Advertisement

ಮಹಾನ್‌ ನಾಯಕರ ಮಾರ್ಗದಲ್ಲಿ ಸಾಗಿ

05:10 PM Dec 22, 2018 | |

ಚಿತ್ರದುರ್ಗ: ಡಾ| ಬಿ.ಆರ್‌. ಅಂಬೇಡ್ಕರ್‌ ಹಾಗೂ ಡಾ| ಬಾಬು ಜಗಜೀವನರಾಮ್‌ ಈ ಇಬ್ಬರು ದಲಿತರ ಎರಡು ಕಣ್ಣುಗಳಷ್ಟೆ ಅಲ್ಲ, ದೇಶದ ಎಲ್ಲ ಸಮುದಾಯಗಳ ಕಣ್ಣುಗಳು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಅರವಿಂದ ಮಾಲಗತ್ತಿ ಹೇಳಿದರು.

Advertisement

ನಗರದ ತರಾಸು ರಂಗಮಂದಿರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಎ.ಕೆ. ಮಾರಪ್ಪ ಶಾಂತಮ್ಮ ಸ್ಮಾರಕ ಟ್ರಸ್ಟ್‌ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಡಾ| ಬಾಬು ಜಗಜೀವನರಾಮ್‌ ಚಿಂತನ ಮಾರ್ಗ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಅವರು ಸಾಮಾಜಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳ ಜತೆಯಲ್ಲಿ ದೇಶವನ್ನು ಕಟ್ಟುವ ಕೆಲಸ ಮಾಡಿದ್ದಾರೆ. ಮಹಾ
ನಾಯಕರು ಹಾಕಿಕೊಟ್ಟ ಮಾರ್ಗದಲ್ಲಿ ದಲಿತರು ಸೇರಿದಂತೆ ಎಲ್ಲ ವರ್ಗದ ಸಮುದಾಯ ನಡೆಯಬೇಕು. ಡಾ|ಬಾಬು
ಜಗಜೀವನರಾಮ್‌ರವರಿಗೆ ದೇಶದ ಪ್ರಧಾನಮಂತ್ರಿ ಹುದ್ದೆ ದೊರಕಬೇಕಿತ್ತು. ಆದರೆ ಆ ಹುದ್ದೆ ದೊರಕದೇ ಇದ್ದದ್ದು
ವಿಷಾದಕರ ಸಂಗತಿ ಎಂದರು. 

ಈ ನಾಯಕರ ಒಳ ಮತ್ತು ಹೊರ ರಾಜನೀತಿಯ ತಂತ್ರವೇ ದಲಿತರ ಪ್ರಾಣವಾಗಬೇಕು. ಪ್ರಸ್ತುತ ದಿನಮಾನಗಳಲ್ಲಿ
ಇವರ ನೀತಿ, ತತ್ವ, ಸಿದ್ಧಾಂತಗಳನ್ನು ನಾವೆಲ್ಲರೂ ಅನುಸರಿಸಬೇಕು. ಇಬ್ಬರೂ ಮಹಾ ನಾಯಕರ ವೈಯಕ್ತಿಕ ಸಂಬಂಧಗಳು ಬೇರೆ ಬೇರೆಯಾಗಿದ್ದರೂ ಗಟ್ಟಿತನದಿಂದ ಕೂಡಿದ್ದವು ಎಂದು ಹೇಳಿದರು.

ದೇಶದ ಕೃಷಿ ಕ್ಷೇತ್ರ ಹುದ್ದೆ ಪಡೆದವರು ತಮ್ಮ ಭವಿಷ್ಯ ಕಳೆದುಕೊಳ್ಳಿದ್ದಾರೆ ಎನ್ನುವ ಮಾತುಗಳು ಚಾಲ್ತಿಯಲ್ಲಿದ್ದ
ಸಮಯದಲ್ಲಿ ಆ ಹುದ್ದೆಯನ್ನು ಡಾ| ಬಾಬು ಜಗಜೀವನರಾಮ್‌ ಪರಿಣಾಮಕಾರಿಯಾಗಿ ನಿಭಾಯಿಸಿ ಹಸಿರು ಮತ್ತು ನೀಲಿ ಕ್ರಾಂತಿ ಹರಿಕಾರರಾಗಿ ಹೊರಹೊಮ್ಮಿದರು. ಕೃಷಿ ಕ್ಷೇತ್ರದಿಂದಲೇ ದೊಡ್ಡ ಮಟ್ಟದ ನಾಯಕರಾಗಿ ಬೆಳೆದರು ಎಂದರು. 

