ಬ್ಯಾಡಗಿ: ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಅಷ್ಟೊಂದು ಸುಲಭ ಸಾಧ್ಯವಲ್ಲ. 23 ಸ್ಥಾನಗಳ ಪೈಕಿ ಒಟ್ಟು 110 ಜನರು ಟಿಕೆಟ್ ನೀಡುವಂತೆ ಲಿಖೀತ ಮನವಿ ಕೊಟ್ಟಿದ್ದು, ಪಟ್ಟಿ ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು. ಪಕ್ಷ ಸೂಚಿಸಿದರನ್ನು ಗೆಲ್ಲಿಸಲು ಎಲ್ಲರೂ ಪಣ ತೊಡುವಂತೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಕರೆ ನೀಡಿದರು.
ಗುರುವಾರ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಹಾಗೂ ಆಕಾಂಕ್ಷಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮೇ 29 ರಂದು ನಡೆಯಲಿರುವ ಚುನಾವಣೆ ಬಿಜೆಪಿ ಕಾರ್ಯಕರ್ತರು ಪ್ರತಿಷ್ಠೆಯನ್ನಾಗಿ ಮಾಡಿಕೊಳ್ಳಬೇಕು. ಪುರಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಮಾಡಿಕೊಡುವಂತೆ ಬಹಳಷ್ಟು ಜನರು ಅಹವಾಲು ಸಲ್ಲಿಸಿದ್ದಾರೆ. ಇದೊಂದು ಸಹಜ ಪ್ರಕ್ರಿಯೆಯಾಗಿದ್ದು, ಇದರಲ್ಲಿ ತಪ್ಪೇನಿಲ್ಲ. ಆದರೆ, ಟಿಕೆಟ್ ಕೇಳಿದ ಎಲ್ಲರಿಗೂ ಅವಕಾಶ ಮಾಡಿಕೊಡಲು ಸಾಧ್ಯವಿಲ್ಲ, ಹೀಗಾಗಿ ಪ್ರತಿಯೊಬ್ಬರು ಇದು ನನ್ನ ಚುನಾವಣೆ, ನನ್ನ ವಾರ್ಡ್ ಚುನಾವಣೆ ಎಂದು ಭಾವಿಸಿಕೊಂಡು ಕೆಲಸ ಮಾಡುವಂತೆ ಮನವಿ ಮಾಡಿದರು.
ಬಂಡಾಯದಿಂದ ನಷ್ಟ ಜಾಸ್ತಿ: ಟಿಕೆಟ್ ಸಿಗದೇ ಅಸಮಾಧಾನ ಮಾಡಿಕೊಂಡವರು, ಬಂಡಾಯವಾಗಿ ಸ್ಪರ್ಧೆ ಮಾಡಿದರೇ, ತಮ್ಮನ್ನೂ ಸೇರಿದಂತೆ ಪಕ್ಷಕ್ಕೆ ನಷ್ಟವಾಗಲಿದೆ. ಆದರೆ, ಎಲ್ಲ ಜಾತಿ, ಧರ್ಮ, ಜನಾಂಗಗಳು ಮತ್ತು ಸಮುದಾಯದ ಜನರಿಗೆ ಅವಕಾಶ ಮಾಡಿಕೊಡಬೇಕಾದ ಕಾರಣ ಪ್ರಸಕ್ತ ಚುನಾವಣೆಯಲ್ಲಿ ಎಲ್ಲ ಮಾನದಂಡಗಳನ್ನು ಪರಿಗಣಿಸಲಾಗುವುದು. ಅವಕಾಶ ವಂಚಿತರು ನಿರಾಸೆಗೊಳ್ಳದೆ ಟಿಕೆಟ್ ನನಗೆ ಸಿಕ್ಕಿದೆ ಎನ್ನುವ ರೀತಿಯಲ್ಲಿ ಚುನಾವಣೆ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಪಕ್ಷವನ್ನು ಗೆಲ್ಲಿಸಬೇಕು. ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು.
ಪಕ್ಷಕ್ಕೆ ಆನೆ ಬಲ: ವಿಧಾನಸಭೆ, ಲೋಕಸಭೆ ಸೇರಿದಂತೆ ಬಹುತೇಕ ಚುನಾವಣೆಗಳಲ್ಲಿ ಬಿಜೆಪಿ ಜಯ ಸಾಧಿಸುತ್ತ ಬಂದಿದ್ದು, ಕೇವಲ ಒಂದು ಸ್ಥಾನವಿದ್ದ ಬಿಜೆಪಿ ಕಳೆದ ಬಾರಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಆಡಳಿತ ಚುಕ್ಕಾಣಿ ಹಿಡಿಯುತ್ತ ಬಂದಿದೆ. ವಾಜಪೇಯಿ ಹಾಗೂ ಆಡ್ವಾಣಿಯವರಂತಹ ಕಳಂಕ ರಹಿತ ನಾಯಕರು ಕಟ್ಟಿ ಬೆಳೆಸಿದ ಪಕ್ಷ ಇದೀಗ ಹೆಮ್ಮರವಾಗಿ ಬೆಳೆದು ಜನಸೇವೆಗೆ ಸಿದ್ಧವಾಗಿದೆ. ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಗೆಲ್ಲಿಸಲು ಎಲ್ಲರು ಶ್ರಮಿಸೋಣ ಎಂದರು.
ಬಿಜೆಪಿ ತಾಲೂಕಾಧ್ಯಕ್ಷ ಶಂಕ್ರಣ್ಣ ಮಾತನವರ, ಮಾಜಿ ಅಧ್ಯಕ್ಷ ರಾಮಣ್ಣ ಉಕ್ಕುಂದ, ಪುರಸಭೆ ಮಾಜಿ ಅಧ್ಯಕ್ಷ ಬಿ.ಎಂ.ಛತ್ರದ, ಮುಖಂಡರಾದ ಸಿ.ಆರ್.ಆಲದಗೇರಿ, ರವೀಂದ್ರ ಪಟ್ಟಣಶೆಟ್ಟಿ, ಜೆ.ಸಿ.ಚಿಲ್ಲೂರಮಠ, ಬಾಲಚಂದ್ರಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ವಿರೇಂದ್ರ ಶೆಟ್ಟರ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಸುರೇಶ ಆಸಾದಿ ಸ್ವಾಗತಿಸಿ, ವಂದಿಸಿದರು.