ಬೀಜಿಂಗ್: ಕಳೆದ ಒಂದು ಸಾವಿರ ವರ್ಷಗಳಲ್ಲಿಯೇ ಕಂಡು ಕೇಳರಿಯದಂತಹ ಮಳೆಯ ಅಬ್ಬರಕ್ಕೆ ಚೀನಾದ ಹೆನಾನ್ ಪ್ರಾಂತ್ಯದ ಝೆಂಗ್ ಝೂಹೂ ಪ್ರದೇಶ ತತ್ತರಿಸಿ ಹೋಗಿದೆ. ಭಾರೀ ಮಳೆ ಪ್ರವಾಹದಿಂದ 12 ಮಂದಿ ಸಾವನ್ನಪ್ಪಿದ್ದು, ಜನಜೀವನ ಅಸ್ತವ್ಯಸ್ತಗೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸ್ಟಾರ್ಕ್, ಹ್ಯಾಜಲ್ ವುಡ್ ದಾಳಿಗೆ ನಲುಗಿದ ವೆಸ್ಟ್ ಇಂಡೀಸ್: ಆಸೀಸ್ ಗೆ 133 ರನ್ ಅಂತರದ ಜಯ
ಜನಸಂಚಾರದ ಪ್ರದೇಶ ಮತ್ತು ರೈಲಿನೊಳಗೆ ಪ್ರಯಾಣಿಕರ ಎದೆಮಟ್ಟದವರೆಗೆ ನೀರು ತುಂಬಿಕೊಂಡಿದ್ದು, ಜನರು ಪರದಾಡುತ್ತಿರುವ ದೃಶ್ಯ ಸೆರೆಯಾಗಿದೆ. ಹಳದಿ ನದಿ ಪಾತ್ರದ ಸಮೀಪವಿರುವ ಝೆಂಗ್ ಝೂಹೂ ನಗರದಲ್ಲಿ 12 ಮಿಲಿಯನ್ (1.2 ಕೋಟಿ) ಜನಸಂಖ್ಯೆಯನ್ನು ಹೊಂದಿದೆ ಎಂದು ವರದಿ ತಿಳಿಸಿದೆ.
ಭಾರೀ ಪ್ರವಾಹದ ಹಿನ್ನೆಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕೃತ ಕ್ಸಿನ್ ಹುವಾ ಏಜೆನ್ಸಿ ವರದಿ ಮಾಡಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಹೆನಾನ್ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದ ಪರಿಣಾಮ ಹಳದಿ ನದಿ ಸೇರಿದಂತೆ ಇತರ ನದಿಗಳಲ್ಲಿನ ನೀರು ಅಪಾಯದ ಮಟ್ಟ ತಲುಪಿದ್ದವು ಎಂದು ವರದಿ ವಿವರಿಸಿದೆ.
ಹೆನಾನ್ ಪ್ರದೇಶದಲ್ಲಿ ಪ್ರವಾಹದಿಂದಾಗಿ ರೈಲು ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಅಲ್ಲದೇ ಹಲವಾರು ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಸಂಚಾರ ಬಂದ್ ಮಾಡಲಾಗಿದ್ದು, ವಿಮಾನ ಸೇವೆಯನ್ನು ರದ್ದುಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ರಸ್ತೆ, ಮನೆಗಳೆಲ್ಲಾ ನೀರಿನಿಂದ ಆವೃತ್ತವಾಗಿದ್ದು, ಕಾರುಗಳೆಲ್ಲಾ ನೀರಿನಲ್ಲಿ ತೇಲುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದಾಗಿ ವರದಿ ತಿಳಿಸಿದೆ. ಸೈನಿಕರು ರಕ್ಷಣಾ ಕಾರ್ಯದಲ್ಲಿ ತೊಡಗದ್ದು, ಈವರೆಗೆ ಹೆನಾನ್ ಪ್ರದೇಶದಲ್ಲಿ ಒಂದು ಕೋಟಿಗೂ ಅಧಿಕ ಜನರನ್ನು ರಕ್ಷಿಸಲಾಗಿದೆ.