿಸಲು ಅನುಕೂಲವಾಗುವಂತೆ ವಿಶೇಷ ತಂತ್ರಜ್ಞಾನವುಳ್ಳ ಬಿಲ್ಲೆ ಹಾಕಲಾಗುತ್ತಿದೆ.

Advertisement

ದೇಶವಾಸಿಗಳಿಗೆ ಆಧಾರ್‌ ಸಂಖ್ಯೆ ಉಪಯುಕ್ತ ಮತ್ತು ಉತ್ಕೃಷ್ಟ ದಾಖಲೆಯ ಗುರುತಿನ ಚೀಟಿಯಾಗಿ ಬಳಕೆಯಾಗುತ್ತಿದೆ. ಈ ಆಧಾರ ಮಾದರಿಯಲ್ಲೇ ಹಸು ಮತ್ತು ಎಮ್ಮೆಗಳಿಗೂ ಗುರುತಿನ ಸಂಖ್ಯೆಯುಳ್ಳ ಟ್ಯಾಗ್‌ ಅಳವಡಿಸಲಾಗುತ್ತಿದೆ. ಕಾಲಕಾಲಕ್ಕೆ ಚುಚ್ಚುಮದ್ದು ಸಿಗುತ್ತದೆಯೇ ಎಂಬ ಮಾಹಿತಿ ಸಂಗ್ರಹಿಸುವುದು, ಉತ್ತಮ ಸಂತಾನ ಕ್ರಿಯೆ, ರಾಸುಗಳ ಆರೋಗ್ಯದ ಮೇಲೆ ನಿಗಾ ಇಡುವುದು, ಹಾಲು ಉತ್ಪಾದನೆ ಹೆಚ್ಚಳ ಜತೆಗೆ ಪಶುಗಳ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುವುದು ಯೋಜನೆಯ ಉದ್ದೇಶವಾಗಿದೆ.

ಇಯರ್‌ ಟ್ಯಾಗ್‌ ಅಳವಡಿಕೆ ಪ್ರಯೋಗದಲ್ಲಿ ಗುಜರಾತ್‌ ಯಶಸ್ಸು ಪಡೆದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಮಾದರಿಯನ್ನು ದೇಶದಲ್ಲೆಡೆ ವಿಸ್ತರಿಸಿದೆ. ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ)ಅಡಿ ಇನಾಫ್‌ (ಇನಾ#ಧಿರ್ಮೇಶನ್‌ ನೆಟ್‌ವರ್ಕ್‌ ಫಾರ್‌ ಎನಿಮಲ್‌ ಪ್ರೊಡಕ್ಟಿವಿಟಿ ಆ್ಯಂಡ್‌ ಹೆಲ್ತ್‌) ಎಂಬ ಸಾಫ್ಟ್ವೇರ್‌ ಸಿದ್ಧಪಡಿಸಿದ್ದು, ಈ ಮೂಲಕ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ದೀರ್ಘ‌ಕಾಲ ಬಳಕೆಗೆ ಬರುವ ಗುಣಮಟ್ಟದ ಟ್ಯಾಗ್‌ಗಳು ಇದಾಗಿದೆ. ಅದರಲ್ಲಿ ಬಾರ್‌ ಕೋಡ್‌ ಸೌಲಭ್ಯವನ್ನೂ ಅಳವಡಿಸಲಾಗಿದೆ.

ಡಾಟಾಬೇಸ್‌ಗೆ ಸಹಕಾರಿ:
ಒಮ್ಮೆ ಜಾನುವಾರುಗಳ ಕಿವಿಗೆ ಟ್ಯಾಗ್‌ ಹಾಕಿದ ಬಳಿಕ ಅದರ 12 ಅಂಕೆಗಳ ಗುರುತಿನ ಸಂಖ್ಯೆಯನ್ನು ಅಂತರ್ಜಾಲದ ಡಾಟಾ ಬೇಸ್‌ನಲ್ಲಿ ನಮೂದಿಸಲಾಗುತ್ತದೆ. ದತ್ತಾಂಶ ಸಂಗ್ರಹಕ್ಕಾಗಿ ವಿಶಿಷ್ಟ ಸಂಖ್ಯೆಯನ್ನು ಜಾನುವಾರು ಮಾಲೀಕರಿಗೆ ನೀಡಿ, ಆ ದತ್ತಾಂಶದಲ್ಲಿ ಮಾಲೀಕನ ಹೆಸರು, ರಾಸು ತಳಿ, ಸಂತಾನೋತ್ಪತ್ತಿ ಮತ್ತು ಹಾಕಿಸಲಾದ ಲಸಿಕೆ ವಿವರಗಳನ್ನು ದಾಖಲಿಸಲಾಗುತ್ತದೆ.

ಮಾಲಿಕರು ಕೋಡ್‌ ಮೂಲಕ ದತ್ತಾಂಶಗಳನ್ನು ಪರಿಶೀಲಿಸಿ ಸಕಾಲಕ್ಕೆ ಔಷಧ ಕೊಟ್ಟು ಪಶುಗಳ ಆರೋಗ್ಯ ಕಾಪಾಡಬಹುದು. ಮತ್ತು ನಿಗದಿತ ಪ್ರಮಾಣದ ಆಹಾರ ಕೊಡಲು ಸುಲಭವಾಗಲಿದೆ. ಅಷ್ಟೇ ಅಲ್ಲ, ಟ್ಯಾಗ್‌ಗಳ ಮೂಲಕ ಜಾನುವಾರುಗಳ ಇರುವಿಕೆ ಸ್ಥಳ ಪತ್ತೆ ಹಚ್ಚಬಹುದು.

