Advertisement

ಖುಷಿ ಹೊತ್ತುತಂದ ಮನೋಜ್ಞ ಸಾಹಸ “ಪರ್ವ’

12:20 AM Mar 14, 2021 | Team Udayavani |

ಎಸ್‌.ಎಲ್‌. ಭೈರಪ್ಪನವರ “ಪರ್ವ’ ಕಾದಂಬರಿ ರಂಗರೂಪಕ್ಕೆ ಬರಲಿದೆ ಎಂಬ ಸುದ್ದಿಯೇ ಕುತೂಹಲ ಮೂಡಿಸಿತ್ತು. ಸಾಮಾನ್ಯವಾಗಿ ಭೈರಪ್ಪನವರು ತಮ್ಮ ಕೃತಿಗಳನ್ನು ಸಿನೆಮಾ, ಧಾರಾವಾಹಿ ಮಾಡಲು ಬಡಪೆಟ್ಟಿಗೆ ಒಪ್ಪುತ್ತಿರಲಿಲ್ಲ. ಅದರ ನಿರ್ದೇಶಕರ ಬಗ್ಗೆ ಸಂಪೂರ್ಣ ಭರವಸೆ ಮೂಡಿದರಷ್ಟೇ ಒಪ್ಪಿಗೆ ಸೂಚಿಸುತ್ತಿದ್ದುದು ನಮಗೆಲ್ಲ ತಿಳಿದೇ ಇದೆ. ಆದರೆ ಇಂದು ಪ್ರಕಾಶ್‌ ಬೆಳವಾಡಿಯವರ ನಿರ್ದೇಶನದ “ಪರ್ವ’ ರಂಗರೂಪದ ಮೊದಲ ಪ್ರಯೋಗ ಭೈರಪ್ಪನವರಿಗೆ ಮಾತ್ರವಲ್ಲ, ನೋಡಿದವರೆಲ್ಲರಿಗೂ ಖುಷಿ ಕೊಟ್ಟಿತು.

Advertisement

ಭೈರಪ್ಪನವರು “ಪರ್ವ’ದಲ್ಲಿ ಮಹಾಭಾರತವನ್ನು ಪೌರಾಣಿಕ ಆವರಣದಿಂದ ಬಿಡಿಸಿಡುವ ಪ್ರಯತ್ನದಲ್ಲಿ ಅಭೂತಪೂರ್ವ ಯಶಸ್ಸು ಕಂಡಿದ್ದರೆ, ಪ್ರಕಾಶ್‌ ಬೆಳವಾಡಿ 4 ದಶಕಗಳ ಬಹುಚರ್ಚಿತ ಬೃಹತ್ಕೃತಿ ಯನ್ನು ಕಾದಂಬರಿ ಆವರಣದಿಂದ ಬಿಡಿಸಿ ರಂಗದ ಮೇಲೆ ತರುವಲ್ಲಿ ಸಫ‌ಲರಾದರು.

“ಪರ್ವ’ ನಾಟಕದಲ್ಲಿ ಒಂದೆರಡು ಕೊರತೆಗಳ ನಡುವೆಯೂ ನೆನಪಿನಲ್ಲುಳಿಯುವ ಅನೇಕ ಸಂಗತಿ ಗಳಿದ್ದವು. 7 ಗಂಟೆಗಳ ನಾಟಕ ಎಂಬ ಪ್ರಕಟನೆ ಯಿದ್ದರೂ ಅದರಾಚೆಗೆ 2 ಗಂಟೆಗಳವರೆಗೂ ವಿಸ್ತರಿಸಿತು. ನಿರ್ದೇಶಕರಿಗಿನ್ನೂ ಅದರ ಅವಧಿಯೇ ಹಿಡಿತಕ್ಕೆ ಸಿಗಲಿಲ್ಲವೇ ಎಂಬ ಅಚ್ಚರಿಯೊಂದಿಗೆ ಇಂಥ ಮಹಾ ಪ್ರಯೋಗಗಳ ಮೊದಲ ಪ್ರಯೋಗದಲ್ಲಿ ಇಂಥವೆಲ್ಲ ಸಾಮಾನ್ಯ, ಮುಂದಿನ ಪ್ರಯೋಗಗಳಲ್ಲಿ ಸುಧಾರಿಸಬಹುದು ಎಂಬ ಕ್ಷಮೆಯೊಂದಿಗೆ ನಾಟಕ ವೀಕ್ಷಿಸಬಹುದು. ದೀರ್ಘಾವಧಿ ಆದರೂ ಪ್ರೇಕ್ಷಕರನ್ನು ಹಿಡಿದಿಡುವ ಶಕ್ತಿ ನಾಟಕಕ್ಕಿದೆ.

