ನೀವು ಕೇರಳ ಹೋಟೆಲ್‌ಗೆ ಹೋಗಿದ್ದೀರಿ ಅಂದ್ರೆ ಮಲಬಾರ್ ಅಥವಾ ಕೇರಳ ಪರೋಟ ರುಚಿ ಸವಿದಿರುತ್ತೀರಿ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರಕ್ಕೆ ಬಂದ್ರೆ ಸಾಕು… ಸ್ವಾದಿಷ್ಟ ಬಿಸಿ ಬಿಸಿ ಕೇರಳ ಪರೋಟ ಸವಿಯಬಹುದು. 50 ವರ್ಷಗಳ ಹಿಂದೆಯೇ ಕೇರಳದ ಪಾಲಕ್ಕಾಡ್‌ನಿಂದ ಮೈಸೂರಿನ ದಸರಾ ನೋಡಲು ಬಂದ ರಾಮಚಂದ್ರ, ಮತ್ತೆ ಊರಿಗೆ ಹಿಂದಿರುಗದೇ, ಸ್ವಲ್ಪ ವರ್ಷಗಳ ಕಾಲ ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡು ಹೋಟೆಲ್ ಪ್ರಾರಂಭಿಸಿದ್ದರು.
ಗುಳ್ಳಾಪುರ ಗ್ರಾಮವು, ಹುಬ್ಬಳ್ಳಿ- ಅಂಕೋಲಾ ರಾಷ್ಟ್ರೀಯ ಹೆದ್ದಾರಿ 63ರಲ್ಲೇ ಇರುವ ಕಾರಣ ಲಾರಿ, ಬಸ್, ಕಾರು ಇತರೆ ವಾಹನಗಳ ಚಾಲಕರು, ಪ್ರಯಾಣಿಕರು, ಕೂಲಿ ಕಾರ್ಮಿಕರು, ಸ್ಥಳೀಯರು ಹೋಟೆಲ್‌ಗೆ ಬರುವುದರಿಂದ ವ್ಯಾಪಾರವೂ ಚೆನ್ನಾಗಿ ಆಯಿತು. ಈಗಲೂ ಅದು ಮುಂದುವರಿದಿದೆ. ಸದ್ಯ ರಾಮಚಂದ್ರ ಅವರಿಗೆ ವಯಸ್ಸಾಗಿರುವ ಕಾರಣ, ಈಗ ಮೋಹನ್, ಆನಂದ್ ಹೋಟೆಲ್ ಮುನ್ನಡೆಸುತ್ತಿದ್ದಾರೆ. ಇವರಿಗೆ ಗಂಗಾ, ಶೋಭಾ, ಸೌಭಾಗ್ಯ ಸಾಥ್ ನೀಡುತ್ತಿದ್ದಾರೆ.
ಭಟ್ರು ಎಂದೇ ಫೇಮಸ್ಸು: ಮೊದಲು ಹೋಟೆಲ್‌ಗೆ ಯಾವುದೇ ನಾಮಫಲಕವಿರಲಿಲ್ಲ. ಇವರು ಕೇರಳ ಬ್ರಾಹ್ಮಣರಾಗಿದ್ದರಿಂದ ಪೂಜಾರಿಗಳು, ಭಟ್ರು ಎಂದೇ ಸ್ಥಳೀಯರು ಕರೆಯುತ್ತಿದ್ದರು. ಹೋಟೆಲ್‌ಗೂ ಅದೇ ಹೆಸರು ಉಳಿಯಿತು. ಆಗಸ್ಟ್‌ನಲ್ಲಿ ಸುರಿದ ಧಾರಾಕಾರ ಮಳೆಗೆ ಹೋಟೆಲ್ ಸಂಪೂರ್ಣ ಜಲಾವೃತಗೊಂಡು ಹಾಳಾಗಿತ್ತು. ಇದರಿಂದ ಒಂದು ತಿಂಗಳು ಹೋಟೆಲ್ ಮುಚ್ಚಬೇಕಾಯಿತು. ಹಳೇ ಹೋಟೆಲ್ ಪಕ್ಕದಲ್ಲೇ ಶೆಡ್ ಮಾಡಿ ಅದಕ್ಕೆ ಗಂಗಾ ಹೋಟೆಲ್ ಎಂದು ಹೆಸರಿಟ್ಟು ಪುನಃ ಹೋಟೆಲ್ ಆರಂಭಿಸಿದ್ದಾರೆ.
