Advertisement
ಒಂದನೆಯದು ಪಾರ್ಲಿಮೆಂಟರಿ ಸತ್ತೆಯ ಜೀವಾಳವಾದ ಸಂಖ್ಯಾ ಬಲದ ಲೆಕ್ಕಾಚಾರ ತಂದಿಟ್ಟಿರುವ ಆವಾಂತರಗಳು. ಪಾರ್ಲಿಮೆಂಟರಿ ಸತ್ತೆ ಸಂಖ್ಯೆಯನ್ನು ಆಧರಿಸಿದ ರಾಜಕೀಯ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಕಾರ್ಯಾಂಗದ ಜೀವ ಶಾಸಕಾಂಗದ ಸಂಖ್ಯೆಯ ಬೆಂಬಲದ ಶಕ್ತಿಯ ಮೇಲೆ ನಿಂತಿರುತ್ತದೆ. ಅಮೆರಿಕ ಅಳವಡಿಸಿಕೊಂಡಂಥ ಅಧ್ಯಕ್ಷೀಯ ವ್ಯವಸ್ಥೆಯಲ್ಲಿ ಹಾಗಿರುವುದಿಲ್ಲ. ಶಾಸನ ಸಭೆಯಲ್ಲಿ ಸದಸ್ಯರ ಬೆಂಬಲದ ಸಂಖ್ಯೆಯ ಮೇಲೆ ಅಲ್ಲಿ ಸರ್ಕಾರದ ಸಾವು ಬದುಕು ನಿಂತಿರುವುದಿಲ್ಲ. ಅಂತಹ ವ್ಯವಸ್ಥೆಯಲ್ಲಿ ಶಾಸನ ಸಭೆ ಕೇವಲ ಒಂದು ಡಿಬೇಟಿಂಗ್ ಚೇಂಬರ್. ಅಲ್ಲಿ ಚರ್ಚೆ-ವಿಚರ್ಚೆ ನಿರಂತರ ನಡೆದಿರುತ್ತದೆ. ಚರ್ಚೆಯ ಉದ್ದೇಶ ಜನಾಭಿಪ್ರಾ ರೂಪಿಸುವುದು. ನೀತಿಗಳನ್ನು ಚರ್ಚಿಸುವುದು. ಅಲ್ಲಿ ಪಕ್ಷಗಳ ಸಂಖ್ಯಾ ಬಲಕ್ಕೂ, ಸರ್ಕಾರದ ಅಳಿವು ಉಳಿವಿಗೂ ಸಂಬಂಧ ಇರುವುದಿಲ್ಲ. ಅವೆಲ್ಲ ಪ್ರತ್ಯೇಕ ವಿಷಯಗಳು. ಆದರೆ ಪಾರ್ಲಿಮೆಂಟರಿ ವ್ಯವಸ್ಥೆ ಹಾಗಲ್ಲ. ಸಂಸದರಿಗೆ, ಶಾಸಕರಿಗೆ ಎರಡು ರೀತಿಯ ಅಧಿಕಾರ ಅಥವಾ ಪಾತ್ರ ಇರುತ್ತದೆ. ಒಂದನೆಯದು: ಪಕ್ಷಗಳು ಶಾಸಕಾಂಗದಲ್ಲಿ ಹೊಂದಿರುವ ಸಂಖ್ಯೆ ಯಾರು ಬಹುಮತ ಯಾರು ಅಲ್ಪಮತ ಎನ್ನುವುದನ್ನು ನಿರ್ಧರಿಸುತ್ತದೆ. ಬಹುಮತದಲ್ಲಿರುವವರು ಸರ್ಕಾರ ರಚಿಸುತ್ತಾರೆ. ಅಲ್ಪಮತ ಇರುವವರು ವಿರೋಧ ಪಕ್ಷದ ಸಾಲಿನಲ್ಲಿ ಕುಳಿತುಕೊಳ್ಳಬೇಕು. ಆದರೆ ಈ ರೀತಿಯ ಅಧಿಕಾರವನ್ನು ನಿರ್ಧರಿಸುವ ಶಾಸಕಾಂಗದ ಸಂಖ್ಯೆಯೇ ಇಂದಿನ ದಿನಗಳಲ್ಲಿ ತೀವ್ರ ತರದ ತಲ್ಲಣಗಳಿಗೆ ಕಾರಣವಾಗಿದೆ. ಅಧಿಕಾರದ ಲಾಲಸೆಗಾಗಿ ಕೆಲವರು ತಮ್ಮನ್ನೇ ಮಾರಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಸಂವಿಧಾನ ನಿರೂಪಕರು ಊಹಿಸಲೂ ಸಾಧ್ಯವಿರದಿದ್ದ ಘಟನೆಗಳು ನಡೆದು ಹೋಗಿವೆ. ಉದಾಹರಣೆಗೆ ಕರ್ನಾಟಕದ ರಾಜಕೀಯ. ಆಳುವ ಹಾಗೂ ವಿರೋಧಿ ಪಕ್ಷಗಳ ನಡುವಿನ ಅಂತರ ತೀರ ಕಡಿಮೆ ಇರುವ ಸನ್ನಿವೇಶ ರಾಜಕೀಯವಾಗಿ ಎಂತಹ ದುರ್ಭರ ಸ್ಥಿತಿ ತಂದಿಡಬಹುದು ಎನ್ನುವುದಕ್ಕೆ ಕರ್ನಾಟಕ ಉದಾಹರಣೆ.
