ದೋಟಿಹಾಳ: ಮುದೇನೂರು ಮಠದಲ್ಲಿ ಮಹಿಳಾ ಸಾರಥ್ಯದ ಪಾರ್ವತಿ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಸಮೀಪದ ಮುದೇನೂರು ಗ್ರಾಮದ ಉಮಾಚಂದ್ರಮೌಳೇಶ್ವರ ಜಾತ್ರೋತ್ಸವ ಗುರುವಾರದಿಂದ ಆರಂಭವಾಗಿದ್ದು. ಗುರುವಾರ ಉಮಾಚಂದ್ರಮೌಳೇಶ್ವರ ರಥೋತ್ಸವಕ್ಕೆ ಹೆಬ್ಟಾಳದ ಬೃಹ್ಮನಮಠ ಶ್ರೀ ನಾಗಭೂಷಣ ಸ್ವಾಮೀಜಿ ಚಾಲನೆ ನೀಡಿದರು.
ಶುಕ್ರವಾರ ಗ್ರಾಮದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಎತ್ತುಗಳಿಂದ 1.2 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಗಳು ನಡೆದವು. ಸಂಜೆ 7ಕ್ಕೆ ಸುಮಂಗಲಿಯರಿಂದ ‘ಪಾರ್ವತಿ ರಥೋತ್ಸವ’ ವಿಜೃಂಭಣೆಯಿಂದ ನಡೆಯಿತು.
ಮಹಿಳಾ ಸಬಲೀಕರಣಕ್ಕೆ ಪ್ರೋತ್ಸಾಹ: ಮುದೇನೂರು ಮಠದಲ್ಲಿ ಸುಮಾರು ಐವತ್ತು ವರ್ಷಗಳಿಂದ ‘ಮಹಿಳಾ ದಿನಾಚರಣೆ’ ಸದ್ದಿಲ್ಲದೆ ನಡೆಯುತ್ತಿದೆ. ಮಹಿಳೆಯರಿಗೆ ಸ್ವಾತಂತ್ರ್ಯ ನೀಡುವ ಉದ್ದೇಶದಿಂದಲೇ ‘ಪಾರ್ವತಿ ರಥೋತ್ಸವ’ದ ನೆಪದಲ್ಲಿ ಮಹಿಳಾ ಸಬಲೀಕರಣಕ್ಕೆ ಪ್ರೋತ್ಸಾಹ ನೀಡುವ ಅರ್ಥಪೂರ್ಣ ಆಚರಣೆ ಇದಾಗಿದೆ. ಮುದೇನೂರ ಮಠದಲ್ಲಿ ನಡೆಯುವ ಜಾತ್ರೆಗೆ ವಿಶೇಷತೆ ಇದೆ. ಸಾಮಾನ್ಯವಾಗಿ ಕೆಲವು ಕಡೆಗಳಲ್ಲಿ ಒಂದೇ ದಿನ ರಥೋತ್ಸವ ನಡೆಯುತದೆ. ರಥೋತ್ಸವ ನಡೆಯುವ ವೇಳೆ ಮಹಿಳೆಯರು ತೆರೆಮರೆಯಲ್ಲಿ ನಿಂತು ತೇರಿಗೆ ಉತ್ತುತ್ತಿ, ಹಣ್ಣು ಎಸೆದು ನಮಿಸುತ್ತಾರೆ. ಆದರೆ ಇಲ್ಲಿ ಮೂರು ದಿನಗಳ ಕಾಲ ರಥೋತ್ಸವ ನಡೆಯುತ್ತದೆ. ಶಿವರಾತ್ರಿಯ ಅಮವಾಸ್ಯೆಯಾದ ಮೊದಲ ದಿನದ ರಥೋತ್ಸವದಲ್ಲಿ ಪುರುಷರು ಪಾಲ್ಗೊಳ್ಳುತ್ತಾರೆ. ಎರಡನೇ ದಿನ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯುವುದು. ಸಂಜೆ 7ಕ್ಕೆ ದೇವಸ್ಥಾನದ ಮುಂದೆ ಸ್ವಾಮಿಗಳ ಹಾಡುವ ಹಾಡಿಗೆ ಮಹಿಳೆಯರು ಕೋಲಾಟ ಆಡುತ್ತಾರೆ. ನಂತರ ಹರ ಹರ ಮಹಾದೇವ ಎನ್ನುತ್ತಾ ವೀರಗಚ್ಛೆ ಹಾಕಿದ ನೂರಾರು ಮಹಿಳೆಯರು ರಥ ಎಳೆಯುತ್ತಾರೆ. ಅವರಿಗೆ ದಾರಿ ದೀಪವಾಗಿ ಉಳಿದ ಹೆಂಗಳೆಯರು ದೀವಟಿಗೆ ಹಿಡಿದು ಮುಂದೆ ಸಾಗುತ್ತಾರೆ. ರಥ ಉಮಾ ಚಂದ್ರಮೌಳೇಶ್ವರ ಮಠದಿಂದ ಸಾಗಿ ಪಾದಗಟ್ಟಿ ಸ್ಥಳವನ್ನು ತಲುಪಿ ಮರಳಿ ಬರುತ್ತದೆ.
ಹೆಬ್ಟಾಳದ ಬೃಹ್ಮನಮಠ ಶ್ರೀ ನಾಗಭೂಷಣ ಮಹಾಸ್ವಾಮಿಗಳು, ಕೊಪ್ಪಳ, ರಾಯಚೂರು, ಬಾಗಲಕೋಟೆ ಜಿಲ್ಲೆಗಳ ಜನರು ಮತ್ತು ಶಿರಗುಂಪಿ, ಬನ್ನಟಿ, ಮೇಗೂರ, ಬಳೂಟಗಿ, ದೋಟಿಹಾಳ, ರಾಮತಾಳ, ಸೋಮಲಾಪುರ, ಮುದೇನೂರು ಗ್ರಾಮಸ್ಥರು ಹಾಗೂ ಗ್ರಾಮಗಳ ಸುತ್ತಮುತ್ತಲಿನ ಗ್ರಾಮಗಳಿಂದ 10 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು.