Advertisement

ಸರಕು ವಾಹನಗಳಲ್ಲಿ ಪ್ರಯಾಣಿಕರ ನಿಷೇಧ

04:56 PM May 17, 2019 | Naveen |

ವಿಜಯಪುರ: ಜಿಲ್ಲೆಯಲ್ಲಿ ಸರಕು ಸಾಗಣೆ ವಾಹನಗಳಲ್ಲಿ ನಿಯಮ ಬಾಹಿರವಾಗಿ ಪ್ರಯಾಣಿಕರನ್ನು ಸಾಗಿಸುತ್ತಿರುವುದು ಕಂಡು ಬಂದಿದೆ. ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವ ವಾಹನ ಜಪ್ತಿ ಮಾಡಿ ಚಾಲಕರ ಮೇಲೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಸೂಚಿಸಿದ್ದಾರೆ.

Advertisement

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಗದಿತ ಆಸನಗಳಿಗಿಂತ ಹೆಚ್ಚಿನ ಪ್ರಮಾಣದ ಪ್ರಯಾಣಿಕರನ್ನು ತುಂಬುವುದು, ಆಟೋ, ಟಂಟಂನಂತಹ ವಾಹನಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಿಲ್ಲಲೂ ಅವಕಾಶವಿಲ್ಲದೆ ಜೋತು ಬಿದ್ದು ಪ್ರಯಾಣಿಸುವುದು, ಅಪಘಾತಕ್ಕೆ ಕಾರಣವಾಗುತ್ತದೆ. ಆದ್ದರಿಂದ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿದರು.

ಗ್ರಾಮಗಳಿಂದ ಶಾಲಾ-ಕಾಲೇಜಿಗೆ ತೆರಳುವ ಮಕ್ಕಳು ಸರ್ಕಾರಿ ಬಸ್ಸುಗಳಿಗಿಂತ ಖಾಸಗಿ ಆಟೋ, ಟೆಂಪೋಗಳನ್ನು ಹೆಚ್ಚು ಬಳಸುತ್ತಾರೆ. ಆದ್ದರಿಂದ ಶಾಲಾ ಮುಖ್ಯೋಪಾಧ್ಯಾಯರು, ಎಸ್‌ಡಿಎಂಸಿ ಸಮಿತಿ ಪ್ರಮುಖರು ಆಟೋ, ಟೆಂಪೋ ಮಾಲೀಕರಿಗೆ ಶಾಲಾ ಮಕ್ಕಳನ್ನು ತಮ್ಮ ವಾಹನಗಳಲ್ಲಿ ಕರೆದೊಯ್ಯದಂತೆ ಸೂಚನೆ ನೀಡಬೇಕು. ಗ್ರಾಪಂ ಮಟ್ಟದಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಕೆಲ ರಸ್ತೆಗಳಲ್ಲಿ ಅವೈಜ್ಞಾನಿಕ ವೇಗ ನಿಯಂತ್ರಕ ನಿರ್ಮಿಸಿದ್ದು ಅತಿಯಾದ ಎತ್ತರದ ವೇಗ ನಿಯಂತ್ರಕಗಳಿಂದಲೂ ಅಪಘಾತಗಳು ಸಂಭವಿಸಬಹುದು. ಆದ್ದರಿಂದ ಸಂಬಂಧಿಸಿದವರಿಗೆ ಸೂಚನೆ ನೀಡಿ, ವೈಜ್ಞಾನಿಕ ರೀತಿಯಲ್ಲಿ ಹಂಪ್‌ ಅಳವಡಿಸಲು ಕ್ರಮ ಕೈಗೊಳ್ಳಿ. ತಿರುವು ರಸ್ತೆಗಳಲ್ಲಿ, ಶಾಲಾ ಮಕ್ಕಳು ಹೆಚ್ಚಾಗಿ ಓಡಾಡುವ ಸ್ಥಳಗಳಲ್ಲಿ ರಸ್ತೆ ಪಕ್ಕದಲ್ಲಿ ಸೂಚನೆ ನೀಡುವ ರಸ್ತೆ ಸೂಚಕ ಅಳವಡಿಸಿ ಗ್ರಾಮೀಣ ಭಾಗದಲ್ಲಿ ಬಸ್‌ ನಿಲುಗಡೆಗೆ ಅವಕಾಶವಿರುವ ಸ್ಥಳಗಳಲ್ಲಿ ಬಸ್‌ ನಿಲ್ದಾಣಗಳ ನಿರ್ಮಾಣಕ್ಕೆ ಸ್ಥಳೀಯ ಶಾಸಕರ ನಿಯಿಂದ ಹಣ ಬಳಸಿಕೊಂಡು ಬಸ್‌ ನಿಲ್ದಾಣ ನಿರ್ಮಿಸಿ, ಶಾಲಾ ಮಕ್ಕಳಿಗೆ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದರು.

ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಡಿ.ಆರ್‌. ಮಂಜುನಾಥ, ಡಿಡಿಪಿಐ ಸಿ.ಪ್ರಸನ್ನಕುಮಾರ, ಡಿಡಿ ಪಿಯು ಶಂಕರ ಅಮಾತೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next