Related Articles
Advertisement
ಹಾಗಾಗಿ ಪಕ್ಷಗಳು ತಮ್ಮ ಶಾಸಕರನ್ನು/ಸಂಸದರನ್ನು ಕಾಯ್ದುಕೊಳ್ಳಬೇಕಾದ ವಿಧಾನವೆಂದರೆ ಅವರನ್ನು ರೆಸಾರ್ಟ್ ಗಳಲ್ಲಿ ಬಚ್ಚಿಡುವುದು ಅಲ್ಲ. ಮುಖ್ಯವಾಗಿ ಮಾಡಬೇಕಾಗಿದ್ದು ಐಡಿಯಾಲಾಜಿಕಲ್ ಆಗಿ ಬದ್ಧಗೊಳಿಸುವುದರಲ್ಲಿ, ಆಗ ಅವರು ಪಕ್ಷ ಬಿಟ್ಟು ಹೋಗುವುದಿಲ್ಲ. ಪಕ್ಷಗಳು ತಮ್ಮ ತತ್ವಾದರ್ಶಗಳನ್ನು ಮೊದಲು ಗುರುತಿಸಿಕೊಂಡು ನಂತರ ತಮ್ಮ ಕಾರ್ಯಕರ್ತರನ್ನು ಅಂತಹ ಬೌದ್ಧಿಕತೆಯಲ್ಲಿ ಮುಳಗಿಸಬೇಕು..ಕಾರ್ಯಕರ್ತರನ್ನು ಹುರಿದುಂಬಿಸಲು, ಅವರ ಮನಸ್ಸಿನಲ್ಲಿ ಆದರ್ಶಗಳನ್ನು ತುಂಬಲು ವಿವಿಧ ಹಂತಗಳಲ್ಲಿ ಅಂದರೆ ಬೇರೆ ಬೇರೆ ಹಂತದ ಚುನಾವಣೆಗಳಿಗೆ ಸ್ಪರ್ಧಿಸುವವರಿಗಾಗಿ ಐಡಿಯಾಲಾಜಿಕಲ್ ಸ್ಕೂಲ್‌ಗಳನ್ನು ಆರಂಭಿಸಬೇಕಿದೆ. ಪಕ್ಷಗಳು ಈ ದಾರಿಯಲ್ಲಿ ಚಿಂತಿಸದಿದ್ದರೆ ಅವುಗಳಿಗೆ ತಮ್ಮ ಶಾಸಕರನ್ನು ಹತೋಟಿಯಲ್ಲಿಡಲು ಮುಂದೆ ಸಾಧ್ಯವಾಗುವುದೇ ಇಲ್ಲ.
ಎರಡನೆಯ ತಲ್ಲಣವೆಂದರೆ ಆಯ್ಕೆಯಾಗುತ್ತಿರುವ ಜನಪ್ರತಿನಿಧಿಗಳ ಬೌದ್ಧಿಕ ಗುಣಮಟ್ಟ. ಸಂಸದೀಯ ಪ್ರಭುತ್ವ ಬೇಡುವ ಈ ಎರಡನೆಯ ಮಹತ್ವದ ವಿಷಯವೆಂದರೆ ಜನಪ್ರತಿನಿಧಿಗಳು ದೇಶದ ಕುರಿತು, ತಮ್ಮ ಕ್ಷೇತ್ರದ ಕುರಿತು ವಿಶಾಲ ಜ್ಞಾನ ಹೊಂದಿ ಕಾನೂನು ರಚನೆಯ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎನ್ನುವುದು. ನಿಜವಾಗಿಯೂ ಸಂಸದನಾಗುವ ವ್ಯಕ್ತಿ ಪ್ರಾಧ್ಯಾಪಕನ ರೀತಿಯ ಜ್ಞಾನವನ್ನು ಮತ್ತು ಇಂದಿನ ದಿನಗಳಲ್ಲಿ ತಂತ್ರಜ್ಞಾನದ ಬಳಕೆಯನ್ನು ಬಲ್ಲವನಾಗಿರಬೇಕು.
