Advertisement

ಪಾಸ್‌ ಗೊಂದಲ : ಮೀನುಗಾರರ ಅಸಮಾಧಾನ

10:48 PM May 13, 2020 | Sriram |

ಗಂಗೊಳ್ಳಿ: ಇಲ್ಲಿನ ಮೀನುಗಾರಿಕಾ ಬಂದರಿನಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಡೆಯುತ್ತಿದ್ದು, ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಮೀನುಗಾರಿಕಾ ಇಲಾಖೆ ಪಾಸ್‌ ನೀಡಲು ಮುಂದಾಗಿದ್ದು, ಇದು ಮೀನುಗಾರರಲ್ಲಿ ಗೊಂದಲಕ್ಕೆ ಕಾರಣವಾಗಿದ್ದು, ಕೆಲ ಮೀನುಗಾರರು ಅಸಮಾಧಾನ ಹೊರಹಾಕಿದ್ದಾರೆ.

Advertisement

ಕಳೆದ ಮೂರು ದಿನಗಳಿಂದ ಗಂಗೊಳ್ಳಿಯ ಮೀನುಗಾರಿಕಾ ಬಂದರಿಗೆ ಸ್ಥಳೀಯ ಮೀನುಗಾರರನ್ನು ಹೊರತುಪಡಿಸಿ ಹೊರಗಿನವರು ಕೂಡ ಬಂದರಿಗೆ ಆಗಮಿಸುತ್ತಿದ್ದು, ವ್ಯಕ್ತಿಗತ ಅಂತರವನ್ನು ಕಾಪಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ಮಾತುಗಳು ವ್ಯಕ್ತವಾಗುತ್ತಿವೆ. ಬಂದರಿನಲ್ಲಿ ಜನಜಂಗುಳಿ ಉಂಟಾಗದಂತೆ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೀನುಗಾರರು ಹಾಗೂ ಮೀನು ಕಾರ್ಮಿಕರಿಗೆ ಇಲಾಖೆ ಮೂಲಕ ಪಾಸ್‌ ನೀಡಲು ಅಧಿಕಾರಿಗಳು ನಿರ್ಧರಿಸಿದ್ದರು.

ಮೀನುಗಾರರ ಅಸಮಾಧಾನ
ಪಾಸ್‌ ಬಗ್ಗೆ ಸ್ಥಳೀಯ ಮೀನುಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೆಲವರಿಗೆ ಮಾತ್ರ ಪಾಸ್‌ ಕೊಟ್ಟು ಉಳಿದವರಿಗೆ ಪಾಸ್‌ ನಿರಾಕರಿಸುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಪಾಸ್‌ ಇಲ್ಲದ ಮೀನುಗಾರರು ಹಾಗೂ ಸಾರ್ವಜನಿಕರನ್ನು ಬಂದರು ಗೇಟ್‌ ಬಳಿ ಸೋಮವಾರ ಬೆಳಗ್ಗೆ ತಡೆದು ನಿಲ್ಲಿಸಲಾಗಿತ್ತು. ಮಂಗಳವಾರವೂ ಗಂಗೊಳ್ಳಿ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಅಂಜನಾದೇವಿ, ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಸಂದೀಪ್‌ ಜಿ.ಎಸ್‌. ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೇ 15 ರ ಬಳಿಕ ನಿರ್ಧಾರ
ಪಾಸ್‌ ಗೊಂದಲ ಮಂಗಳವಾರವೂ ಮುಂದುವರಿದಿದ್ದು, ಮೇ 15 ವರೆಗೆ ಹೀಗೆ ಯಥಾಸ್ಥಿತಿಯಂತೆ ಮೀನುಗಾರಿಕೆ, ಖರೀದಿ ನಡೆಯಲಿದೆ. ಆ ಬಳಿಕ ಮೀನು ವ್ಯಾಪಾರಸ್ಥರೆಲ್ಲರ ಸಭೆ ಕರೆದು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ. ಇದೇ ವೇಳೆ ಹೊರ ರಾಜ್ಯಗಳಿಗೆ ಹೋಗಿ ಮೀನು ಮಾರಾಟ ಮಾಡಿ ಬಂದ ಮೇಲೆ ನಮ್ಮ ಜಿಲ್ಲೆಯಲ್ಲಿ ಚಾಲಕರಿಗೆ ಕ್ವಾರಂಟೈನ್‌ ಮಾಡುತ್ತಿರುವುದರಿಂದ ಹೊರ ರಾಜ್ಯಗಳಿಗೆ ಹೋಗಲು ಚಾಲಕರು ನಿರಾಕರಿಸುತ್ತಿದ್ದಾರೆ. ಈ ಕಾರಣಕ್ಕೂ ಕೂಡ ಈಗ ಮೀನು ವ್ಯಾಪಾರಸ್ಥರು ಮೀನು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಪಾಸ್‌ ಇದ್ದರೆ ಮಾತ್ರ
ಬಂದರಿನಲ್ಲಿ ಜನಜಂಗುಳಿ ಉಂಟಾಗದಂತೆ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಂದರಿನಲ್ಲಿ ಕಾರ್ಯನಿರ್ವಹಿಸುವ ಮೀನುಗಾರರು ಹಾಗೂ ಮೀನು ಕಾರ್ಮಿಕರಿಗೆ ಇಲಾಖೆ ಮೂಲಕ ಪಾಸ್‌ ಪಾಸ್‌ ವಿತರಣೆ ಮಾಡಲಾಗುತ್ತಿದೆ. ಪಾಸ್‌ ಹೊಂದಿದವರಿಗೆ ಮಾತ್ರ ಬಂದರು ಪ್ರವೇಶಕ್ಕೆ ಅವಕಾಶ ನೀಡಲಾಗುವುದು.
-ಅಂಜನಾದೇವಿ, ಸಹಾಯಕ ನಿರ್ದೇಶಕಿ, ಗಂಗೊಳ್ಳಿ ಮೀನುಗಾರಿಕಾ ಇಲಾಖೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next