ನವದೆಹಲಿ: ಕೇಂದ್ರ ಸರ್ಕಾರ ತನ್ನ ಆಡಳಿತಾವಧಿಯ ಕೊನೆಯ ಬಜೆಟ್ ಮಂಡಿಸಲು ಸಿದ್ಧವಾಗಿದ್ದು, ಜನವರಿ 31ರಿಂದ ಸಂಸತ್ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:Passport Index; ವೀಸಾ ಇಲ್ಲದೆ ಈ 62 ದೇಶಗಳಿಗೆ ಭಾರತೀಯರು ಪ್ರಯಾಣಿಸಬಹುದು: ಇಲ್ಲಿದೆ ಪಟ್ಟಿ
ಸರ್ಕಾರದ ಐದು ವರ್ಷಗಳ ಸಾಧನೆ ಸೇರಿದಂತೆ ಪ್ರಮುಖ ಅಂಶಗಳ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡುವ ಮೂಲಕ ಸಂಸತ್ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಪ್ರಸಕ್ತ ಸಾಲಿನ ಮಧ್ಯಂತರ ಬಜೆಟ್ ಅನ್ನು ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಅಧಿವೇಶನದ ಮೊದಲ ಹಂತ ಫೆಬ್ರವರಿ 9ರಂದು ಮುಕ್ತಾಯಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಹಿಂದಿನ ಮೂರು ವರ್ಷಗಳಲ್ಲಿ “ಕಾಗದ ರಹಿತ” ಬಜೆಟ್ ಅನ್ನು ಮಂಡಿಸಲಾಗಿದ್ದು, ಈ ಬಾರಿಯೂ ಪೇಪರ್ ಲೆಸ್ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. 2021ರ ಕೋವಿಡ್ 19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕಾಗದರಹಿತ ಬಜೆಟ್ ಅನ್ನು ಮಂಡಿಸಲು ಆರಂಭಿಸಲಾಗಿತ್ತು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಆರನೇ ಬಜೆಟ್ ಅನ್ನು ಮಂಡಿಸಲಿದ್ದಾರೆ. ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಅನ್ನು ಮಂಡಿಸಲಿದ್ದಾರೆ.
ಸಂಪ್ರದಾಯದ ಪ್ರಕಾರ, ವೋಟ್ ಆನ್ ಅಕೌಂಟ್ ಅಥವಾ ಸೀಮಿತ ಅವಧಿಗೆ ಅಗತ್ಯವಾದ ಸರ್ಕಾರಿ ವೆಚ್ಚಗಳಿಗೆ ಅನುಮೋದನೆಯನ್ನು ಚುನಾವಣಾ ವರ್ಷದಲ್ಲಿ ಪಡೆಯಲಾಗುತ್ತದೆ. ಬಳಿಕ ನೂತನ ಸರ್ಕಾರವು ಪೂರ್ಣ ಪ್ರಮಾಣದ ಬಜೆಟ್ ಅನ್ನು ಮಂಡಿಸಲಿದೆ.