ಭಾರತದ ಸಂವಿಧಾನ ಬಯಸುವುದು ಪ್ರತಿಯೊಬ್ಬ ಜನಪ್ರತಿನಿಧಿಯೂ ತನ್ನ ಪ್ರದೇಶದ ಪ್ರಾತಿನಿಧಿಕ ಧ್ವನಿಯಾಗು ವುದರ ಜತೆ ರಾಷ್ಟ್ರೀಯ ಧ್ವನಿಯಾಗಬೇಕು ಎನ್ನುವುದು. ಒಂದು ಸಂಸ್ಕೃತಿಯ, ಭೌಗೋಳಿಕತೆಯ ವಿಭಿನ್ನತೆಯನ್ನು, ವಿವಿಧತೆ ಯನ್ನು ರಾಷ್ಟ್ರೀಯ ಕಾನೂನು ಮಾಡುವ ಪ್ರಕ್ರಿಯೆಯಲ್ಲಿ ಅಳವಡಿಸುವ, ಆ ಕುರಿತಂತೆ ಚರ್ಚಿಸಬಲ್ಲ ಸಾಮರ್ಥ್ಯ ಜನಪ್ರತಿನಿಧಿ ಹೊಂದಿರಬೇಕಾಗುತ್ತದೆ. ಅಷ್ಟೇ ಅಲ್ಲದೇ ಇಂದಿನ ಜಗತ್ತನ್ನು ಎದುರಿಸುವ ಸಮಸ್ಯೆಗಳ ಕುರಿತು ಆಳವಾದ ಜ್ಞಾನ ಹೊಂದಿರಬೇಕಾಗುತ್ತದೆ. ಸ್ವಾತಂತ್ರÂ ನಂತರದ ಸಂಸತ್ತುಗಳಲ್ಲಿ ಅಂತಹ ಜ್ಞಾನವಂತರು ದೊಡ್ಡ ಸಂಖ್ಯೆಯಲ್ಲಿ ಇದ್ದರು.
ಜ್ಞಾನವಂತರು ರಾಜಕೀಯದಲ್ಲಿ ಅಪ್ರಸ್ತುತ ಎನ್ನುವ ಭಾವನೆಯನ್ನು ರಾಜಕೀಯ ಪಕ್ಷಗಳು ಹೊಂದಿದಂತೆಯೂ ತೋರುತ್ತಿದೆ. ಆದರೆ ಇಂದಿನ ಜಗತ್ತು ಜ್ಞಾನ ಆಧರಿತವಾದುದು. ಅಷ್ಟೇ ಅಲ್ಲ, ಇಂದಿನ ಜ್ಞಾನದ ವ್ಯವಸ್ಥೆಗಳು ಕೂಡ ಸಂಕೀರ್ಣವಾದವುಗಳು. ಇಂತಹ ಬದಲಾದ ಪರಿಸ್ಥಿತಿಯಲ್ಲಿ ಕಾನೂನುಗಳ ರಚನೆ ಸಹಜವಾಗಿಯೇ ತುಂಬ ಕ್ಲಿಷ್ಟವಾದುದು. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಅದರಲ್ಲಿಯೂ ಪ್ರಮುಖ ರಾಷ್ಟ್ರೀಯ ಪಕ್ಷಗಳು ವಿವಿಧ ವಿಷಯಗಳಲ್ಲಿ ಜ್ಞಾನವಂತರನ್ನು ಸಂಸತ್ತಿನಲ್ಲಿ ತಮ್ಮ ಪಕ್ಷದ ಸದಸ್ಯರನ್ನಾಗಿ ಹೊಂದಿಕೊಳ್ಳುವ ಅಗತ್ಯತೆ ಇದೆ. ಅಂದುಕೊಂಡಂತೆ ಈಗಾಗಲೇ ಸರಕಾರಗಳು ಸಂಪುಟ ರಚನೆಯಲ್ಲಿ ಪ್ರತಿಭೆಯ ಕೊರತೆಯನ್ನು ಎದುರಿಸುತ್ತಿವೆ. ಪಕ್ಷಗಳು ಕೇವಲ ಗೆಲ್ಲುವ ಕುದುರೆಗಳ ಮೇಲೆ ಗಮನಹರಿಸಿದರೆ ಇನ್ನು ಮುಂದೆ ಸಂಸತ್ತಿನಲ್ಲಿ ಬಹುಶಃ ಪ್ರತಿಭೆಯ ಕೊರತೆ ತೀವ್ರವಾಗಲಿದೆ. ಜ್ಞಾನವಂತರು, ಪ್ರತಿಭಾನ್ವಿತರು ಸಂಸತ್ತಿನಲ್ಲಿ ಕಡಿಮೆ ಆಗುತ್ತಿರುವುದು ಕೂಡ ಸಂಸದೀಯ ಪ್ರಭುತ್ವದ ತಲ್ಲಣಗಳಲ್ಲೊಂದು.
ಡಾ|| ಆರ್.ಜಿ.ಹೆಗಡೆ, ದಾಂಡೇಲಿ