ಮೊದಲಿಗೇ ಕೃಷ್ಣ ತನ್ನ ಪ್ರಶ್ನೆಯ ಮೂಲಕ ಗಾಂಧಾರಿಯ ಅಂತರಂಗವನ್ನು ತೆರೆದಿಡಿಸುತ್ತಾನೆ. ಗಾಂಧಾರಿಯ ಪಾತ್ರ ಮೊದಲಿಗೆ ನಮ್ಮನ್ನು ಆವರಿಸಿಕೊಂಡುಬಿಡುತ್ತದೆ. ಆಅನಂತರ‌ ಕುಂತಿ. ಹಿರಿಯ ನಟಿಯರಿಬ್ಬರೂ ಬೆಳಗ್ಗಿಂದ ರಾತ್ರಿಯ ವರೆಗೂ ಅದೇ ಎನರ್ಜಿಯಲ್ಲಿ ಅದ್ಭುತ ಅಭಿನಯ ನೀಡಿದರು. ಆರಂಭದಲ್ಲಿ ಕೃಷ್ಣನ ಪಾತ್ರಧಾರಿಯಲ್ಲಿ ಜೀವವೇ ಇಲ್ಲವೆನಿಸಿತಾದರೂ ಆಮೇಲೆ ಆ ನಟ ತೋರುವ ಲವಲವಿಕೆಯನ್ನು ಮರೆಯಲಾಗದು. ದುರ್ಯೋಧನ ಪಾತ್ರಧಾರಿ ರಂಗದ ಮೇಲಿರು ವಷ್ಟೂ ಹೊತ್ತು ತೋರಿದ ಉಲ್ಲಾಸದ ನಟನೆ ಪಾಂಡವರೈವರ ಪಾತ್ರಗಳನ್ನೂ ಮಸುಕಾಗಿಸಿ ಬಿಡುತ್ತದೆ. ಪಾಂಡವರಲ್ಲಿ ಅರ್ಜುನ- ಧರ್ಮರಾ ಯನ ಪಾತ್ರಧಾರಿಗಳು ತುಂಬಾ ಪೀಚುಪೀಚಾಗಿದ್ದು ಸ್ವಲ್ಪವೂ ಹೊಂದಾಣಿಕೆಯಾಗುವುದಿಲ್ಲ. ಇರುವು ದರಲ್ಲಿ ಭೀಮ ಪಾತ್ರಧಾರಿ ತನ್ನ ಪಾತ್ರಕ್ಕೆ ನ್ಯಾಯ ವೊದಗಿಸುವಂತೆ ಅಭಿನಯಿಸಿದ್ದಾರೆ. ಕರ್ಣನ ಪಾತ್ರ ನಾಟಕಕ್ಕೆ ಕಳೆ ತುಂಬಿದೆ. ಈ ನಟನ ಧ್ವನಿಯೂ ಜಾಗಟೆಯಂತೆ ಸ್ಪಷ್ಟ ಮತ್ತು ಶಕ್ತಿಯುತ. ಆತನ ಆಂಗಿಕಾಭಿನಯವಂತೂ ಪ್ರೇಕ್ಷಕರಿಂದ ಚಪ್ಪಾಳೆಯ ಮೆಚ್ಚುಗೆ ಗಳಿಸಿತು. ವಿಧುರ, ಸಾತ್ಯಕಿ, ಕೃಷ್ಣದ್ವೆ ಪಾಯನ, ಭೀಷ್ಮ, ಅಭಿಮನ್ಯು, ಕೃಪಾಚಾರ್ಯ, ಧೃತರಾಷ್ಟ್ರ, ದ್ರೌಪದಿ, ದಾಸಿ, ಕುಂತಿ, ಮಾದ್ರಿ ನೆನಪಿನಲ್ಲುಳಿಯುವ ಮನೋಜ್ಞ ಅಭಿನಯ ನೀಡಿದ್ದಾರೆ. ಅಭಿನಯ ಮತ್ತು ಡೈಲಾಗ್‌ ಡೆಲಿವರಿಯಲ್ಲಿ ಪ್ರಬುದ್ಧತೆ ತೋರಿದ ದ್ರೌಪದಿಯ ಮುಂದೆ ಪಾಂಡವರು ಪಾಪ ಅನ್ನಿಸುವಂತಿದ್ದಾರೆ.

