Advertisement

ಪಂಜರದೊಳಗಿನ ಹಾಡು ಪಾಡು

07:52 PM Aug 27, 2019 | mahesh |

ಅಡುಗೆ ಮನೆಯೆಂಬ ನನ್ನ ಹೆಡ್‌ ಆಫೀಸ್‌ನಲ್ಲಿ ನನ್ನ ಕನಸುಗಳು ನನ್ನನ್ನು ಗೇಲಿ ಮಾಡುವಾಗ, ನನಗೆ ನಾನೇ ಅಪರಿಚಿತವೆನಿಸುವಾಗ, ಸುಮ್ಮನೆ ಕಣ್ಣಲ್ಲಿ ಬರುವ ನೀರು, ದುಃಖದ್ದಲ್ಲ; ಈರುಳ್ಳಿ ಹೆಚ್ಚಿದ್ದ ಕಾರಣಕ್ಕಾಗಿ ಮಾತ್ರ …

Advertisement

ಪಿಯುಸಿಯಲ್ಲಿ 85% ಬಂದಿದ್ದರೂ ಎಂಜಿನಿಯರಿಂಗ್‌ ಹೋಗದೆ ಡಿಗ್ರಿಗೆ ಸೇರಿಕೊಂಡಿದ್ದೆ. ಅಣ್ಣನಿಗೆ 65% ಬಂದಿದ್ದರೂ ಕಷ್ಟಪಟ್ಟು ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸೀಟ್‌ ದಕ್ಕಿಸಿಕೊಟ್ಟಿದ್ದರು ಅಪ್ಪ. ಬಿಡಿ, ಎಷ್ಟಾದರೂ ಮದುವೆಯಾಗಿ ಬೇರೆ ಮನೆ ಸೇರುವ ನನ್ನ ಮೇಲೆ ಇನ್‌ವೆಸ್ಟ್‌ ಮಾಡೋದು ವೇಸ್ಟ್ ತಾನೇ?

ಬಿ.ಎಸ್ಸಿ ಮುಗಿದ ಕೂಡಲೇ ಮದುವೆಯಾಯ್ತು. ಮುಂದೆ, ಎಂ. ಎಸ್ಸಿ. ಮಾಡಲಾ ಅಂತ ಆಸೆ ತುಂಬಿದ ಕಂಗಳಿಂದ ಗಂಡನನ್ನು ಕೇಳಿದಾಗ, “ಯಾಕೆ ಚಿನ್ನ ಕಷ್ಟಪಡ್ತೀಯ? ಆರಾಮಾಗಿ ಮನೇಲಿ ಇದ್ದುಬಿಡು’ ಅಂತ ನಯವಾಗಿ ನಿರಾಕರಿಸಿದಾಗ, ಹಿಂಡಿದ್ದು ಒಗೆದ ಬಟ್ಟೆಯನ್ನು, ನನ್ನ ಮನಸ್ಸನ್ನೇನಲ್ಲ ಬಿಡಿ…..

ಅರ್ಧಕ್ಕೆ ಬಿಟ್ಟ ಸಂಗೀತ ಕಲಿಕೆಯನ್ನು ಮುಂದುವರಿಸಲು ಹೋದಾಗ ಮಾವ ಹೇಳಿದ್ದು- “ನಮ್ಮ ಮನೆ ಮಹಾಲಕ್ಷ್ಮೀನಮ್ಮ ನೀನು. ನೀನು ಮಾತಾಡಿದರೇ ಸಂಗೀತದಂತೆ ಕೇಳುತ್ತೆ. ಮನೆ, ಗಂಡ ಮಕ್ಕಳು ಅಂತ ಸುಮ್ಮನಿರೋದು ಬಿಟ್ಟು ಯಾಕಮ್ಮ ನಿನಗೆ ಸಂಗೀತ ಗಿಂಗೀತಾ? ಬೆಚ್ಚಗೆ ಸಂಸಾರ ನೋಡಿಕೊಂಡಿದ್ರೆ ಬೇಕಾದಷ್ಟಾಯಿತಲ್ಲ…’ ಅಂತ ನಗೆ ಸೂಸಿದಾಗ ಸುಟ್ಟಿದ್ದು ದಂಡಿ ದಂಡಿ ಕನಸುಗಳಲ್ಲ, ಸ್ಟೌ ತಾಗಿ ಎಲ್ಲೋ ಒಂಚೂರು ಮುಂಗೈಗೆ ಬೆಂಕಿ ತಗುಲಿತಷ್ಟೇ …

“ಅಮ್ಮಾ, ನಂಗೆ ಇಲ್ಲೇ ನೀರು ತಂದು ಕೊಡು, ಅಮ್ಮಾ, ನಂಗೆ ಶೂ ಹಾಕು, ಅಮ್ಮಾ, ನನ್ನ ಬ್ಯಾಗ್‌ ತಂದುಕೊಡು’ ಎಂದು ಕುಳಿತಲ್ಲಿಯೇ ಸೇವೆ ಮಾಡಿಸಿಕೊಳ್ಳುವ ನನ್ನ ಮಗರಾಯನಿಗೆ, ನಿನ್ನ ಕೆಲಸ ನೀನೇ ಮಾಡಬಾರದೇನೋ ಅಂತ ಕೇಳಿದರೆ, “ಸರದಾರ ಅವನು, ತಾನೇ ಮಾಡಿಕೊಳ್ಳಲು ಅವನೇನು ನಿನ್ನಂತೆ ಹೆಣ್ಣೇ …? ‘ ಅಂತ ಅತ್ತೆ ಸೊಲ್ಲು ನುಡಿವಾಗ, ಅವಡು ಗಚ್ಚುವಷ್ಟು ಕೋಪ ಬರಲಿಲ್ಲ… ಬಿಡಿ, ನಂಗೆ ಕೋಪ ಬರುವುದೇ ಇಲ್ಲ, ನನ್ನದು ಭಾರೀ ಶಾಂತ ಸ್ವಭಾವವಂತೆ!

