ತನ್ನ ಟೈಟಲ್, ಪೋಸ್ಟರ್ ಮತ್ತು ಹಾಡುಗಳ ಮೂಲಕ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿರುವ ಮಕ್ಕಳ ಚಿತ್ರ “ಪಾರು’ ಇಂದು ತೆರೆಗೆ ಬರುತ್ತಿದೆ. ಈಗಾಗಲೇ “ಪಾರು’ ಚಿತ್ರದ ಕಥಾಹಂದರ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿದ್ದು, “ಪಾರು’ ಥಿಯೇಟರ್‌ನಲ್ಲೂ ಪ್ರೇಕ್ಷಕರಿಗೆ ಇಷ್ಟವಾಗಲಿದ್ದಾಳೆ ಅನ್ನೋದು ಚಿತ್ರತಂಡದ ಭರವಸೆ.
ಬಡತನ, ಅಲೆಮಾರಿ ಜೀವನ, ಚಿಂದಿ ಆಯುವ ಮಕ್ಕಳ ಮನಸ್ಥಿತಿ ಹೀಗೆ ನಮ್ಮ ಸುತ್ತಮುತ್ತ ಪ್ರತಿನಿತ್ಯ ಕಾಣುವ ಹತ್ತಾರು ನೈಜ ಸಂಗತಿಗಳನ್ನು “ಪಾರು’ ಚಿತ್ರದ ಮೂಲಕ ತೆರೆಮೇಲೆ ಹೇಳುತ್ತಿದ್ದಾರೆ ನಿರ್ದೇಶಕ ಹನ್ಮಂತ್ ಪೂಜಾರ್.
ಚಿತ್ರದ ಕಥಾಹಂದರ ಮತ್ತು ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಮಾತನಾಡುವ ನಿರ್ದೇಶಕ ಹನ್ಮಂತ್ ಪೂಜಾರ್, “ಇದು ಪ್ರತಿನಿತ್ಯ ನಮ್ಮ ನಡುವೆಯೇ ನಡೆಯುವ ಕಥೆ. ಚಿತ್ರದ ಟೈಟಲ್ಲೇ ಹೇಳುವಂತೆ “ಪಾರು’ ಎಂಬ ಬಡ ಹುಡುಗಿಯ ಜೀವನದ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಎಲ್ಲ ಸಮಸ್ಯೆ, ಸವಾಲುಗಳನ್ನು ಮೀರಿ “ಪಾರು’ ಜೀವನದಲ್ಲಿ ಏನೆಲ್ಲ ಸಾಧಿಸುತ್ತಾಳೆ ಅನ್ನೋದು ಸಿನಿಮಾ. ಮಕ್ಕಳು, ಪೋಷಕರು ಹೀಗೆ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂಥ ಕಥಾಹಂದರ ಸಿನಿಮಾದಲ್ಲಿದೆ.
ಇದನ್ನೂ ಓದಿ:‘ನಿನ್ನ ಸನಿಹಕೆ’ ಹಾಡಿನ ಸೌಂಡ್ ಜೋರು
ಈಗಾಗಲೇ “ಪಾರು’ಗೆ ಎಲ್ಲ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾದ ಬಗ್ಗೆ ಚಿತ್ರರಂಗ ಮತ್ತು ಪ್ರೇಕ್ಷಕರು ನಿರೀಕ್ಷೆಯ ಮಾತುಗಳನ್ನಾಡು ತ್ತಿದ್ದಾರೆ. ಆ ನಿರೀಕ್ಷೆಯನ್ನ “ಪಾರು’ ಉಳಿಸಿಕೊಳ್ಳುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ.
“ಪಾರು’ ಚಿತ್ರಕ್ಕೆ, ಹನ್ಮಂತ್ ಪೂಜಾರ್ ನಿರ್ಮಾಣ, ನಿರ್ದೇಶನ ಮತ್ತು ಛಾಯಾಗ್ರಹಣ ವಿದೆ. ಚಿತ್ರಕ್ಕೆ ಸಿ.ಎನ್ ಗೌರಮ್ಮ ಸಹ ನಿರ್ಮಾಣವಿದೆ. ಚಿತ್ರದಲ್ಲಿ ಬೇಬಿ ಹಿತೈಷಿ, ಮಾ. ಮೈಲಾರಿ, ಮಾ. ಅಚ್ಯುತ್, ಮಾ. ಪ್ರಸಾದ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಎ.ಟಿ ರವೀಶ್ ಸಂಗೀತವಿದೆ. ಶಿವ ಕುಮಾರ ಸ್ವಾಮಿ ಸಂಕಲನವಿದೆ