ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆಗಳು ಸದೃಢವಾಗಿ ಸಮಾಜಕ್ಕೆ ಮಾದರಿಯಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳ ಶಾಲೆಗಳ ಉಳಿವಿಗೆ ಸಮುದಾಯದ ಸಹಭಾಗಿತ್ವ ಬಹಳ ಅಗತ್ಯ ಎಂದು ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್ ಹೇಳಿದರು.
ತಾಲೂಕಿನ ದೇವಸ್ಥಾನ ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಂಗಮಂದಿರ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ಈ ಬಗ್ಗೆ ಪೋಷಕರು ಗಮನ ಹರಿಸಬೇಕೆಂದರು.
ರಂಗಮಂದಿರ ನಿರ್ಮಾಣ: ದೇವಸ್ಥಾನ ಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯು ಸರ್ಕಾರದ ಅನುದಾನ ಪಡೆಯದೇ ಗ್ರಾಮಸ್ಥರು ಹಾಗೂ ದಾನಿಗಳಿಂದ ಸಂಗ್ರಹವಾದ ಹಣದಿಂದ ವಿನೂತನವಾಗಿ ರಂಗಮಂದಿರ ನಿರ್ಮಿಸಿರುವುದು ಶ್ಲಾಘನೀಯ. ಈ ಶಾಲೆಯು ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ನೀಡುತ್ತಿದೆ ಎಂದರು.
ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಬೆಳೆಸಿ: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಅಧಿಕವಾಗುತ್ತಿವೆ. ಸರ್ಕಾರಿ ಶಾಲೆಗಳನ್ನು ಸಮಾಜಕ್ಕೆ ಮಾದರಿಯನ್ನಾಗಿಸುವಲ್ಲಿ ಶಿಕ್ಷಕರು, ಮಕ್ಕಳು ಹಾಗೂ ಗ್ರಾಮಸ್ಥರು ಸಹಕಾರ ಅಗತ್ಯ. ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸಿ ಕೊಡುವ ಕೆಲಸ ಶಿಕ್ಷಕರಿಂದ ಆಗಬೇಕು. ಮಕ್ಕಳನ್ನು ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತ ಬೆಳೆಸಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಹೆಚ್ಚು ಆಯೋಜಿಸಬೇಕೆಂದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮುನಿರಾಜು, ಜೀವನ್ ಆಸ್ಪತ್ರೆಯ ಮುಖ್ಯಸ್ಥ ಐ.ಎಸ್. ರಾವ್, ಯುವ ಮುಖಂಡ ಸಂತೋಷ್, ಮುಖ್ಯ ಶಿಕ್ಷಕ ಶಾಂತ ಮೂರ್ತಿ, ಶಿಕ್ಷಕರಾದ ಬಿ.ಸಿ.ಮಂಜುಳಾ, ಪ್ರಕಾಶ್, ಹನುಮಂತ ರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ನಾರಾಯಣ ಸ್ವಾಮಿ, ತಾಲೂಕು ಅಧ್ಯಕ್ಷ ರಾಮಶೇಷಪ್ಪ, ಅರಸನಹಳ್ಳಿ ಕ್ಲಸ್ಟರ್ ವೆಂಕಟೇಶ್, ಗ್ರಾಮದ ಮುಖಂಡ ರಾಮಣ ಉಪಸ್ಥಿತರಿದ್ದರು.
ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆ: ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬಂದವು. ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಗಣ್ಯರು ಬಹುಮಾನ ವಿತರಿಸಿ ಅಭಿನಂದಿಸಿದರು. ವಿಶೇಷವಾಗಿ ಶಾಲಾ ಮಕ್ಕಳು ಕಲಿತು ಪ್ರದರ್ಶಿಸಿದ ಭರತನಾಟ್ಯ ನೃತ್ಯ ಪ್ರೇಕ್ಷಕರ ಗಮನ ಸೆಳೆಯಿತು.