Advertisement

26 ಲಕ್ಷ ಟ್ಯಾಗ್‌:
ದೇಶದಲ್ಲಿ ಗುಜರಾತ್‌ ನಂತರ ಅಧಿಧಿಕ ಪ್ರಮಾಣದ ಹಾಲು ಉತ್ಪಾದನೆ ಆಗುವುದು ಕರ್ನಾಟಕದಲ್ಲಿ. ಸದ್ಯ ಇಯರ್‌ ಟ್ಯಾಗ್‌ ಅಳವಡಿಕೆ ಅನುಷ್ಠಾನ ವೇಗದಿಂದ ನಡೆದಿದೆ. ಸದ್ಯ ಹಾಲು ನೀಡುವ ಜಾನುವಾರುಗಳಿಗೆ ಮಾತ್ರ ಈ ಟ್ಯಾಗ್‌ ಹಾಕಲಾಗುತ್ತಿದೆ. ಬೀದರನಲ್ಲಿ 1 ಲಕ್ಷ ಸೇರಿ ಕರ್ನಾಟಕದಲ್ಲಿ 1.35 ಕೋಟಿ ಜಾನುವಾರುಗಳಿದ್ದು, ರಾಜ್ಯಕ್ಕೆ 26 ಲಕ್ಷ ಟ್ಯಾಗ್‌ಗಳು ಬಂದಿವೆ. ಬೀದರ ಜಿಲ್ಲೆಗೂ 50 ಸಾವಿರ ಟ್ಯಾಗ್‌ಗಳು ಸರಬರಾಜಾಗಿದ್ದು ಅಳವಡಿಸುವ ಕೆಲಸ ಶುರುವಾಗಿದೆ.

ಮೈತ್ರಿ ಕಾರ್ಯಕರ್ತರ ಬಳಕೆ:
ಇಯರ್‌ ಟ್ಯಾಗ್‌ ಜೋಡಿಸಲು ಮೈತ್ರಿ ಕಾರ್ಯಕರ್ತರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಅವರಿಗೆ ತರಬೇತಿಯನ್ನೂ ಕೊಡಲಾಗಿದೆ. ಅವರು ನೇರವಾಗಿ ಜಾನುವಾರು ಮಾಲೀಕರ ಬಳಿ ತೆರಳಿ ಮಾಹಿತಿ ಸಂಗ್ರಹಿಸಿ ದತ್ತಾಂಶದೊಂದಿಗೆ ಜೋಡಿಸಲಿದ್ದಾರೆ. ಈ ಕಾರ್ಯಕರ್ತರಿಗೆ ಶೀಘ್ರದಲ್ಲಿ ಆ್ಯಂಡ್ರಾಯ್ಡ ಮೊಬೈಲ್‌ಗ‌ಳನ್ನೂ ನೀಡಲಾಗುತ್ತಿದೆ. ಯೋಜನೆ ಅನುಷ್ಠಾನದ ತರಬೇತಿಗಾಗಿ ರಾಜ್ಯದ 10 ಜನ ಪಶು ಇಲಾಖೆ ಉಪ ನಿರ್ದೇಶಕರು ಮೂರು ದಿನದಿಂದ ಗುಜರಾತ್‌ಗೆ ತೆರಳಿದ್ದಾರೆ.

ಜಾನುವಾರುಗಳ ಆರೋಗ್ಯ ಪೋಷಣೆ ಮತ್ತು ಹಾಲು ಉತ್ಪಾದನೆ ಹೆಚ್ಚಿಸುವ ದಿಸೆಯಲ್ಲಿ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ ಅಡಿಯಲ್ಲಿ ಹಾಲು ನೀಡುವ ಜಾನುವಾರುಗಳಿಗೆ “ಆಧಾರ್‌’ ರೀತಿ ವಿಶಿಷ್ಟ ಗುರುತಿನ ಸಂಖ್ಯೆಯುಳ್ಳ ಬಿಲ್ಲೆಗಳನ್ನು (ಇಯರ್‌ ಟ್ಯಾಗ್‌) ಅಳವಡಿಸಲಾಗುತ್ತಿದೆ. ರಾಜ್ಯದಲ್ಲಿ ಅನುಷ್ಠಾನ ಚುರುಕಾಗಿ ನಡೆಯುತ್ತಿದ್ದು, ಈಗಾಗಲೇ 26 ಲಕ್ಷ ಟ್ಯಾಗ್‌ಗಳು ಬಂದಿದೆ. ಅದರಲ್ಲಿ ಐದಾರು ಲಕ್ಷ ಟ್ಯಾಗ್‌ಗಳ ಜೋಡಣೆ ಮಾಡಲಾಗಿದೆ. 2 ವರ್ಷದಲ್ಲಿ ಟ್ಯಾಗ್‌ ಜೋಡಣೆ ಪೂರ್ಣಗೊಳಿಸಲಾಗುವುದು.
    – ಡಾ| ಎಂ.ಟಿ. ಮಂಜುನಾಥ, ಅಪರ ನಿರ್ದೇಶಕರು (ಜಾನುವಾರು ಸಂಪನ್ಮೂಲ)

– ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next