Advertisement

ಪಾಸ್‌ ವಿಳಂಬ: ಮಕ್ಕಳಿಗೆ ಬರೆ, ಸರ್ಕಾರಕ್ಕೆ ಬಂಪರ್‌

06:00 AM Jul 02, 2018 | |

ಬೆಂಗಳೂರು: ವಿದ್ಯಾರ್ಥಿಗಳಿಗೆ ಉಚಿತ ಪಾಸ್‌ ನೀಡುವ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಸರ್ಕಾರ ಪರೋಕ್ಷವಾಗಿ ಸರ್ಕಾರದ ಭರ್ಜರಿ ಉಳಿತಾಯ ಮಾಡಿಕೊಂಡಿದೆ..

Advertisement

ಹೌದು, ಉಚಿತ ಬಸ್‌ ಪಾಸ್‌ಗಳ ವಿತರಣೆಯಿಂದ ಸರ್ಕಾರದ ಮೇಲೆ ಸುಮಾರು 1,950 ಕೋಟಿ ರೂ. ವೆಚ್ಚವಾಗುತ್ತಿತ್ತು ಎಂದು ಅಂದಾಜಿಸಲಾಗಿದೆ. ಆದರೆ, ಈಗಾಗಲೇ ಶೇ. 40ರಷ್ಟು ವಿದ್ಯಾರ್ಥಿಗಳು ಪ್ರಸ್ತುತ ಲಭ್ಯ ಇರುವ ರಿಯಾಯಿತಿ ಪಾಸ್‌ಗಳನ್ನು ತೆಗೆದುಕೊಂಡಾಗಿದೆ. ಇದರಿಂದ ಸರಿಸುಮಾರು 600 ಕೋಟಿ ರೂ. ಉಳಿತಾಯ ಆದಂತಾಗಿದೆ.

ಸರ್ಕಾರ ಘೋಷಣೆ ಮಾಡುವ ಹೊತ್ತಿಗೆ ಇದರ ಪ್ರಮಾಣ ಮತ್ತಷ್ಟು ಹೆಚ್ಚಲಿದೆ.ಆದರೆ, ಈ ಉಳಿತಾಯದ ಲೆಕ್ಕಾಚಾರ ಸರ್ಕಾರ ಹೊರಡಿಸಲಿರುವ ಆದೇಶವನ್ನು ಅವಲಂಬಿಸಿದೆ. ಈಗಾಗಲೇ ಬಹುತೇಕರು ಪಾಸು ಪಡೆದಿರುವ 
ಹಿನ್ನೆಲೆಯಲ್ಲಿ ಹಣ ಹಿಂಪಾವತಿ ಮಾಡಲಿದೆಯೇ ಅಥವಾ ಇನ್ಮುಂದೆ ಪಡೆಯುವವರಿಗೆ ಮಾತ್ರ “ಉಚಿತ ಪಾಸ್‌ ಭಾಗ್ಯ’ ದೊರೆಯಲಿದೆಯೇ ಕಾದುನೋಡಬೇಕು. ಆದರೆ, ಈ ಮೊದಲೇಸರ್ಕಾರಕ್ಕೆ ಆರ್ಥಿಕ ಹೊರೆಯಾಗಿದೆ ಎಂದು ಉಚಿತ ಪಾಸ್‌ ವಿತರಣೆಗೆ ಹಿಂದೇಟು ಹಾಕುತ್ತಿದೆ. ಹೀಗಿರುವಾಗ, ಈಗಾಗಲೇ ಪಾಸ್‌ ಪಡೆದವರಿಗೆ ಹಣ ಹಿಂಪಾವತಿ ಮಾಡುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ರಾಜ್ಯದಲ್ಲಿ ಸುಮಾರು 18 ಲಕ್ಷ ವಿದ್ಯಾರ್ಥಿಗಳು ಪಾಸ್‌ ನಿರೀಕ್ಷೆಯಲ್ಲಿದ್ದರು. ಆದರೆ, ಶಾಲಾ-ಕಾಲೇಜುಗಳು
ಆರಂಭಗೊಂಡು ತಿಂಗಳಾದರೂ ಸರ್ಕಾರ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಇದರಿಂದ ನಿತ್ಯ ಹಣ ಪಾವತಿಸಿ ಓಡಾಡುವ ಅನಿವಾರ್ಯತೆ ಇದೆ. ಇದರ ಮೊತ್ತ ಹೆಚ್ಚು-ಕಡಿಮೆ ವಾರ್ಷಿಕ ಪಾಸಿನ ಮೊತ್ತಕ್ಕೆ ಸಮವಾಗಿದೆ. ಆದ್ದರಿಂದ ಆ ಹಣದಲ್ಲೇ ಜೂನ್‌ ಅಂತ್ಯಕ್ಕೆ ಸುಮಾರು ಬಿಎಂಟಿಸಿ ಹೊರತುಪಡಿಸಿ ಉಳಿದ ಮೂರು ಸಾರಿಗೆ ನಿಗಮಗಳಲ್ಲಿ ಏಳು ಲಕ್ಷ ವಿದ್ಯಾರ್ಥಿಗಳು ಪಾಸ್‌ ಪಡೆದುಕೊಂಡಿದ್ದಾರೆ. ಇದರ ಮೊತ್ತ ಸುಮಾರು 600 ಕೋಟಿ ಆಗಲಿದೆ ಎಂದು ಆಗಲಿದೆ ಎಂದು ಹೆಸರು ಹೇಳಲಿಚ್ಛಿಸದ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಹಿಂಪಾವತಿ ಮಾಡಲಾಗಿತ್ತು: ಆದರೆ, ಸುಮಾರು ಐದು ವರ್ಷಗಳ ಹಿಂದೆ ರಿಯಾಯ್ತಿ ಪಾಸಿನ ಶುಲ್ಕ ಹೆಚ್ಚಳ ಮಾಡಲಾಗಿತ್ತು. ಅದಕ್ಕೆ ಅಂದಿನ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿತ್ತು. ನಂತರದಲ್ಲಿ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಶುಲ್ಕ ಹೆಚ್ಚಳ ಆದೇಶ ಹಿಂಪಡೆಯಲಾಯಿತು. ಜತೆಗೆ ಹೆಚ್ಚುವರಿ ಹಣವನ್ನೂ ವಿದ್ಯಾರ್ಥಿಗಳಿಗೆ ಹಿಂಪಾವತಿಸಿದ್ದರು.

