ಮಂಗಳೂರು: ಮಂಗಳೂರು ಕೋಮುಸೂಕ್ಷ್ಮ (ಕಮ್ಯುನಲ್ ಸೆನ್ಸಿಟಿವ್) ಎಂಬುದು ಪೂರ್ವಗ್ರಹಪೀಡಿತ ಅಭಿಪ್ರಾಯ. ಈ ಅಭಿಪ್ರಾಯ ನಾನು ಇಲ್ಲಿಗೆ ಆಯುಕ್ತನಾಗಿ ಬರುವ ಮೊದಲು ನನ್ನಲ್ಲಿಯೂ ಇತ್ತು. ಆದರೆ ಇಲ್ಲಿ 22 ತಿಂಗಳುಗಳ ಕಾಲ ಸೇವೆ ಸಲ್ಲಿಸಿದಾಗ ಅದು ಪೂರ್ವಗ್ರಹ ಎಂಬುದು ಗೊತ್ತಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರಾಗಿದ್ದು ಇತ್ತೀಚೆಗೆ ರೈಲ್ವೆಯ ಐಜಿಪಿಯಾಗಿ ವರ್ಗಾವಣೆಗೊಂಡಿರುವ ಎನ್. ಶಶಿಕುಮಾರ್ ಹೇಳಿದ್ದಾರೆ.
ರವಿವಾರ ಮಂಗಳೂರು ಪುರಭವನದಲ್ಲಿ ನಗರ ಪೊಲೀಸರ ವತಿಯಿಂದ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಧಾರ್ಮಿಕ, ಸಾಂಸ್ಕೃತಿಕ ಪ್ರಜ್ಞೆ ಹೆಚ್ಚಾಗಿರುವ ಪ್ರದೇಶ ಶಾಂತಿಯುತವಾಗಿರುತ್ತದೆ ಎಂಬುದಕ್ಕೆ ಮಂಗಳೂರು ಸಾಕ್ಷಿಯಂತಿದೆ ಎಂದರು.
ಇಲ್ಲಿನ ಜನ ಶಾಂತಿ ಬಯಸುತ್ತಾರೆ. ಏನಾದರೂ ಅಹಿತಕರ ಘಟನೆಯಾದರೆ ಅದಕ್ಕೆ ತಕ್ಕದಾದ ಕ್ರಮವಾಗಬೇಕು. ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂಬುದು ಜನತೆಯ ಅಪೇಕ್ಷೆ ಎಂದು ಹೇಳಿದರು.
ಇದು ದೈವ ಭೂಮಿ. ನಾನು ಹಲವಾರು ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ಇಲ್ಲಿ ಪೊಲೀಸರ ಕರ್ತವ್ಯದಲ್ಲಿ ರಾಜಕೀಯ ಹಸ್ತಕ್ಷೇಪ ಕೂಡ ಶೂನ್ಯ. ಜನತೆ ಕಾನೂನು ಪಾಲನೆಗೂ ಆದ್ಯತೆ ನೀಡುತ್ತಾರೆ. ಕೊರೊನಾ ಸಂದರ್ಭ ಹಾಗೂ ಕೆಲವೊಂದು ಅಹಿತಕರ ಘಟನೆ ಸಂದರ್ಭದಲ್ಲಿ ಪೊಲೀಸ ಆದೇಶ, ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಿ ಸಹಕರಿಸಿದ್ದಾರೆ. ಎಲ್ಲ ವರ್ಗದವರೊಂದಿಗಿನ ಉತ್ತಮ ಸಂಪರ್ಕವಿದ್ದು, ಸಾರ್ವಜನಿಕರ ವಿಶ್ವಾಸ ಗಳಿಸಿದರೆ ಮಾತ್ರ ಪೊಲೀಸರಿಂದ ಉತ್ತಮ ಸೇವೆ ಸಾಧ್ಯ ಎಂದರು.
ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ನೂತನ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್, ಎಸ್‌ಸಿಸಿಡಿಸಿ ಬ್ಯಾಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್. ಮೊದಲಾದವರು ಉಪಸ್ಥಿತರಿದ್ದರು.