Advertisement

ಜಾತ್ಯತೀತ ಪರಿಭಾಷೆಯಲ್ಲಿ ತಳಸಮುದಾಯದರು ದೇಶ ಕಟ್ಟಲು ಮುಂದಾದರು. ಆದರೆ, ಮೇಲ್ಜಾತಿಯವರಿಗೆ
ಜಾತ್ಯತೀತ ಪರಿಭಾಷೆ ಮುಳುವಾಯಿತು. ತಳ ಸಮುದಾಯದ ಜನತೆ ಈ ನೆಲದ ಹಾದಿ. ಭಾರತದ ಸ್ವಾತಂತ್ರ್ಯಾಕ್ಕಾಗಿ ಹೋರಾಟದಲ್ಲಿ ಭಾಗಿಯಾಗಿದ್ದರೂ ಎನ್ನುವುದಕ್ಕೆ ಡಾ|ಬಾಬು ಜಗಜೀವನರಾಮ್‌ ಎರಡು ಬಾರಿ ಜೈಲು ಸೇರಿದ್ದರು. ಒಂದು ಬಾರಿ ಜೈಲಿಗೆ ಹೋದಾಗ ಒಂದು ವರ್ಷ ಮತ್ತೂಂದು ಬಾರಿ ಹೋದಾಗ ಒಂದು ವರ್ಷ 2 ತಿಂಗಳು ಸೆರೆಮನೆ ವಾಸ ಅನುಭವಿಸಿದ್ದರು ಎಂದು ತಿಳಿಸಿದರು. ಡಾ| ಬಾಬು ಜಗಜೀವನರಾಮ್‌ ಅಧ್ಯಯನ ಕೇಂದ್ರದ ವಿಶ್ರಾಂತ ನಿರ್ದೇಶಕ ಡಾ|ಮೈಲಹಳ್ಳಿ ರೇವಣ್ಣ ಮಾತನಾಡಿ, ಡಾ| ಬಾಬು ಜಗಜೀವನರಾಮ್‌ ಸ್ವಾತಂತ್ರ್ಯಾ ಹೋರಾಟಗಾರರಾಗಿ ನವಭಾರತ ನಿರ್ಮಾಣದಲ್ಲಿ ಪ್ರಮುಖ
ಪಾತ್ರ ನಿರ್ವಹಿಸಿದ್ದರು. ಸಾಮಾಜಿಕ ಹೋರಾಟಕ್ಕಾಗಿ ಸಂಸದರಾಗಿ, ಸಚಿವರಾಗಿ, ಉಪಪ್ರಧಾನಿಯಾಗಿ ಕಾರ್ಯ ನಿರ್ವಹಿಸಿ ಹಿಂದುಳಿದ ದಲಿತ, ಕಾರ್ಮಿಕ ಸಮುದಾಯದಲ್ಲಿ ಚಿರಸ್ಮರಣಿಯರಾಗಿ ಹೋಗಿದ್ದಾರೆ ಎಂದರು.

ಡಾ| ಬಾಬು ಜಗಜೀವನರಾಮ್‌ ಜೀವನ ಕಷ್ಟಕರವಾಗಿತ್ತು. ಬಾಲ್ಯದಲ್ಲೇ ಸ್ವಾಭಿಮಾನಿಯಾಗಿ ಅಸ್ಪೃಶ್ಯತೆ ವಿರುದ್ಧ
ಹೋರಾಟ ನಡೆಸುತ್ತಿದ್ದರು ಎಂದು ತಿಳಿಸಿದರು. ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್‌ ಪ್ರಾಧ್ಯಾಪಕ ಸಿ. ನಾಗಣ್ಣ ಮಾತನಾಡಿ, ದೇಶ ಬಿಕ್ಕಟ್ಟು ಎದುರಿಸುತ್ತಿದ್ದ ಸಂದರ್ಭದಲ್ಲಿ ಡಾ| ಬಾಬು ಜಗಜೀವನರಾಮ್‌ ನಿಸ್ವಾರ್ಥ ಸೇವೆ ಸಲ್ಲಿಸಿ ಆಧುನಿಕ ಭಾರತದ ಶಿಲ್ಪಿಯಾದವರಲ್ಲಿ ಪ್ರಮುಖರು. ಸಾರ್ವಜನಿಕ ಹಾಗೂ ಬಡವರ ಉದ್ಧಾರವಾಗದ ಹೊರತು ಯಾವ ದೇಶವು ಅಭಿವೃದ್ಧಿ ಸಾಧಿಸಲು ಸಾಧವಿಲ್ಲ ಎಂದು ಪ್ರತಿಪಾದಿಸಿ ಕ್ಷಿಪ್ರ ಆರ್ಥಿಕ ಪ್ರಗತಿಗೆ ನಾಂದಿ ಹಾಡಿದರು ಎಂದರು. 

