Advertisement

ಕೈ ಟಿಕೆಟ್‌ ವಂಚಿತರಿಂದ ಪಕ್ಷಾಂತರ ಪರ್ವ!

03:17 PM Apr 20, 2018 | Team Udayavani |

ಚಿತ್ರದುರ್ಗ: ಜಿಲ್ಲೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ವಂಚಿತರು ಒಬ್ಬೊಬ್ಬರೇ ಪಕ್ಷ ತೊರೆಯುತ್ತಿದ್ದು, ಮೊಳಕಾಲ್ಮೂರು ಕ್ಷೇತ್ರದ ಟಿಕೆಟ್‌ ವಂಚಿತ ಎನ್‌.ವೈ. ಗೋಪಾಲಕೃಷ್ಣ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ ಕಾಂಗ್ರೆಸ್‌ ಮುಖಂಡ, ಮಾಜಿ ಸಂಸದ ಚಿತ್ರನಟ ಶಶಿಕುಮಾರ್‌ ಜೆಡಿಎಸ್‌ ಸೇರ್ಪಡೆಯಾಗಿದ್ದಾರೆ.

Advertisement

ಕಾಂಗ್ರೆಸ್‌ ಟಿಕೆಟ್‌ ವಂಚಿತರ ಅಸಮಾಧಾನ, ಬಂಡಾಯ ಸ್ಪರ್ಧೆಗೆ ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲೇ ಟಿಕೆಟ್‌ ವಂಚಿತರು ಪಕ್ಷದಿಂದ ನಿರ್ಗಮಿಸುತ್ತಿದ್ದು, ಕಾಂಗ್ರೆಸ್‌ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹನುಮಲಿ ಷಣ್ಮುಖಪ್ಪನವರಿಗೆ ಮುಳ್ಳಿನ ಹಾದಿಯಾಗಿ ಪರಿಣಮಿಸಿದೆ.
 
ಕಾಂಗ್ರೆಸ್‌ ಮುಕ್ತ ದೇಶ ಮಾಡುವ ಪಣತೊಟ್ಟಿರುವ ಬಿಜೆಪಿ ಚಿತ್ರದುರ್ಗ ಜಿಲ್ಲೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋಲಿಸಲು ಸಾಕಷ್ಟು ತಂತ್ರಗಾರಿಕೆ ಮಾಡುತ್ತಿದ್ದು, ಅದರ ಫಲವಾಗಿ ಎನ್‌.ವೈ.ಗೋಪಾಲಕೃಷ್ಣ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಕೂಡ್ಲಿಗಿ ಟಿಕೆಟ್‌ ನೀಡುವ ಮೂಲಕ ಶ್ರೀರಾಮುಲು ಹಾದಿ ಸುಗಮ ಮಾಡಿದೆ. 

ಜೆಡಿಎಸ್‌ ಅಧಿಕಾರಕ್ಕೆ ವಿಶ್ವಾಸ: ಗುಪ್ತಚರ ಇಲಾಖೆ, ಕಾಂಗ್ರೆಸ್‌ ಪಕ್ಷ ಮಾಡಿಸಿದ ವೈಯಕ್ತಿಕ ಸಮೀಕ್ಷೆಗಳು, ಮಾಧ್ಯಮ ಸಮೀಕ್ಷೆಗಳು ಏನೇ ಹೇಳಲಿ ನಾವೇ ಅಧಿ ಕಾರಕ್ಕೆ ಬರಲಿದ್ದೇವೆ ಎನ್ನುವ ಅಚಲ ವಿಶ್ವಾಸದೊಂದಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಜೆಡಿಎಸ್‌ ವರಿಷ್ಠರು ಅಳೆದು ತೂಗಿ ಹೊಸದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ. 

ಶಶಿಕುಮಾರ್‌ ಕಣಕ್ಕೆ: ಮಾಜಿ ಸಂಸದ, ಕಾಂಗ್ರೆಸ್‌ ಮುಖಂಡ, ಚಿತ್ರನಟ ಶಶಿಕುಮಾರ್‌ ಗುರುವಾರ ಬೆಂಗಳೂರಿನಲ್ಲಿ ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್‌ ಪಕ್ಷ ಸೇರಿದ್ದು ಅವರು ಬಹುತೇಕ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದು ನಿಶ್ಚಿತವಾಗಿದೆ. ಈಗಾಗಲೇ ಐದು ಕ್ಷೇತ್ರದ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದ ಜೆಡಿಎಸ್‌ ಪಕ್ಷವು ಹೊಸದುರ್ಗ ಕ್ಷೇತ್ರಕ್ಕೂ ಅಭ್ಯರ್ಥಿ
ಹುಡುಕಿದ್ದು ಘೋಷಣೆಯೊಂದೆ ಬಾಕಿ ಇದೆ. ಚಿತ್ರದುರ್ಗ-ಕೆ.ಸಿ. ವೀರೇಂದ್ರ ಪಪ್ಪಿ, ಹಿರಿಯೂರು-ಡಿ. ಯಶೋಧರ, ಚಳ್ಳಕೆರೆ-ರವೀಶ್‌ ಕುಮಾರ್‌, ಮೊಳಕಾಲ್ಮೂರು-ಎತ್ತಿನಹಟ್ಟಿ ಗೌಡ, ಹೊಳಲ್ಕೆರೆ-ಗದ್ದಿಗೆ ಶ್ರೀನಿವಾಸ್‌, ಹೊಸದುರ್ಗ-ಶಶಿಕುಮಾರ್‌ ಸ್ಪರ್ಧಿಸುತ್ತಿದ್ದಾರೆ. 

ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಚಿತ್ರನಟ ಶಶಿಕುಮಾರ್‌ ಸ್ಪರ್ಧಿಸುವುದರಿಂದ ಅಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಜೆಡಿಎಸ್‌ ಪಕ್ಷಕ್ಕೆ ಸೂಕ್ತ ಅಭ್ಯರ್ಥಿಯಿಲ್ಲದೆ ಟಿಕೆಟ್‌ ಘೋಷಣೆ ಮಾಡಲು ಮೀನಾಮೇಷ ಎಣಿಸುತ್ತಿದ್ದ ಪಕ್ಷಕ್ಕೆ ಬಲಿಷ್ಠ ಅಭ್ಯರ್ಥಿ ಸಿಕ್ಕಂತಾಗಿದೆ. ಇದು ಕೇವಲ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಮೇಲಷ್ಟೇ ಪರಿಣಾಮ ಬೀರದೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿದೆ.

Advertisement

ಚಳ್ಳಕೆರೆ ಅಥವಾ ಮೊಳಕಾಲ್ಮೂರು ಎಸ್ಟಿ ವಿಧಾನಸಭಾ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಬಯಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದು ಮೊಳಕಾಲ್ಮೂರು ಕ್ಷೇತ್ರಕ್ಕೆ ಟಿಕೆಟ್‌ ಸಿಗಲಿದೆ ಎಂದು ಕಳೆದ ಆರು ತಿಂಗಳಿಂದ ಶಶಿಕುಮಾರ್‌ ಚಳ್ಳಕೆರೆ ಮತ್ತು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಮಾಡಿದ್ದರು. ಆದರೆ, ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ ಪಕ್ಷ ಅವರಿಗೆ ಟಿಕೆಟ್‌ ತಪ್ಪಿಸಿದ್ದರಿಂದ ಅವರು ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಜೆಡಿಎಸ್‌ ಪಕ್ಷ ಸೇರ್ಪಡೆಗೊಂಡಿದ್ದಾರೆ.

ಅಚ್ಚರಿ ಫಲಿತಾಂಶ: ಕಳೆದ 20 ವರ್ಷಗಳಿಂದೆ ಚಿತ್ರದುರ್ಗದ ತುರುವನೂರು ರಸ್ತೆಯ ವೆಂಕಟೇಶ್ವರ ದೇವಸ್ಥಾನದಲ್ಲಿ ಹಾಲಪ್ಪ ಎನ್ನವು ಕನ್ನಡ ಚಲನ ಚಿತ್ರದ ಶೂಟಿಂಗ್‌ ನಡೆಯುತ್ತಿತ್ತು. ಸಂಯುಕ್ತ ಜನತಾ ದಳದಿಂದ ಯಾವುದೇ ಅಭ್ಯರ್ಥಿ ಇರಲಿಲ್ಲ. ಕೊನೆ ಕ್ಷಣದಲ್ಲಿ ಚಿತ್ರನಟ ಶಶಿಕುಮಾರ್‌ ಅವರನ್ನೇ ಕಣಕ್ಕೆ ಇಳಿಸಲಾಯಿತು. ಆಗ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಅಚ್ಚರಿ ಫಲಿತಾಂಶದೊಂದಿಗೆ ಗೆಲುವು ಸಾಧಿಸಿದ್ದರು. ಈಗ ಅಂಥದ್ದೇ ಫಲಿತಾಂಶ ನಿರೀಕ್ಷೆಯೊಂದಿಗೆ ಹೊಸದುರ್ಗ ಕಣಕ್ಕೆ ಇಳಿಯಲಿದ್ದಾರೆ. 

ಜೆಡಿಎಸ್‌ ಪಕ್ಷವು ಹೊಸದುರ್ಗ ಕ್ಷೇತ್ರಕ್ಕೆ ಡಮ್ಮಿ ಅಭ್ಯರ್ಥಿ ಹಾಕುತ್ತದೆ ಎನ್ನುವ ಊಹಾಪೋಹಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿತ್ತು. ಒಂದು ವೇಳೆ ಅಭ್ಯರ್ಥಿ ಹಾಕಿದರೂ ಅವರು ಆಟಕ್ಕುಂಟು ಲೆಕ್ಕಿಲ್ಲ ಎನ್ನುವಂತ ಅಭ್ಯರ್ಥಿ ಹಾಕಲಿದ್ದಾರೆಂದು ಹೇಳಲಾಗುತ್ತಿತ್ತು. ಆದರೆ, ದಿಢೀರ್‌ ಬೆಳಣಿಗೆಯಿಂದಾಗಿ ಬಲಿಷ್ಠ ಅಭ್ಯರ್ಥಿಯನ್ನೇ ಹೊಸದುರ್ಗ ಕ್ಷೇತ್ರಕ್ಕೆ ಇಳಿಸಲಾಗಿದೆ.

ಚಿತ್ರನಟ ಶಶಿಕುಮಾರ್‌ ಜೆಡಿಎಸ್‌ ಪಕ್ಷಕ್ಕೆ ಸೇರಿಕೊಂಡಿದ್ದು, ಅವರಿಗೆ ಹೊಸದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್‌ ನೀಡಲಾಗುತ್ತದೆ. ಈ ಬೆಳವಣಿಗೆ ಜಿಲ್ಲೆಯ ಎಲ್ಲ ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿದ್ದು ಜೆಡಿಎಸ್‌ ಪಕ್ಷಕ್ಕೆ ಅನುಕೂಲವಾಗಲಿದೆ.  
ಡಿ.ಯಶೋಧರ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ

ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next