Advertisement

ಕುರ್ತಾ ಜೀನ್ಸ್ ಹಾಕಿಕೊಂಡು ಬಿಂದಾಸ್‌ ಆಗಿ ಓಡಾಡುತ್ತಿದ್ದ ನನ್ನ ನಾದಿನಿಯನ್ನು, “ಎಲ್ಲಿ ತಗೊಂಡೆ? ಎಷ್ಟು ಚೆನ್ನಾಗಿದೆ’ ಅಂದಿದ್ದಕ್ಕೆ, “ಬಿಡಿ ಅತ್ತಿಗೆ, ನಿಮಗೆ ಸೀರೆ, ಚೂಡಿದಾರನೇ ಒಪ್ಪುತ್ತೆ’ ಅಂದ ಅವಳ ಜಾಣ್ಮೆಯ ಉತ್ತರಕ್ಕೆ, “ನಿನಗೇನು ಚೆನ್ನಾಗಿ ಒಪ್ಪುತ್ತಿದೆಯೇನಮ್ಮಾ?’ ಅಂತ ನಾನೇನೂ ಕುಹಕದ ಮಾತನ್ನಾಡೋದಿಲ್ಲ ಬಿಡಿ. ಯಾಕಂದ್ರೆ, ಆಡಬೇಕೆಂದ ಮಾತುಗಳು ಗಂಟಲಲ್ಲೇ ಕಲ್ಲಿನಂತೆ ಸಿಕ್ಕಿ ಹಾಕಿಕೊಳ್ಳುವುದು ಅಭ್ಯಾಸವಾಗಿದೆ ನನಗೆ!

“ನೀನ್ಯಾಕೆ ದುಡಿಯಬೇಕು? ಕಷ್ಟ ಪಡಬೇಕು? ನನ್ನ ದುಡ್ಡು, ಸರ್ವಸ್ವ ಎಲ್ಲವೂ ನಿಂದೇ ತಾನೇ …? ‘ ಎಂದವನು ಪೈಸೆ ಪೈಸೆಗೂ ಲೆಕ್ಕ ಕೇಳುವಾಗ, ಅವಮಾನದ ಛಡಿ ಏಟಿಗೆ ಸ್ವಾಭಿಮಾನ ನರಳಿದರೂ ಹೊಂದಾಣಿಕೆಯ ಹೊದಿಕೆ… ಇಲ್ಲಪ್ಪ, ಹಾಗೇನೂ ಇಲ್ಲ. ಗಂಡ ಹೆಂಡತಿ ಅಂದ ಮೇಲೆ ಯಾರೋ ಒಬ್ಬರು ಹೊಂದಿಕೊಂಡರಾಯಿತು. ಆದರೆ, ಪ್ರತೀ ಸಲವೂ “ಆ ಯಾರೋ ಒಬ್ಬರು’, ನಾನೇ ಆಗಿರಬೇಕಷ್ಟೆ! ತುಂಬಾ ಸುಲಭ ಅಲ್ಲವೇ ?

ನನಗೆ ಎಷ್ಟು ಆರಾಮು ಎಂದರೆ, ಮಾವನಿಗೆ ಕೋಪ ಬಂದೀತೆ? ಅತ್ತೆಗೆ ಬೇಸರವಾದೀತೆ? ಮಗನಿಗೆ ಸಕಲ ಸೌಕರ್ಯ ತಯಾರಾಗಿದೆಯೆ? ಗಂಡ ಸಿಟ್ಟಾದನೆ ? ಬಂದ ನೆಂಟರಿಗೆ ಸಮಾಧಾನವಾಯಿತೆ?… ಬರೀ ಇಷ್ಟನ್ನು ನೋಡಿಕೊಂಡರಾಯ್ತು. ಮತ್ತೆ ನನ್ನ ಕೋಪ, ಬೇಸರ, ಸೌಕರ್ಯ, ಸಿಟ್ಟು , ಸಮಾಧಾನ, ಆತಂಕ, ತೊಳಲಾಟ?… ಛೇ, ಮನೆಯ ಮಹಾಲಕ್ಷ್ಮಿಯಾದ ನಂಗೆ ಅವೆಲ್ಲ ಆಗೋಕೆ ಹೇಗೆ ಸಾಧ್ಯ?

ಅಡುಗೆ ಮನೆಯೆಂಬ ನನ್ನ ಹೆಡ್‌ ಆಫೀಸ್‌ನಲ್ಲಿ ನನ್ನ ಕನಸುಗಳು ನನ್ನನ್ನು ಗೇಲಿ ಮಾಡುವಾಗ, ನನಗೆ ನಾನೇ ಅಪರಿಚಿತವೆನಿಸುವಾಗ, ಸುಮ್ಮನೆ ಕಣ್ಣಲ್ಲಿ ಬರುವ ನೀರು,ದುಃಖದ್ದಲ್ಲ; ಈರುಳ್ಳಿ ಹೆಚ್ಚಿದ್ದ ಕಾರಣಕ್ಕಾಗಿ ಮಾತ್ರ …

– ಚೈತ್ರಾ ಬಿ.ಜಿ.

Advertisement

Udayavani is now on Telegram. Click here to join our channel and stay updated with the latest news.

Next