Advertisement

Parliament: ನಾಳೆಯಿಂದ ಚಳಿಗಾಲದ ಅಧಿವೇಶನ- ಕಾವೇರಿಸುತ್ತಾ ಕೊನೆ ಸೆಷನ್‌?

12:07 AM Dec 03, 2023 | Team Udayavani |

ಹೊಸದಿಲ್ಲಿ: ಸಂಸತ್‌ನ ಚಳಿಗಾಲದ ಅಧಿವೇಶನ ಸೋಮವಾರದಿಂದ ಡಿ.22ರ ವರೆಗೆ ನಡೆಯಲಿದೆ. ರಾಜ್ಯಗಳ ಚುನಾವಣೆಯ ಫ‌ಲಿತಾಂಶ ಮತ್ತು ಹಾಲಿ ಲೋಕಸಭೆಯ ಕೊನೆಯ ಪೂರ್ಣಾವಧಿಯ ಅಧಿವೇ ಶನವೂ ಇದುವೇ ಆಗಲಿದೆ. ಹೀಗಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಬಿರುಸಿನ ವಾಗ್ವಾದಗಳು ನಡೆಯುವ ಸಾಧ್ಯತೆಗಳು ಅಧಿಕವಾಗಿವೆ.

Advertisement

ಅದಕ್ಕೆ ಪೂರಕವಾಗಿ ಹೊಸದಿಲ್ಲಿಯಲ್ಲಿ ಶನಿವಾರ ಸರ್ವಪಕ್ಷಗಳ ಸಭೆಯೂ ನಡೆಯಿತು. ಈ ಸಂದರ್ಭ ದಲ್ಲಿ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಎಲ್ಲ ವಿಚಾರಗಳ ಬಗ್ಗೆ ಅಧಿವೇಶನದಲ್ಲಿ ಮುಕ್ತ ಮನಸ್ಸಿನಿಂದ ಚರ್ಚೆ ನಡೆಸಲು ಸರಕಾರ ಸಿದ್ಧವಿದೆ ಎಂದು ಹೇಳಿದ್ದಾರೆ.

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಲೋಕಸಭೆಯ ಎಥಿಕ್ಸ್‌ ಕಮಿಟಿ ಸಲ್ಲಿಸಿರುವ ವರದಿಯನ್ನು ಮಂಡಿಸಿ, ಅದರ ಬಗ್ಗೆ ಚರ್ಚೆ ಆಗಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ. ಇದರ ಜತೆಗೆ ಸಭೆಯಲ್ಲಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷ ಸಂಹಿತೆ, ಭಾರತೀಯ ಸಾಕ್ಷ್ಯ ಅಧಿ ನಿಯಮ ಮಸೂದೆಗಳು ಸೇರಿದಂತೆ 19 ಮಸೂದೆಗಳನ್ನು ಮಂಡಿಸಿ, ಅನುಮೋದನೆ ನೀಡುವ ಬಗ್ಗೆ ಪರಾಮರ್ಶೆ ನಡೆಸಲಾಯಿತು. ಇದಲ್ಲದೆ ಪ್ರಸಕ್ತ ವಿತ್ತೀಯ ವಿಚಾರಕ್ಕೆ ಸಂಬಂಧಿಸಿದ ಎರಡು ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿ ಅನುಮೋದನೆ ನೀಡಲಾಗುತ್ತದೆ.
ಕಾಂಗ್ರೆಸ್‌ನ ಮನೀಶ್‌ ತಿವಾರಿ ಮಾತನಾಡಿ ಮಣಿಪುರದಲ್ಲಿನ ಹಿಂಸಾಗ್ರಸ್ಥ ಪರಿಸ್ಥಿತಿಯ ಬಗ್ಗೆಯೂ ಕೂಡ ಸಮಗ್ರ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು. ಹೆಚ್ಚುತ್ತಿರುವ ಹಣದುಬ್ಬರ, ಇ.ಡಿ., ಸಿಬಿಐಗಳ ದುರುಪಯೋಗಗಳ ಬಗ್ಗೆಯೂ ಚರ್ಚೆಗೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಎಲ್ಲವೂ ಚರ್ಚೆ: ಸಭೆಯ ಅನಂತರ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ “ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಮನಸ್ಸು ಸರಕಾರಕ್ಕೆ ಇದೆ. ಅಲ್ಪಾವಧಿಯ ಚರ್ಚೆಯ ಬಗ್ಗೆ ಬೇಡಿಕೆ ಮಂಡಿಸುವ ವೇಳೆ, ಸದನದಲ್ಲಿನ ವಾತಾವರಣ ಉತ್ತಮ ನಿರ್ಮಿಸಿ ಚರ್ಚೆಗೆ ಉತ್ತಮ ವಾತಾವರಣ ಕಲ್ಪಿಸಿಕೊಡಬೇಕು’ ಎಂದರು.
ಜನವರಿ ಮತ್ತು ಫೆಬ್ರವರಿಯಲ್ಲಿ ಸಂಸತ್‌ನ ಅಲ್ಪಾ ವಧಿ ಅಧಿವೇಶನ ನಡೆಯಲಿದೆ. ಈ ಸಂದರ್ಭದಲ್ಲಿ ಲೇಖಾನುದಾನ ಮಂಡಿಸಲಾಗುತ್ತದೆ ಎಂದರು.