Advertisement

ಪೂರಕ ಸ್ಪಂದನೆ: ಈಚೆಗೆ ನಡೆದ ಬಜೆಟ್‌ ಪೂರ್ವ ಭಾವಿ ಸಭೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವಿತರಣೆ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಈ ವಿಚಾರದಲ್ಲಿ ಪೂರಕ ಸ್ಪಂದನೆ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.

ವಿದ್ಯಾರ್ಥಿಗಳಿಗೆ ಹೊರೆ ಆಗ್ತಿತ್ತು: ಎಂಡಿ: ಉಚಿತ ಪಾಸಿನ ಬಗ್ಗೆ ಸರ್ಕಾರದ ಸ್ಪಷ್ಟ ಆದೇಶ ಬರುವವರೆಗೂ ಕಾಯಬಹುದಿತ್ತು. ಆದರೆ, ಈಗಾಗಲೇ ಶಾಲಾ-ಕಾಲೇಜುಗಳು ಶುರುವಾಗಿದ್ದರಿಂದ ವಿದ್ಯಾರ್ಥಿಗಳಿಗೆ ಹೊರೆ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪಾಸು ವಿತರಣೆ ಮಾಡಲಾಗುತ್ತಿದೆ. ಅಷ್ಟಕ್ಕೂ ರಿಯಾಯ್ತಿ ಪಾಸಿನ ಬೆಲೆ ಕನಿಷ್ಠ 600ರಿಂದ ಗರಿಷ್ಠ 1,200 ರೂ. ಇರುವುದರಿಂದ ಹೊರೆ ಆಗಲಿಕ್ಕಿಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ ವ್ಯವಸ್ಥಾಪಕ ನಿರ್ದೇಶಕ ಎಸ್‌.ಆರ್‌. ಉಮಾಶಂಕರ್‌ ತಿಳಿಸಿದರು.

ವಾಯವ್ಯ, ಈಶಾನ್ಯ ಮತ್ತು ಕೆಎಸ್‌ಆರ್‌ಟಿಸಿ ಸೇರಿ ಸುಮಾರು ಆರು ಲಕ್ಷ ಪಾಸುಗಳು ವಿತರಣೆ ಆಗಿವೆ. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ನೀಡಲಾಗುವ ಉಚಿತ ಪಾಸುಗಳು ಕೂಡ ಸೇರಿವೆ ಎಂದೂ ಅವರು ಮಾಹಿತಿ ನೀಡಿದರು. ಇದರಲ್ಲಿ 2 ಲಕ್ಷಕ್ಕಿಂತ ಅಧಿಕ ಪಾಸುಗಳು ಕೆಎಸ್‌ಆರ್‌ಟಿಸಿ ವ್ಯಾಪ್ತಿ ಯಲ್ಲೇ ವಿತರಣೆ ಆಗಿವೆ.

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next