ಕಾದಂಬರಿಯನ್ನು ಪೂರ್ತಿ ವಿವರಗಳೊಂದಿಗೆ ತೋರಿಸಬೇಕೆಂದು ನಿರೀಕ್ಷಿಸುವುದು ತಪ್ಪಾದರೂ ಭೀಮ- ಹಿಡಿಂಬೆಯ ಅದ್ಭುತ ಪ್ರಣಯವನ್ನು ನಾಟಕೀಯವಾಗಿ ರಂಗದ ಮೇಲೆ ತೋರುವ ಅವಕಾಶದಿಂದ ನಿರ್ದೇಶಕರು ವಂಚಿತರಾಗಿದ್ದಾರೆ. ಘಟೋತ್ಕಚ ಸತ್ತಾಗಷ್ಟೇ ಅವರಿಗೆ ಹಿಡಿಂಬೆ ಪಾತ್ರದ ನೆನಪಾಗಿದೆ.

Advertisement

ಭೈರಪ್ಪನವರು ಉಳಿದ ಪಾತ್ರಗಳಂತೆಯೇ ಸಂಜಯನನ್ನೂ ಸಾಮಾನ್ಯಿಕರಿಸಿರುವುದು ನಿಜವಾ ದರೂ ನಾಟಕದಲ್ಲಿ ವಿದೂಷಕನಂತೆ ಕಾಣಿಸಿರುವ ಔಚಿತ್ಯವೇನೆಂಬ ಪ್ರಶ್ನೆಗೆ ನಿರ್ದೇಶಕರೇ ಉತ್ತರಿಸ ಬೇಕು! ಆತ ಧೃತರಾಷ್ಟ್ರ- ಗಾಂಧಾರಿಯರಿಗೆ ಯುದ್ಧ ವಿವರಗಳ ಸುದ್ದಿ ಹೇಳುವಾಗ ಆಗಾಗ ನಮ್ಮ ಸುದ್ದಿ ಮಾಧ್ಯಮದವರಿಗೆ ಬುದ್ಧಿ ಹೇಳುವುದು ಜಾಣತನದ್ದಾಗಿ ಕಂಡರೂ ಟಿ.ವಿ. ವಾಹಿನಿಯವರ ಸುದ್ದಿ ಬಿತ್ತರದ ಅಣಕು ಯಾಕೋ ನಾಟಕದ ಗಾಂಭೀರ್ಯಕ್ಕೆ ಧಕ್ಕೆ ತರುವಂತಿದೆ.

ದ್ರೋಣಾಚಾರ್ಯರನ್ನು ಮರುಕ ಹುಟ್ಟುವಂತೆ ರಂಗದ ಮೇಲೆ ತೋರಿ ಸಲಾಗಿದೆ. ಪ್ರಭುತ್ವದ ಪರ-ವಿರೋಧದ ಅವರ ನಿಲುವು ಢಾಳಾಗಿ ಕಾಣದೆ, ನಗೆಚಾಟಿಕೆಯಡಿ ಮಸುಕಾಗಿಬಿಟ್ಟಿದೆ.

ಊಟದ ವಿರಾಮದ ಅನಂತರ‌ ಸ್ವಲ್ಪ ಬೋರ್‌ ಎನಿಸಿತು. ದ್ರೋಣಾಚಾರ್ಯ, ಕೃಪ, ಕೃಷ್ಣದ್ವೈಪಾಯ ನರ ಸ್ವಗತ ಸ್ವಲ್ಪ ದೀರ್ಘ‌ ಎನಿಸಿ, ಭಾಷಣ ಕೇಳಿದಂತೆ ಭಾಸವಾಗುತ್ತದೆ. ಇಲ್ಲಿ ಸ್ವಲ್ಪ ಕತ್ತರಿ ಆಡಿಸಿದರೆ ಚೆನ್ನ. ವಸ್ತ್ರ ವಿನ್ಯಾಸ ಮತ್ತು ಪ್ರಸಾಧನ ಎರಡೂ ನಾಟಕದ ಪ್ರಸ್ತುತಿಗೆ ಪೂರಕವಾಗಿವೆ. ಇವೆರಡೂ ಕಾದಂಬರಿಯ ಆಶಯಕ್ಕೆ ಮೆರುಗನ್ನು ನೀಡುವಂತಿದ್ದವು. ಕೆಲವು ದೃಶ್ಯಗಳಲ್ಲಿ ನಟರಿಗೆ ಒದಗಿಸಿದ ಮಾಸ್ಕ್ ಗಳು ಮುಖಕ್ಕೆ ಹೊಂದಾಣಿಕೆಯಾಗದೆ ಮೆಳ್ಳೆಗಣ್ಣಿನಂತೆ ಕಾಣುತ್ತಿದ್ದುದು ಅಸಹ್ಯವಾಗಿತ್ತು.

