Advertisement

ಬಡ ಜನರ ಸಂಕಷ್ಟಕ್ಕೆ ಸ್ಪಂದಿಸುವ ಪಾಷಾ

05:37 PM Apr 13, 2022 | Team Udayavani |

ಮಾನ್ವಿ: ಪಟ್ಟಣದ ಪ್ರಥಮ ದರ್ಜೆ ಗುತ್ತಿಗೆದಾರ ಸೈಯದ್‌ ಅಕ್ಬರ್‌ ಪಾಷಾ ಸಮಾಜದಲ್ಲಿ ಸಂಕಷ್ಟದಲ್ಲಿರುವ ಬಡಜನರನ್ನು ಗುರುತಿಸಿ ಅವರಿಗೆ ಪ್ರತಿ ತಿಂಗಳು ಮಾಸಾಶನ ನೀಡುವ ಮೂಲಕ ಮನೆ ಮಾತಾಗಿದ್ದಾರೆ.

Advertisement

ರಂಜಾನ್‌ ಮಾಸದಲ್ಲಿ ಬಡಜನರಿಗೆ ವಿಶೇಷ ನೆರವು ನೀಡುತ್ತ ಬಂದಿದ್ದಾರೆ. ಪ್ರತಿ ತಿಂಗಳು 50 ಸಾವಿರ ರೂ.ವರೆಗೆ ಬಡಜನರಿಗಾಗಿ ಫಲಪೇಕ್ಷೆ ಬಯಸದೇ ಸೇವೆ ಸಲ್ಲಿಸುತ್ತಿದ್ದಾರೆ. ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿರುವ ವಿಧವೆಯರು, ಅನಾಥರು, ವೃದ್ಧರು, ಅಂಗವಿಕಲರು, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಗುರುತಿಸಿ ಎಲ್ಲ ಧರ್ಮದವರಿಗೂ ಸಮಾನವಾಗಿ ಪ್ರತಿ ತಿಂಗಳು ಮೊದಲ ವಾರದಲ್ಲಿ 400 ರೂ. ಹಾಗೂ 2 ಕೆ.ಜಿ ಅಕ್ಕಿ, ಆಹಾರ ಪೊಟ್ಟಣ ತಮ್ಮ ಕಚೇರಿ ಹತ್ತಿರ ವಿತರಿಸುತ್ತಾರೆ.

ಪಟ್ಟಣದ ವೃದ್ಧರು, ಬಡ ವಿಧವೆಯರಿಗೆ ಇವರ ಸಿಬ್ಬಂದಿ ಪರಿಶೀಲನೆ ನಡೆಸಿ ಅವರಿಗೆ ಭಾವಚಿತ್ರ ಹಾಗೂ ಸಂಪೂರ್ಣ ವಿವರಗಳಿರುವ ಗುರುತಿನ ಚೀಟಿ ವಿತರಿಸಲಾಗುತ್ತದೆ. ಪ್ರತಿ ತಿಂಗಳು ಮಾಸಾಶನ ವಿತರಿಸಿದ ನಂತರ ಪುಸ್ತಕದಲ್ಲಿ ನಮೂದಿಸಲಾಗುತ್ತದೆ. ಬಾರದಿರುವವರ ಬಗ್ಗೆ ಮಾಹಿತಿ ಪಡೆದು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ತಿಂಗಳು 120ಕ್ಕೂ ಹೆಚ್ಚು ಬಡವರು ಇವರಿಂದ ನೆರವು ಪಡೆಯುತ್ತಾರೆ.

ಸೈಯದ್‌ ಅಕ್ಬರ್‌ ಪಾಷಾ ಮಾತನಾಡಿ, ಪ್ರತಿ ತಿಂಗಳು ಬರುವ ಆದಾಯದಲ್ಲಿ ಸ್ವಲ್ಪ ಭಾಗ ಬಡವರಿಗಾಗಿ ಖರ್ಚು ಮಾಡಲಾಗುವುದು. 2015ರಿಂದ ಪ್ರತಿ ತಿಂಗಳು ಸುಮಾರು 120 ಜನರಿಗೆ 400 ರೂ. ಮಾಸಿಕ ವೇತನವಾಗಿ 50 ಸಾವಿರ ರೂ.ವರೆಗೆ ದಾನ ನೀಡುವುದಕ್ಕೆ ಪ್ರಾರಂಭಿಸಿದ್ದು, ಕಳೆದ 7 ವರ್ಷಗಳಿಂದ ನಿರಂತರ ವಿತರಿಸಲಾಗುತ್ತಿದೆ ಎನ್ನುತ್ತಾರೆ. ಕಳೆದ ವರ್ಷ ಕೋವಿಡ್‌ ಸಂದರ್ಭದಲ್ಲಿ ಖಾಸಗಿ ಶಾಲೆ ಶಿಕ್ಷಕರು, ಪತ್ರಕರ್ತರು, ಬಡವರಿಗೆ ಆಹಾರ ಧಾನ್ಯಗಳ ಕಿಟ್‌ ವಿತರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next