Advertisement

“ವಜ್ರೇಶ್ವರಿ ಸಾಧನೆ” 5 ಚಿತ್ರ 1 ವರ್ಷ, 35 ಚಿತ್ರಗಳು ಶತದಿನೋತ್ಸವ!

12:34 PM May 31, 2017 | |

ಬೆಂಗಳೂರು: ಬಹುಅಂಗಾಂಗ ವೈಫ‌ಲ್ಯಗಳಿಂದ 78 ರ ಹರೆಯದಲ್ಲಿ ಕೊನೆಯುಸಿರೆಳೆದಿರುವ ವರನಟ ಡಾ.ರಾಜ್‌ ಕುಮಾರ್‌ ಧರ್ಮಪತ್ನಿ , ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ ಅವರು ನಿರ್ಮಾಪಕಿಯಾಗಿ, ವಿತರಕಿಯಾಗಿ ಮಾಡಿರುವ ಸಾಧನೆ ಮತ್ತು ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅನೂಹ್ಯವಾದದ್ದು. 

Advertisement

ಪತಿಯ ಸಾಧನೆಯ ಹಿಂದೆ ಸ್ಫೂರ್ತಿಯಾಗಿದ್ದ ಪಾರ್ವತಮ್ಮ ,ಮೂವರು ಪುತ್ರರಿಗೆ ಚಿತ್ರರಂಗದಲ್ಲಿ  ಭದ್ರ ನೆಲೆ ಒದಗಿಸಿಕೊಡುವಲ್ಲಿ ಶ್ರಮ ವಹಿಸಿದವರು. ಸದಭಿರುಚಿಯ ರಂಜನೀಯ  ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಅವರು ಕಥಾ ವಸ್ತು ಆಯ್ಕೆಯಲ್ಲಿ  ನಿಷ್ಣಾತೆ ಎನಿಸಿಕೊಂಡಿದ್ದರು. ಕಥೆಯೆ ಅವರ ಚಿತ್ರಗಳ ಜೀವಾಳವಾಗಿತ್ತು ಮತ್ತು ಯಶಸ್ಸಿನ ಗುಟ್ಟಾಗಿತ್ತು.

ಪಾರ್ವತಮ್ಮ ಹುಟ್ಟು ಹಾಕಿದ್ದ ವಜ್ರೇಶ್ವರಿ  ಕಂಬೈನ್ಸ್‌ನಲ್ಲಿ ಮೊದಲ ಚಿತ್ರ ರಾಜ್‌ ನಾಯಕನಾಗಿ ಅಭಿನಯಿಸಿದ್ದ ತ್ರಿಮೂರ್ತಿ ಭಾರೀ ಯಶಸ್ಸು ಕಂಡಿತ್ತು. ಆ ಬಳಿಕ ಒಂದರ ಹಿಂದೆ ಒಂದು ಯಶಸ್ವೀ  ಸದಭಿರುಚಿಯ ಚಿತ್ರಗಳನ್ನು ಸ್ಯಾಂಡಲ್‌ವುಡ್‌ಗೆ ಕೊಡುಗೆ ನೀಡಿದ್ದಾರೆ. 

ಅವರು ನಿರ್ಮಾಣ ಮಾಡಿದ ಜನುಮದ ಜೋಡಿ,ಜೀವನಚೈತ್ರ, ಶಂಕರ್‌ಗುರು ,ನಂಜುಂಡಿ ಕಲ್ಯಾಣ ಚಿತ್ರಗಳು ವರ್ಷ ಪ್ರದರ್ಶನ ಕಂಡಿದ್ದರೆ, 16 ಚಿತ್ರಗಳು 25 ವಾರಗಳ ಪ್ರದರ್ಶನ ಕಂಡಿವೆ. 35 ಚಿತ್ರಗಳು ಶತದಿನೋತ್ಸವವನ್ನು ಆಚರಿಸಿವೆ. ಮಗಳ ಹೆಸರಿನಲ್ಲಿ ಪೂರ್ಣಿಮಾ ಎಂಟರ್‌ಪ್ರೈಸಸ್‌ ಹುಟ್ಟುಹಾಕಿದ ಪಾರ್ವತಮ್ಮ ಹಲವು ಚಿತ್ರಗಳನ್ನು ವಿತರಣೆ ಮಾಡಿ ಯಶಸ್ಸು ಕಂಡಿದ್ದರು. 