ಪರೋಟಕ್ಕೇ ಡಿಮ್ಯಾಂಡ್: ಇಡ್ಲಿ, ಪೂರಿ, ಇತರೆ ತಿಂಡಿಗಳನ್ನು ಮಾಡಲಾಗುತ್ತದೆಯಾದರೂ, ಪರೋಟಕ್ಕೇ ಡಿಮ್ಯಾಂಡ್ ಜಾಸ್ತಿ. ದರ 25 ರೂ. ಮಾತ್ರ. ಅಡುಗೆಗೆ ಬಳಸುವ ಪದಾರ್ಥಗಳನ್ನು ಮನೆಯಲ್ಲೇ ತಯಾರಿಸಿಕೊಳ್ಳುತ್ತಾರೆ ಹೀಗಾಗಿ ಖರ್ಚು ಕಡಿಮೆ. ತಿಂಡಿ, ಊಟದ ದರವೂ ಜೇಬಿಗೆ ಭಾರವೆನಿಸುವುದಿಲ್ಲ. ಮಧ್ಯಾಹ್ನಕ್ಕೆ ಅನ್ನ, ಸಾಂಬಾರು, ಫಲ್ಯ, ತಂಬಳಿ, ಹಪ್ಪಳ, ಮೊಸರು, ಉಪ್ಪಿನಕಾಯಿ ಇಷ್ಟಕ್ಕೆ ದರ 50 ರೂ., ಇದರ ಜೊತೆಗೆ ಮಿರ್ಚಿ, ಪಕೋಡ, ಆಲೂ ಪಕೋಡ, ಗಿರ್ಮಿಟ್, ವಡೆ, ಮಿಸಳ್, ಟೀ, ಕಾಫಿ, ಕಷಾಯ ರಾತ್ರಿ 8ರವರೆಗೂ ಸಿಗುತ್ತದೆ. ದರ 10 ರೂ.
ಹೋಟೆಲ್‌ನ ತಿಂಡಿ: ಬೆಳಗ್ಗೆ ತಿಂಡಿಗೆ ಕೇರಳ ಪರೋಟ, ಬನ್ಸ್, ಇಡ್ಲಿ, ಪೂರಿ, ಪಲಾವ್ ಜೊತೆಗೆ ತೆಂಗಿನ ಕಾಯಿ ಚಟ್ನಿ, ಸಾಂಬಾರ್, ಫಲ್ಯ ಕೊಡಲಾ ಗುತ್ತದೆ. ಎಲ್ಲರ ದರ 20 ರೂ. ಒಳಗೆ.
ಎಳ್ಳು, ಬೆಲ್ಲದ ನೀರು: ಬೇಸಿಗೆಯಲ್ಲಿ ದೇಹ ತಂಪಾಗಿಡಲು ಎಳ್ಳು ಬೆಲ್ಲದಿಂದ ತಯಾರಿಸಿದ ದೇಸೀ ಪಾನೀಯ ಇಲ್ಲಿ ಸಿಗುತ್ತದೆ. ರಾತ್ರಿ ಎಳ್ಳು ಬೆಲ್ಲವನ್ನು ರುಬ್ಬಿ ಫ್ರಿಜ್‌ನಲ್ಲಿ ಇಟ್ಟು ಬೆಳಗ್ಗೆ ಮಾರಾಟ ಮಾಡಲಾಗುತ್ತದೆ. ದರ 10 ರೂ.
ವಿಳಾಸ: ಗಂಗಾ ಹೋಟೆಲ್(ಪೂಜಾರಿ ಹೋಟೆಲ್), ಮಧು ಕ್ಲಿನಿಕ್ ಎದುರು, ಗುಳ್ಳಾಪುರ ಗ್ರಾಮ, ಯಲ್ಲಾಪುರ
ಸಮಯ: ಬೆಳಗ್ಗೆ 5.30 ರಿಂದ ರಾತ್ರಿ 8ರವರೆಗೆ, ಭಾನುವಾರ ಮಧ್ಯಾಹ್ನದವರೆಗೆ ತೆರೆದಿರುತ್ತದೆ.
* ಭೋಗೇಶ್ ಆರ್. ಮೇಲುಕುಂಟೆ