ವಿಜಯಪುರ: ವಕ್ಫ್ ವಿರುದ್ಧದ ಹೋರಾಟದ ಹೆಸರಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅವರ ತಂಡದಿಂದ ಪಕ್ಷದ ಶಿಷ್ಟಾಚಾರ ಉಲ್ಲಂಘನೆಯಾಗುತ್ತಿದೆ. ಈಗ ಇದನ್ನು ನಮ್ಮದೇ ಪಕ್ಷದ ಎರಡು ಬಣಗಳ ಹೋರಾಟ ಎಂದು ಗುರುತಿಸಲಾಗುತ್ತಿದೆ. ವಕ್ಫ್ ಹೋರಾಟದಲ್ಲಿ ಕಾಂಗ್ರೆಸ್ ನಾಯಕರ ದೂಷಣೆ ಬದಲಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಯಾರೂ ತಮ್ಮ ಬಗ್ಗೆ ಮಾತನಾಡುತ್ತಾರೋ ಅಂಥವರ ಬಗ್ಗೆ ಯತ್ನಾಳ್ ಮನಸ್ಸಿಗೆ ಬಂದಂತೆ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಏಜೆಂಟ್ ಆಗಿ ಬಿಜೆಪಿಯನ್ನು ದುರ್ಬಲಗೊಳಿಸುತ್ತಿರುವ ಯತ್ನಾಳ್ ಅವರನ್ನು ಕೂಡಲೇ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ ಬಿರಾದಾರ ಮತ್ತು ಎಸ್‌ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಗೋಪಾಲ ಘಟಕಾಂಬಳೆ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಬ್ಬರೂ ಮುಖಂಡರು, ಕಾಂಗ್ರೆಸ್ ಪಕ್ಷ ವಕ್ಫ್ ಮೂಲಕ ರೈತರ ಜಮೀನು, ಮಠ ಮಾನ್ಯಗಳು ಆಸ್ತಿ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಹೀಗಾಗಿ ಪ್ರಧಾನಿ ಮೋದಿ ಕೇಂದ್ರದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ತರಲು ಹೊರಟಿದ್ದಾರೆ. ಇದರ ಭಾಗವಾಗಿ ರಾಜ್ಯದಲ್ಲಿ ಬಿಜೆಪಿಯಿಂದ ತಂಡಗಳ ರಚನೆ ಮಾಡಿ, ಅಧ್ಯಯನ ಕೈಗೊಳ್ಳಲಾಗುತ್ತಿದೆ. ಆದರೆ, ಶಾಸಕ ಯತ್ನಾಳ್ ತಮ್ಮದೇ ಆಗ ಗುಂಪು ಕಟ್ಟಿಕೊಂಡು ಹೋರಾಟವನ್ನು ರಾಜಕೀಯಗೊಳಿಸುತ್ತಿದ್ದಾರೆ. ಹೀಗಾಗಿ ಯತ್ನಾಳ್ ತಂಡವು ಪಕ್ಷದ ಬ್ಯಾನರ್ ಅಡಿ ವಿಜಯಪುರಕ್ಕೆ ಬಂದರೆ, ಸ್ವಾಗತ ಮಾಡುತ್ತೇವೆ. ಪ್ರತ್ಯೇಕ ಗುಂಪಾಗಿ ಬಂದರೆ ವಿರೋಧ ಮಾಡುತ್ತೇವೆ ಎಂದು ತಿಳಿಸಿದರು.