ನಾಟಕದಲ್ಲಿ ಒಂದೆರಡು ಕಡೆ ಎರಡೆರಡು ಸಾಲಿನ ಜೋಗುಳದ ಹೊರತಾಗಿ ಎಲ್ಲಿಯೂ ಹಾಡಿಗೆ ಅವಕಾಶವಿಲ್ಲ. ರವಿ ಮೂರೂರು ಅವರ ರೆಕಾರ್ಡೆಡ್‌ ಸಂಗೀತಕ್ಕಿಂತ ಯುದ್ಧ ವರ್ಣನೆಗಳಲ್ಲಿ ಲೈವ್‌ ಸಂಗೀತ ಸಹನೀಯವಾಗಿದೆ. ಒಂದೇ ವೇದಿಕೆಯಲ್ಲಿ ವಿವಿಧ ದೃಶ್ಯಗಳನ್ನು ತೋರಿಸಬೇಕಾದೆಡೆಗಳಲ್ಲಿ ಬೆಳಕಿನ ವಿನ್ಯಾಸಕಾರರ ಶ್ರಮ ಎದ್ದು ಕಾಣುತ್ತಿತ್ತು.

ಕಾದಂಬರಿಯನ್ನು ನಾಟಕದ ಸ್ಕ್ರಿಪ್ಟ್ ಆಗಿ ರೂಪಿಸಲು ಪಟ್ಟ ಸಾಹಸ ಸಾರ್ಥಕವಾಗುವಂತೆ ಒಟ್ಟು ನಾಟಕದ ಅನುಭವ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಸಫ‌ಲತೆ ಕಂಡಿದೆ. ಕೆಲವು ನಟರ ಮನೋಜ್ಞ ಅಭಿನಯ ಇದಕ್ಕೆ ಮುಖ್ಯ ಕಾರಣ. ರಂಗಮಂದಿರದ ಸೌಂಡ್‌ ಸಿಸ್ಟಂ ಮತ್ತು ಬೆಳಕಿನ ವ್ಯವಸ್ಥೆಯ ಗುಣಮಟ್ಟ ಕಳಪೆಯಾಗಿರುವ ಕಾರಣ ಅದನ್ನು ಸಹಿಸಿಕೊಳ್ಳುವ ಅನಿವಾರ್ಯತೆ ಪ್ರೇಕ್ಷಕರದ್ದು.

ಇವತ್ತಿನ ಪ್ರೇಕ್ಷಕ ವರ್ಗ ಭೈರಪ್ಪನವರ ಮೇಲಿನ ಪ್ರೀತಿಯಿಂದ ತುಂಬಾ ಉತ್ಸಾಹದಿಂದ ನಾಟಕಕ್ಕೆ ಸಹಕರಿಸಿದ್ದು ಮುಖ್ಯವಾಗಿ ನಟರಿಗೆ ಮತ್ತು ನಿರ್ದೇಶಕರಿಗೆ ಪ್ರೋತ್ಸಾಹದಾಯಕವಾಗಿತ್ತು. ಮುಂದಿನ ಪ್ರಯೋಗಗಳಲ್ಲಿ ಇನ್ನು ಸ್ವಲ್ಪ ಬಿಗಿಬಂಧಕ್ಕೆ ಗಮನಹರಿಸಿದಲ್ಲಿ “ಪರ್ವ’ ಪ್ರಯೋಗ ನೆನಪಿ ನಲ್ಲುಳಿಯುತ್ತದೆ. ಅಷ್ಟು ಜನ ಹಿರಿಕಿರಿಯ ನಟರನ್ನು ಕಲೆಹಾಕಿಕೊಂಡು, ತಿಂಗಳುಗಟ್ಟಲೆ ತಾಲೀಮು ನಡೆಸಿ, ಹಣಕಾಸಿನ ನಿರ್ವಹಣೆ ಮಾಡಿಕೊಂಡು, ಅತ್ಯಂತ ಜನರ ಪ್ರೀತಿ ಗಳಿಸಿದ ಮಹಾ ಕಾದಂಬರಿ ಯೊಂದನ್ನು ರಂಗದ ಮೇಲೆ ತರುವುದು ದೊಡ್ಡ ಸಾಹಸವೇ! ಇದಕ್ಕಾಗಿ ಪ್ರಕಾಶ್‌ ಬೆಳವಾಡಿ ಮತ್ತವರ ತಂಡವನ್ನು, ಉಳಿದೆಲ್ಲ ವ್ಯವಸ್ಥೆಯಲ್ಲಿ ಕೈ ಜೋಡಿಸಿ ದವರನ್ನು ಅಭಿನಂದಿಸಲೇಬೇಕು. ಕನ್ನ ಡಿ ಗ ರು ಇದನ್ನು ನೋಡಿ ಪೋ›ತ್ಸಾಹಿಸಬೇಕು.

– ಡಾ| ಎಚ್‌.ಎಸ್‌. ಸತ್ಯನಾರಾಯಣ, ವಿಮರ್ಶಕರು

Advertisement

Udayavani is now on Telegram. Click here to join our channel and stay updated with the latest news.

Next