ಗದ್ದಲವೇ ಇಲ್ಲ?: ಹಾಲಿ ಲೋಕಸಭೆಯ ಪೂರ್ಣ ಪ್ರಮಾಣದ ಕೊನೆಯ ಅಧಿವೇಶನ ಇದಾಗಿರು ವುದರಿಂದ ವಿಪಕ್ಷಗಳೂ ಕೂಡ ಸದನದಲ್ಲಿ ಗದ್ದಲ ಎಬ್ಬಿಸುವ ಮನಸ್ಸು ಮಾಡದೇ ಇರಲು ತೀರ್ಮಾನಿಸಿವೆ ಎಂದು ಹೇಳಲಾಗಿದೆ. ಆದರೆ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ವಿರುದ್ಧ ಎಥಿಕ್ಸ್‌ ಕಮಿಟಿಯ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಕಾವೇರಿದ ವಾತಾ ವರಣದಲ್ಲಿ ವಾಗ್ವಾದ ನಡೆಯುವ ಸಾಧ್ಯತೆಗಳಿವೆ.

Advertisement

ಹಿಂದಿಗೆ ಆಕ್ಷೇಪ: ಅಪರಾಧ ದಂಡ ಸಂಹಿತೆ, ಸಾಕ್ಷ್ಯ ಕಾಯ್ದೆಗಳ ಸ್ಥಾನದಲ್ಲಿ ಮಂಡಿಸಲು ಉದ್ದೇಶಿಸಲಾ ಗಿರುವ ಮಸೂದೆಗಳಿಗೆ ಹಿಂದಿಯ ಹೆಸರು ಇರಿಸಿದ್ದಕ್ಕೆ ಆರ್‌ಎಸ್‌ಪಿಯ ಎನ್‌.ಕೆ. ಪ್ರೇಮಚಂದ್ರನ್‌ ಆಕ್ಷೇಪಿಸಿದ್ದಾರೆ. ಇದು ದಕ್ಷಿಣ ಭಾರತೀಯರಿಗೆ ಮಾಡಿದ ಅವಮಾನ ಎಂದು ದೂರಿದರು.

ಉಚ್ಚಾಟನೆ ಶಿಕ್ಷೆ ಹೆಚ್ಚಾಯಿತು: ಅಧಿರ್‌ ರಂಜನ್‌
ಟಿಎಂಸಿ ನಾಯಕಿ ಮಹುವಾ ಮೊಯಿತ್ರಾರನ್ನು ಉಚ್ಚಾಟಿಸುವ ಶಿಫಾರಸಿಗೆ ಅನುಮೋದನೆ ನೀಡಿದರೆ ದೂರಗಾಮಿ ಪರಿಣಾಮ ಉಂಟಾದೀತು. ಜತೆಗೆ ಇಂಥ ತೀರ್ಮಾನ ಅತಿರೇಕದ್ದು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ ಹೇಳಿದ್ದಾರೆ. ಈ ಬಗ್ಗೆ ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದಿರುವ ಅವರು, ಉಚ್ಚಾಟನೆ ಎಂದರೆ ಅದು ಕಠಿನ ಶಿಕ್ಷೆ. ಹೀಗಾಗಿ ಅದನ್ನು ಪರಿಶೀಲಿಸಬೇಕು. ಎಥಿಕ್ಸ್‌ ಕಮಿಟಿ ಮತ್ತು ಹಕ್ಕುಬಾಧ್ಯತಾ ಸಮಿತಿಗಳಿಗೆ ಹೆಚ್ಚು ವ್ಯತ್ಯಾಸವಿಲ್ಲ. ಹೀಗಾಗಿ ಈ ನಿಯಮಗಳನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next