ಶಿಳ್ಳೆ, ಚಪ್ಪಾಳೆಗಳ ಜೊತೆಗೆ ನಿಧಾನವಾಗಿ, ಜೋರಾದ ನಗೆಯೂ ಕಿವಿಗಪ್ಪಳಿಸಲು ಪ್ರಾರಂಭಿಸಿತು. ಸ್ವಲ್ಪ ಹೊತ್ತು ಏನೂ ತಿಳಿಯಲಿಲ್ಲ, ಹೀಗಾಗಿ, ನನ್ನ ನೃತ್ಯಕ್ಕೆ ಬರುತ್ತಿರುವ ಪ್ರತಿಕ್ರಿಯೆ ಇರಬಹುದು ಅಂದು ಕೊಂಡು ಇನ್ನೂ ಹುಮ್ಮಸ್ಸಿನಿಂದ ಕುಣಿಯಲಾರಂಭಿಸಿದೆ.
ಕಾಲೇಜು ದಿನಗಳಲ್ಲಿ ಎನ್.ಎಸ್.ಎಸ್ ಸೇವಾ ಶಿಬಿರ ನನ್ನನ್ನು ತುಂಬಾ ಪ್ರಭಾವಿಸಿ, ನನ್ನ ಜೀವನಕ್ಕೊಂದು ಹೊಸ ತಿರುವನ್ನೇ ಕೊಟ್ಟಿತು. ಪಿಯುಸಿ ಇಂದ ಡಿಗ್ರಿ ಮುಗಿಯುವವರೆಗೆ ರಾಷ್ಟ್ರಮಟ್ಟ, ಅಂತರರಾಜ್ಯ ಮಟ್ಟದ ಸುಮಾರು ಹದಿನೇಳು ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೇನೆ. ಎಲ್ಲವೂ ಚಿರಸ್ಮರಣೀಯ.
ಒಂದು ಅನುಭವವನ್ನು ನೆನೆಸಿಕೊಂಡರೆ ಈಗಲೂ ನಗೆಯುಕ್ಕಿ ಬರುತ್ತದೆ. ಅದು ನಡೆದದ್ದು ನಾನು ಪಿಯುಸಿಯಲ್ಲಿ ಓದುತ್ತಿದ್ದಾಗ. ಕಾಲೇಜಿನಿಂದ ತುಸು ದೂರವಿರುವ ಹಳ್ಳಿಯೊಂದರಲ್ಲಿ ಹತ್ತು ದಿನಗಳ ಗ್ರಾಮ ಶಿಬಿರವನ್ನು ಆಯೋಜಿಸಲಾಗಿತ್ತು. ಪ್ರತಿ ದಿನ ಸಾಯಂಕಾಲ ಶಿಬಿರಾರ್ಥಿಗಳು ಕಡ್ಡಾಯವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಬೇಕಾದ್ದರಿಂದ, ನಾಟಕಗಳನ್ನೋ, ಹಾಡನ್ನೋ, ನೃತ್ಯವನ್ನೊ, ಹಾಸ್ಯವನ್ನೋ ಸಿದ್ಧಪಡಿಸಿಕೊಂಡು, ವೇದಿಕೆಯ ಮೇಲೆ ಪ್ರಸ್ತುತಪಡಿಸಬೇಕಾಗಿತ್ತು. ಆ ದಿನ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವ ಜವಾಬ್ದಾರಿ ನಮ್ಮ ತಂಡದ್ದಾಗಿತ್ತು.
ಬೇಂದ್ರೆಯವರ “ಕುರುಡು ಕಾಂಚಾಣ’ ಹಾಡಿನಿಂದ ಅಪಾರ ಪ್ರಭಾವಿತನಾದ ನಾನು, ಆ ಹಾಡಿಗೆ ನೃತ್ಯ ಮಾಡಲು ತಯಾರಾಗಿದ್ದೆ. ಮೊದಲಿನಿಂದಲೂ ಹಾಡು, ನಟನೆ, ನೃತ್ಯದಲ್ಲಿ ತೊಡಗಿದರೆ ನನ್ನನ್ನು ನಾನೇ ಮರೆತುಬಿಡುತ್ತಿದ್ದೆ. ಅಂದೂ ಕೂಡಾ ವೇದಿಕೆ ಏರಿದೆ, ಕುರುಡು ಕಾಂಚಾಣ ಕುಣಿಯುತಲಿತ್ತು, ಕಾಲಿಗೆ ಬಿದ್ದವರ ತುಳಿಯುತಲಿತ್ತು… ಹಾಡು ಶುರುವಾಯಿತು. ನಾನೂ ಕೂಡ ನೃತ್ಯಕ್ಕೆ ಭರ್ಜರಿ ಹೆಜ್ಜೆ ಹಾಕುತ್ತಿದ್ದೆ ಎಂಬುದು ವೀಕ್ಷಿಸಲು ಬಂದ ಗ್ರಾಮಸ್ಥರು, ನಮ್ಮ ಶಿಬಿರಾರ್ಥಿಗಳ ಶಿಳ್ಳೆ, ಚಪ್ಪಾಳೆಗಳ ಸದ್ದಿನಿಂದಲೇ ತಿಳಿಯುತ್ತಿತ್ತು. ನನ್ನ ಕಿವಿಗೆ ಮೈಕಿನಲ್ಲಿ ಬರುತ್ತಿದ್ದ ಹಾಡಿನ ಹೊರತಾಗಿ ಬೇರೇನೂ ಕೇಳಿಸುತ್ತಿರಲಿಲ್ಲ. ತನ್ಮಯನಾಗಿ ಕುಣಿಯುತ್ತಿದ್ದೆ. ಶಿಳ್ಳೆ, ಚಪ್ಪಾಳೆಗಳ ಜೊತೆಗೆ ನಿಧಾನವಾಗಿ, ಜೋರಾದ ನಗೆಯೂ ಕಿವಿಗಪ್ಪಳಿಸಲು ಪ್ರಾರಂಭಿಸಿತು. ಸ್ವಲ್ಪ ಹೊತ್ತು ಏನೂ ತಿಳಿಯಲಿಲ್ಲ, ಹೀಗಾಗಿ, ನನ್ನ ನೃತ್ಯಕ್ಕೆ ಬರುತ್ತಿರುವ ಪ್ರತಿಕ್ರಿಯೆ ಇರಬಹುದು ಅಂದು ಕೊಂಡು ಇನ್ನೂ ಹುಮ್ಮಸ್ಸಿನಿಂದ ಕುಣಿಯಲಾರಂಭಿಸಿದೆ. ನಗು ಇನ್ನೂ ಜೋರಾಯಿತು. ಅನುಮಾನ ಬಂದು, ಕುಣಿಯುತ್ತಲೇ ನನ್ನನ್ನೊಮ್ಮೆ ನೋಡಿಕೊಂಡರೇ…ಆ ಬಯಲಾಯಿತು ಸತ್ಯ. ನೃತ್ಯಕ್ಕಾಗಿ ಕಚ್ಚೆ ಪಂಚೆ ಹಾಕಬೇಕಾಗಿತ್ತು. ನನಗೆ ಅಷ್ಟಾಗಿ ಬರದಿದ್ದರಿಂದ ಸ್ನೇಹಿತನೊಬ್ಬನಿಂದ ಕಚ್ಚೆ ಉಡಿಸಿಕೊಂಡಿದ್ದೆ. ಅವನು ಹೇಗೆ ಉಡಿಸಿದ್ದನೋ ಅಥವಾ ನನ್ನ ಹುಮ್ಮಸ್ಸಿನ ಕುಣಿತದ ಪ್ರಭಾವವೋ, ಉಟ್ಟಿದ್ದ ಕಚ್ಚೆ ಪಂಚೆ ಮೈಯಿಂದ ಕಳಚಿ ಬಿದ್ದಿತ್ತು. ಮೈಮೇಲೆ ಉಳಿದಿದ್ದ ಸಣ್ಣದೊಂದು ಅರಿವೆ ನನ್ನ ಮರ್ಯಾದೆ ಉಳಿಸಿತ್ತು. ಇದನ್ನು ನೋಡಿ, ತಡೆಯಲಾಗದೆ ವೀಕ್ಷಕರೆಲ್ಲ ಗೊಳ್ಳೆಂದು, ಬಿದ್ದು ಬಿದ್ದು ನಗುತ್ತಿದ್ದರು.
ವೇದಿಕೆಯಿಂದ ಎದ್ದು, ಬಿದ್ದು ಓಡಿದವನು ಶಿಬಿರ ಮುಗಿಯುವವರೆಗೆ ಮತ್ತೆ ವೇದಿಕೆ ಏರಲೇ ಇಲ್ಲ. ಅದಾದ ಕೆಲವು ದಿನಗಳವರೆಗೆ ನನ್ನನ್ನು ಕಂಡಾಗಲೆಲ್ಲ ಸ್ನೇಹಿತರು ಕುರುಡು ಕಾಂಚಾಣ ಕುಣಿಯತಲಿತ್ತು ರಾಘು ಪಂಚೆ ಜಾರುತಲಿತ್ತು ಎಂದು ಎಲ್ಲರೆದುರು ಹೇಳಿಕೊಂಡು, ಅಣಕಿಸಿ ನಗುತ್ತಿದ್ದರು. ಆಗೆಲ್ಲ ಭೂಮಿಯೇ ಬಾಯ್ಬಿರಿಯಬಾರದೇ ಅನ್ನುವಷ್ಟು ಅವಮಾನವಾಗುತ್ತಿತ್ತು. ಅಂದಿನಿಂದ, ಸಾರ್ವಜನಿಕ ವೇದಿಕೆ ಹತ್ತುವ ವೇಳೆ ತುಂಬಾ ಕಾಳಜಿವಹಿಸಿ, ನಟನೆ, ಹಾಡು, ನೃತ್ಯ, ಭಾಷಣಗಳಿಂದ ವೇಷಭೂಷಣಗಳವರೆಗೆ ಮೊದಲೇ ಸರ್ವಸನ್ನದ್ಧನಾಗಿರುತ್ತಿದ್ದೆ.
ಆ ಅವಮಾನಕರ ಘಟನೆ, ನನ್ನನ್ನು ನಾನು ಜಾಗೃತನಾಗಿರುವಂತೆ, ಪೂರ್ವ ತಯಾರಿ ಮಾಡಿಕೊಳ್ಳುವಂತೆ ಮಾಡಿ, ಇನ್ನೆಂದೂ ಅವಮಾನವಾಗದಂತೆ ತಡೆಯಿತು.
ರಾಘವೇಂದ್ರ ಈ ಹೊರಬೈಲು