ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲೇ ಈ ಅಪಾಯಕಾರಿ ಸೇತುವೆಗಳು ಇವೆ. 1 ಕಿ.ಮೀ. ಅಂತರದಲ್ಲೇ ಈ ಎರಡು ಸೇತುವೆಗಳಿವೆ.
Advertisement
2015ರಲ್ಲಿ ಶಿರಾಡಿ ಘಾಟ್ ಸಂಚಾರ ಸ್ಥಗಿತಗೊಂಡಾಗ ವಾಹನ ಸಂಚಾರಕ್ಕೆ ಬದಲಿಯಾಗಿ ಪುತ್ತೂರು- ಮಡಿಕೇರಿ ಹೆದ್ದಾರಿಯನ್ನು ಬಳಸಿಕೊಳ್ಳಲಾಗಿತ್ತು. ಆ ಸಂದರ್ಭ ಘನ ವಾಹನಗಳು ಇದೇ ರಸ್ತೆಯಿಂದ ಸಂಚರಿಸುತ್ತಿದ್ದವು. ಪರ್ಪುಂಜ ಹಾಗೂ ಸಂಟ್ಯಾರ್ ಸೇತುವೆ, ತೀರಾ ಹದಗೆಟ್ಟಿದ್ದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವ ಅಗತ್ಯ ಇದೆ ಎಂದು ಪರಿಶೀಲನ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿತ್ತು. ಹೀಗಿದ್ದರೂ, ಸಮಸ್ಯೆ ಹಾಗೆಯೇ ಇದೆ. ಮಡಿಕೇರಿ, ಕಾಸರಗೋಡು, ಮೈಸೂರು, ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿ ಇದಾಗಿರುವುದರಿಂದ ದಿನನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಾಗಿ ಸಂಚರಿಸುತ್ತವೆ. ಇದರ ನಡುವೆ ದ್ವಿಚಕ್ರ ವಾಹನಗಳು ಅಪಾಯಕ್ಕೆ ಈಡಾಗುವ ಸಂಭವ ಹೆಚ್ಚಿದೆ.
ಪರ್ಪುಂಜ ಸೇತುವೆ ಇಳಿಜಾರಿನಲ್ಲಿದ್ದು, ತಿರುವಿನಲ್ಲಿದೆ. ಹಲವು ಅಪಘಾತ ಸಂಭವಿಸಿದ ಕಾರಣ, ಅಧಿಕಾರಿಗಳ ಗಮನ ಸೆಳೆಯಲಾಯಿತು. ಪರಿಣಾಮ ಇಳಿಜಾರಿನಲ್ಲಿ ಹಂಪ್ಸ್ ಹಾಕಿದರು. ಇದರಿಂದ ವಾಹನಗಳ ವೇಗಕ್ಕೆ ಕಡಿವಾಣ ಹಾಕಿ, ಅಪಘಾತ ಸ್ವಲ್ಪ ಕಡಿಮೆಯಾಯಿತು. ಸಂಟ್ಯಾರ್ ಹಾಗೂ ಪರ್ಪುಂಜ ಸೇತುವೆ ಅಪಾಯಕಾರಿಯಾಗಿದ್ದು, ತತ್‌ಕ್ಷಣ ಕಾಮಗಾರಿ ನಡೆಸುವ ಅಗತ್ಯವಿದೆ. ಮಳೆಗಾಲದಲ್ಲಿ ಕೆಲಸ ಕಷ್ಟ ಎನ್ನುವುದಾದರೆ, ಅಪಾಯ ಸೂಚಿಸುವ ರಿಬ್ಬನ್ ಹಾಕುವ ಕೆಲಸವನ್ನಾದರೂ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ತೀರಾ ತಿರುವಿನಲ್ಲಿದೆ
ಸಂಟ್ಯಾರ್ ಸೇತುವೆ ತಿರುವಿನಲ್ಲಿದ್ದು, ವಾಹನ ಸವಾರರಿಗೆ ತತ್‌ಕ್ಷಣ ಗಮನಕ್ಕೆ ಬರು ವುದಿಲ್ಲ. ಒಮ್ಮೆಗೆ ತಿರುವು ತೆಗೆದುಕೊಂಡಾಗ ಎದುರಿನಿಂದ ಇನ್ನೊಂದು ವಾಹನ ಬಂದರೆ ಚಾಲಕನ ನಿಯಂತ್ರಣ ತಪ್ಪಬಹುದು. ತತ್‌ಕ್ಷಣ ವಾಹನವನ್ನು ರಸ್ತೆ ಬದಿಗೆ ಸರಿಸಿದರೆ, ತಡೆಗೋಡೆ ಮುರಿದ ಸೇತುವೆಯಿಂದ ಕೆಳಗೆ ಬೀಳುವ ಅಪಾಯ ಇದೆ. ಘನ ವಾಹನಗಳು ಸೇತುವೆ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ, ಹಾನಿ ಸಂಭವಿಸಿರುವ ಉದಾಹರಣೆಗಳೂ ಇದೆ.
Related Articles
ಸಂಟ್ಯಾರ್ ಹಾಗೂ ಪರ್ಪುಂಜ ಸೇತುವೆ ತೀರಾ ತಿರುವಿನಲ್ಲಿ ಇದೆ. ಹೆಚ್ಚಿನ ಘನ ವಾಹನಗಳು ಸಂಚರಿಸುವಾಗ ಇತರ ವಾಹನಗಳಿಗೆ ಸಂಚರಿಸಲು ಕಷ್ಟವಾಗುತ್ತಿವೆ. ಅಲ್ಲದೇ, ಈ ಮೊದಲು ಹಲವು ಅಪಘಾತ ನಡೆದು, ಪ್ರಾಣ ಹಾನಿ ಆದ ಘಟನೆಯೂ ನಡೆದಿದೆ. ಇದರ ಬಗ್ಗೆ ತಕ್ಷಣ ಸಂಬಂಧಪಟ್ಟವರು ಗಮನ ಹರಿಸಬೇಕು.
– ಅನಿಲ್ ರೈ, ಪೆರಿಗೇರಿ
ರಿಕ್ಷಾ ಚಾಲಕ
Advertisement
ವಿಶೇಷ ವರದಿ