ಕಬಕ : ಕಬಕ ಜಂಕ್ಷನ್‌ನಲ್ಲಿ ವೃತ್ತವಿಲ್ಲದೆ ವಾಹನ ಸವಾರರು ಪರದಾಡುವಂತಾಗಿದೆ. ಪುತ್ತೂರು ಭಾಗದಿಂದ ಮಂಗಳೂರು, ವಿಟ್ಲ – ಕಾಸರಗೋಡು ಕಡೆಗೆ ತೆರಳುವ ವಾಹನಗಳು, ವಿಟ್ಲ ಕಡೆಯಿಂದ ಪುತ್ತೂರು ಅಥವಾ ಮಂಗಳೂರಿಗೆ ತೆರಳಬೇಕಾದ ವಾಹನಗಳು ಕಬಕ ಜಂಕ್ಷನ್‌ನಲ್ಲಿ ರಸ್ತೆಯನ್ನು ನಿರ್ಧರಿಸಿ ಮುಂದುವರಿಯುತ್ತವೆ. ಕೊಡಿ ಪ್ಪಾಡಿ ಕಡೆಯಿಂದ ಬರುವ ಜಿ.ಪಂ. ರಸ್ತೆಯೂ ಇಲ್ಲಿಯೇ ಮುಖ್ಯ ರಸ್ತೆಗೆ ಪ್ರವೇಶ ಪಡೆಯುತ್ತದೆ.
ಇಲ್ಲಿ ನಿತ್ಯ ವಾಹನ ಸಂಚಾರಕ್ಕೆ ತಡೆಯುಂಟಾಗುತ್ತಿದೆ. ಕೇರಳ ರಾಜ್ಯದ ಸಾರಿಗೆ ಬಸ್ಸು ನಿತ್ಯ ಪುತ್ತೂರು- ಕಾಸರಗೋಡು ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದು, ಹೊಸ ಚಾಲಕರಿದ್ದಾಗ ಕಬಕ ಜಂಕ್ಷನ್‌ನಿಂದ ಮಂಗಳೂರು ಕಡೆಗೆ ಚಲಾಯಿಸುತ್ತಾರೆ. ಪ್ರಯಾಣಿಕರು ಗಲಿಬಿಲಿಯಿಂದ ವಿಚಾರಿಸಿದರೆ, ಹಿಂದಿರುಗಿ ವಿಟ್ಲ ರಸ್ತೆ ಹಿಡಿಯುತ್ತಾರೆ. ಇಂತಹ ಘಟನೆಗಳು ಇಲ್ಲಿ ಸಾಮಾನ್ಯ. ವಾಹನಗಳೂ ರಸ್ತೆ ತಪ್ಪಿ ಚಲಿಸುತ್ತಿವೆ. ದಾರಿ ತಪ್ಪಿತೆಂದು ಗೊತ್ತಾದಾಗ ಗಕ್ಕನೆ ನಿಲ್ಲಿಸಿ, ಅವಘಡ ಮೈಮೇಲೆ ಎಳೆದುಕೊಳ್ಳುತ್ತಾರೆ.
ಈ ಹಿಂದೆ ಇಲ್ಲೊಂದು ವೃತ್ತವಿತ್ತು. ಮಾಣಿ-ಮೈಸೂರು ಹೆದ್ದಾರಿ ಅಭಿವೃದ್ಧಿಯ ನೆಪದಲ್ಲಿ ಅದನ್ನು ತೆರವುಗೊಳಿಸಬೇಕಾಗಿದೆ. ಆನಂತರ ಇಲ್ಲಿ ಯಾವುದೇ ರಸ್ತೆ ವಿಭಾಜಕ, ಸೂಚನೆಯಾಗಲೀ, ವೃತ್ತವಾಗಲೀ ಸ್ಥಾಪನೆಗೊಂಡಿಲ್ಲ. ಎಲ್ಲ ಕಡೆಗಳಿಂದಲೂ ವಾಹನಗಳು ನುಗ್ಗುವುದರಿಂದ ಈ ಸ್ಥಳದಲ್ಲಿ ಶಾಲೆ ಮಕ್ಕಳು ರಸ್ತೆ ದಾಟುವುದು ಕಷ್ಟ. ಸರ್ಕಲ್ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಕಬಕ ಗ್ರಾಮಸಭೆಯಲ್ಲಿ ಐದು ವರ್ಷಗಳಿಂದ ಬೇಡಿಕೆ ಸಲ್ಲಿಸುತಲೇ ಇದ್ದಾರೆ. ಪಂಚಾಯತ್‌ನಿಂದ ಇಲಾಖೆಗೆ ಜನರ ಬೇಡಿಕೆ ಪಟ್ಟಿ ರವಾನೆಯಾಗುತ್ತದೆಯೇ ಹೊರತು ಅಧಿಕಾರಿಗಳು ಅದಕ್ಕೆ ಸ್ಪಂದನೆ ನೀಡುತ್ತಿಲ್ಲ. ಇದೀಗ ರಾಷ್ಟೀಯ ಹೆದ್ದಾರಿಯಾಗಿ ಭಡ್ತಿ ಹೊಂದಿದ ಮಾಣಿ- ಮೈಸೂರು ರಸ್ತೆಯಲ್ಲಿ ದಿನ ನಿತ್ಯ ವಾಹನ ದಟ್ಟಣೆ ಇರುತ್ತದೆ. ಹಲವು ಚಾಲಕರು ಇಲ್ಲಿ ನಿಲ್ಲಿಸಿ, ಸ್ಥಳೀಯರಲ್ಲಿ ದಾರಿ ಕೇಳಿಯೇ ಮುಂದುವರಿಯುತ್ತಾರೆ.
ಅಗತ್ಯವಿರುವಲ್ಲಿ ವೃತ್ತ
ಕಬಕದಲ್ಲಿ ಸರ್ಕಲ್ ಇಲ್ಲದೆ ಸಮಸ್ಯೆಯಾಗುತ್ತಿರುವ ಬಗ್ಗೆ ಅರಿವಿದೆ. ಮಾಣಿ – ಮೈಸೂರು ರಸ್ತೆ ಇನ್ನೂ ಕೆಆರ್ ಡಿಸಿಎಲ್‌ನಿಂದ ನಮ್ಮ ಇಲಾಖೆಗೆ ಹಸ್ತಾಂತರ ಗೊಂಡಿಲ್ಲ. ಕೆಲವು ಚಿಕ್ಕ ಕೆಲಸಗಳನ್ನು ಅವರೇ ನಿರ್ವಹಿಸಿದ ಮೇಲೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಈ ರಸ್ತೆ ಹಸ್ತಾಂತರವಾಗಲಿದೆ. ಸಂಪಾಜೆ ವರೆಗಿನ ರಸ್ತೆಯನ್ನು 10 ಮೀಟರ್ ಗೆ ವಿಸ್ತರಣೆ ಮಾಡುವ ಕಾಮಗಾರಿ ಮಾಡಲಾಗುವುದು.
– ನಾಗರಾಜ್ ಬಿ.ಆರ್.,
ರಾ.ಹೆ.ಮಂಗಳೂರು ಉಪ ವಿಭಾಗದ ಎಂಜಿನಿಯರ್
ಉಮ್ಮರ್ ಜಿ. ಕಬಕ