ಶಿವರಾಜ್‌ಕುಮಾರ್‌ ನಾಯಕನಾಗಿ ಅಭಿನಯಿಸಿದ ಆನಂದ್‌, ಪುನೀತ್‌ ರಾಜ್‌ಕುಮಾರ್‌  ಅಭಿನಯಿಸಿದ ಅಪ್ಪು ಚಿತ್ರವನ್ನು ಪಾರ್ವತಮ್ಮ ಅವರೆ ನಿರ್ಮಾಣ ಮಾಡಿ ಚಿತ್ರರಂಗದಲ್ಲಿ ರಹದಾರಿ ನಿರ್ಮಾಣ ಮಾಡಿಕೊಟ್ಟಿದ್ದರು. 

Advertisement

ಚಿತ್ರರಂಗಕ್ಕೆ ಪರಿಚಯಿಸಿದ ನಟಿಯರ ಪಟ್ಟಿ ಬಲು ದೊಡ್ಡದು!

ಚಿತ್ರರಂಗಕ್ಕೆ ನಟಿ ಮಣಿಯರ ಹೊಸ ಪರಿಚಯ ಮಾಡಿಸಿಕೊಟ್ಟ, ಪರಭಾಷಾ ನಟಿಯರನ್ನು ಕನ್ನಡಕ್ಕೆ ಕರೆತಂದ ದೊಡ್ಡತನ ಪಾರ್ವತಮ್ಮ ಅವರದ್ದು. 

ಸುಧಾರಾಣಿ, ಆಶಾರಾಣಿ, ಸರಳಾ, ವೀಣಾ, ವಿದ್ಯಾಶ್ರೀ, ಮಲಾಶ್ರಿ, ಕಾವ್ಯಾ ಸೀಮಾ, ಸೌಮ್ಯ, ಮೊಹಿನಿ, ಮೋನಿಶಾ, ಮಾಮತಾಶ್ರೀ, ಪದ್ಮಶ್ರೀ, ಪ್ರೇಮಾ, ಶಿಲ್ಪಾ, ಅನು ಪ್ರಭಾಕರ್, ವಿದ್ಯಾ ವೆಂಕಟೇಶ್, ಶ್ರೀವಿದ್ಯಾ, ರಕ್ಷಿತಾ ಮತ್ತು ರಮ್ಯಾ ಅವರು ಚಿತ್ರರಂಗಕ್ಕೆ ಪರಿಚಯಿಸಿದ್ದೇ ಪಾರ್ವತಮ್ಮ ಅವರ ನಿರ್ಮಾಣದ ಚಿತ್ರಗಳು. 

ಸಹೋದರರೂ ನಿರ್ಮಾಪಕರು
1939 ರಲ್ಲಿ ಮೈಸೂರಿನ ಸಾಲಿಗ್ರಾಮದಲ್ಲಿ ಅಪ್ಪಾಜಿ ಗೌಡ ಮತ್ತು ಲಕ್ಷ್ಮಮ್ಮ ದಂಪತಿಯ ಮಗಳಾಗಿ ಜನಿಸಿದ ಪಾರ್ವತಮ್ಮ ಅವರು 1953 ಜೂ.25 ರಂದು ಡಾ. ರಾಜ್ ಕುಮಾರ್ ಅವರನ್ನು ವಿವಾಹವಾಗಿದ್ದರು. 

ತಾನು ಬೆಳೆಯುವುದರ ಜೊತೆಗೆ ತನ್ನವರ ಬೆಳವಣಿಗೆಯನ್ನು ಕಂಡು ಖುಷಿ ಪಡುತ್ತಿದ್ದ ವಿಶಾಲ ಹೃದಯ ಪಾರ್ವತಮ್ಮ ಅವರದ್ದಾಗಿತ್ತು. ಇದಕ್ಕೆ ಸಾಕ್ಷಿಯಾಗಿ ಅವರ ಸಹೋದದರಾದ ಎಸ್‌.ಎ.ಚಿನ್ನೇಗೌಡ, ಎಸ್‌.ಎ.ಗೋವಿಂದ್‌ರಾಜ್‌ ಮತ್ತು ಎಸ್‌.ಎ.ಶ್ರಿನಿವಾಸ್‌ ಅವರು ನಿರ್ಮಾಪಕರಾಗಿ ಯಶಸ್ಸು ಕಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next