ಸುರೇಶ ಬಿರಾದಾರ ಮಾತನಾಡಿ, ಯತ್ನಾಳ್ ಗುಂಪಿನ ಹೋರಾಟವು ರೈತರು, ಜನರಿಗೆ ನ್ಯಾಯ ಕೊಡಿಸುವ ಬದಲು ನಮ್ಮದೇ ಬಿಜೆಪಿ ನಾಯಕರ ವಿರುದ್ಧದ ಹೋರಾಟವಾಗಿ ರೂಪಗೊಂಡಿದೆ. ವಕ್ಫ್ ಹೋರಾಟದ ಕ್ರೆಡಿಟ್ ಪಡೆಯಲು ಯತ್ನಾಳ್ ಪರ್ಯಾಯ ತಂಡ ರಚಿಸಿಕೊಂಡಿದ್ದಾರೆ. ಈ ಹೋರಾಟದಲ್ಲಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಹೇಳಿಕೊಡುತ್ತಿದ್ದಾರೆ. ವಂಶವಾದ ಹೆಸರಲ್ಲಿ ಟೀಕೆ ಮಾಡುತ್ತಿದ್ದಾರೆ. ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಒಪ್ಪಲ್ಲ ಎನ್ನುತ್ತಿದ್ದಾರೆ. ನಿಮ್ಮ ಭಾಷಣದಲ್ಲಿ ಬರೀ ಪ್ರಚೋದನೆ ಮಾಡುವ ಕೆಲಸ ಮಾಡುತ್ತೀರಿ. ಇವರ ಭಾಷಣದಿಂದ ಗೊಂದಲ ಮೂಡುತ್ತಿದೆ. ಪಕ್ಷದ ಕಾರ್ಯಕರ್ತರ ಉತ್ಸಾಹ ಕುಗ್ಗುವಂತಾಗುತ್ತಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಸಹ ಇದೇ ಹರಕು ಬಾಯಿ ಯತ್ನಾಳ್ ಕಾರಣ ಎಂದು ವಾಗ್ದಾಳಿ ನಡೆಸಿದರು.
ಯತ್ನಾಳ್ ಅನುಕೂಲ ಸಿಂಧು ರಾಜಕಾರಣಿ: ವಿಜಯೇಂದ್ರ ಪಕ್ಷದ ವಿವಿಧ ಹುದ್ದೆಗಳನ್ನು ಸಮರ್ಪಕವಾಗಿ ನಿಭಾಯಿಸಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಂದಿದ್ದಾರೆ. ಉಪಚುನಾವಣೆಯಲ್ಲಿ 12 ಕ್ಷೇತ್ರಗಳ ಗೆಲ್ಲಿಸಿಕೊಂಡು ಬಂದು ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಿದ್ದರು. ಕುಟುಂಬ ರಾಜಕಾರಣದ ಬಗ್ಗೆ ಪ್ರಧಾನಿ ಮೋದಿ ತುಂಬಾ ಸ್ಪಷ್ಟವಾಗಿ ಹೇಳಿದ್ದರೂ ಯತ್ನಾಳ್‌ಗೆ ಅರ್ಥವಾಗಿಲ್ಲ. ಯಡಿಯೂರಪ್ಪ ವಿಚಾರಕ್ಕೆ ಬಂದಾಗ ಮಾತ್ರ ಕುಟುಂಬ ರಾಜಕಾರಣ ಎಂದು ಟೀಕಿಸುವ ಯತ್ನಾಳ್, ಉಪ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಮಗನ ಪರ ಪ್ರಚಾರ ಮಾಡಿದರು. ಇಲ್ಲಿ ಯಾಕೆ ನಮ್ಮ ನಿಲುವು ಬದಲಾಯಿಸಿದ್ದೀರಿ?. ಯಾಕೆ ಭರತ್ ಬೊಮ್ಮಾಯಿ ಅವರನ್ನು ನೀವು ಗೆಲ್ಲಿಸಲಿಲ್ಲ?. ವಿಜಯಪುರ ಜಿಲ್ಲೆಯಲ್ಲೇ ನೀವು ಬಿಟ್ಟು ಬೇರೆಯವರನ್ನು ಗೆಲ್ಲಿಸಲು ನಿಮಗೆ ಸಾಧ್ಯವಾಗಿಲ್ಲ. ನೀವು ಅನುಕೂಲ ಸಿಂಧು ರಾಜಕಾರಣಿ. ಈ ಹಿಂದೆ ಯಡಿಯೂರಪ್ಪ ಅವರನ್ನು ಇದೇ ಯತ್ನಾಳ್ ಅಪ್ಪಾಜಿ ಅಂದಿದ್ದರು. ಈಗ ಯತ್ನಾಳ್ ಹೇಳುವುದೆಲ್ಲ ಸುಳ್ಳು ಹಾಗೂ ಬೋಗಸ್ ಎಂದು ಬಿರಾದಾರ ಟೀಕಿಸಿದರು.
ಇಷ್ಟೇ ಅಲ್ಲ, ಸಂದರ್ಭ ಬಂದರೆ ಹಿಂದುತ್ವ ಅನ್ನುತ್ತೀರಿ. ಇದು ಕಡಿಮೆಯಾದರೆ ಪಂಚಮಸಾಲಿ ಹೋರಾಟ ಮಾಡುತ್ತೀರಿ. ಏನೂ ಇಲ್ಲದಾಗ ಇದೆಲ್ಲವೂ ಬಿಟ್ಟು ಟೊಪ್ಪಿಗೆ ಹಾಕಿ, ನಮಾಜ್ ಬೀಳುತ್ತೀರಿ. ಕ್ಷಣಕ್ಕೊಂದು ಬಣ್ಣ ಬದಲಾಯಿಸುವ ಚಮೇಲಿ ರೀತಿ ಯತ್ನಾಳ್ ಆಗಿದ್ದಾರೆ. ಹೀಗಾಗಿ ವಿಜಯೇಂದ್ರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಒಡೆದು, ಡೋಂಗಿ ಮಾತನ್ನಾಡುತ್ತೀರಿ. ಪಂಚಮಸಾಲಿ ಹೆಸರಲ್ಲಿ ಪಕ್ಷದ ಹೈಕಮಾಂಡ್‌ಅನ್ನೂ ಬ್ಲಾö್ಯಕ್ ಮಾಡುತ್ತಿದ್ದೀರಿ. ಈ ಹಿಂದೆ ಪ್ರಲ್ಹಾದ ಜೋಷಿ, ಬಿ.ಎಲ್.ಸಂತೋಷ ಅವರನ್ನು, ಅಷ್ಟೇ ಏಕೆ ಮೋದಿ ಅವರನ್ನೂ ಯತ್ನಾಳ್ ಬೈಯ್ದಿದ್ದ. ಹೀಗಾಗಿ ಯತ್ನಾಳ್ ವಿರುದ್ಧ ಪಕ್ಷದ ನಾಯಕರು ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಯತ್ನಾಳ್ ಸರ್ಕಸ್ ಹುಲಿ: ಗೋಪಾಲ ಘಟಕಾಂಬಳೆ ಮಾತನಾಡಿ, ಯತ್ನಾಳ್ ತಮ್ಮ ಹೋರಾಟವನ್ನು ವಿಜಯೇಂದ್ರ ನಾಯಕತ್ವದಲ್ಲಿ ಮಾಡಲಿ. ಕರ್ನಾಟಕದಲ್ಲಿ ಅವರು ಹೀರೋ ಆಗಲು ಹೊರಟಿದ್ದಾರೆ. ನಿಮ್ಮನ್ನು ಯಾರು ನಾಯಕರೆಂದು ಒಪ್ಪಿಕೊಂಡಿದ್ದಾರೆ?, ವಿಜಯೇಂದ್ರ ಹಾಗೂ ಪಕ್ಷವನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಹೋದ ಅವಧಿಯಲ್ಲಿ ಇದನ್ನೇ ಮಾಡಿದರು, ಈಗಲೂ ಇದನ್ನೇ ಮಾಡುತ್ತಿದ್ದಾರೆ. ಈ ಪುಣ್ಯಾತ್ಮನ್ನು ಪಕ್ಷದಿಂದ ಹೊರಗೆ ಹಾಕಿ. ನೀವು ಮೊದಲು ಬಾರಿ ಸಂಸದರಾಗಿದ್ದಾಗ ನಿಮ್ಮನ್ನು ಕೇಂದ್ರ ಸಚಿವರನ್ನಾಗಿ ಮಾಡಲಾಯಿತು. ಆಗ ನಿಮಗೆ ಎಷ್ಟು ವಯಸ್ಸು?, ಅನುಭವ ಏನಿತ್ತು?. ನೀವು ಹಿಂದೂ ಹುಲಿಯಲ್ಲ. ಸರ್ಕಸ್, ಈದ್ಗಾ ಹುಲಿ. ನೀವು ರಾಜ್ಯದ ನಾಯಕರಲ್ಲ, ಜಿಲ್ಲೆಯ ನಾಯಕರೂ ಅಲ್ಲ ಎಂದು ಕುಟುಕಿದರು.