ಬಡವರಿಗೆ ಉನ್ನತ ಸ್ಥಾನ ಕಲ್ಪಿಸುವುದು ಅವರ ಧ್ಯೇಯವಾಗಿತ್ತು. ಅವರು ತಮ್ಮ ಜೀವನದಲ್ಲಿ ಕ್ರಿಯೆ ಮತ್ತು ಪ್ರಾಯೋಗಿಕ ತತ್ವ ಅನುಸರಿಸುತ್ತಿದ್ದರು. 1945-46ರಲ್ಲಿ ಬ್ರಿಟಿಷ್‌ ಕ್ಯಾಬಿನೆಟ್‌ ಮುಂದೆ ಭವಿಷ್ಯ ಭಾರತದ ಬಗ್ಗೆ ಪರಿಶಿಷ್ಟ ಜಾತಿಯ ಪರ ಬಲವಾಗಿ ವಾದ ಮಂಡಿಸಿದ್ದರು. ರಾಜಕೀಯ ಸಮಾನತೆ ಒಂದೇ ಅಲ್ಲದೇ ಎಲ್ಲ ರಂಗದಲ್ಲೂ ಅಭಿವೃದ್ಧಿ ಹೊಂದಲು ಚಿಂತನೆ ನಡೆಸುತ್ತಿದ್ದರು ಎಂದು
ತಿಳಿಸಿದರು. 

ತಮ್ಮ ಇಡೀ ಜೀವನವನ್ನು ಜನಸಾಮಾನ್ಯರ ಏಳಿಗೆಗೆ ಮುಡಿಪಾಗಿಟ್ಟಿದ್ದರು. ನಿಮ್ನ ವರ್ಗದವರಿಗೆ ಅನೇಕ ಯೋಜನೆ ರೂಪಿಸಿ ಆಹಾರ ಉತ್ಪಾದನೆಯಲ್ಲಿ ಐತಿಹಾಸಿಕ ಕ್ರಾಂತಿ ಮಾಡಿದರು. ಸದನದಲ್ಲಿ ವಿರೋಧ ಪಕ್ಷದವರು ಬೀಸುವ ಛಾಟಿ ಏಟಿಗೆ ಶಾಂತ ರೀತಿಯಲ್ಲಿ ಉತ್ತರಿಸುತ್ತಾ, ಗಾಂಭಿರ್ಯ ಮತ್ತು ಘನತೆ ಎತ್ತಿ ಹಿಡಿಯುತ್ತಿದ್ದ ಮಹಾನ್‌ ವ್ಯಕ್ತಿಯಾಗಿದ್ದರು ಎಂದು ತಿಳಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಡಾ| ದೊಡ್ಡಮಲ್ಲಯ್ಯ, ಎ.ಕೆ. ಮಾರಪ್ಪ ಶಾಂತಮ್ಮ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಪ್ರೊ| ಎ.ಕೆ. ಹಂಪಣ್ಣ, ಸಂಗಮೇಶ ಬಾದವಾಡಗಿ, ಪ್ರೊ| ಎಚ್‌. ಲಿಂಗಪ್ಪ, ಜಿ.ಎಸ್‌. ಭಟ್‌, ಪ್ರೊ| ಡಿ. ಡೊಮಿನಿಕ್‌, ದಾಸನೂರು ಕೂಸಣ್ಣ, ಪ್ರೊ ಕರಿಯಪ್ಪ ಮಾಳಿಗೆ ಇತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next