Advertisement

ಎರಡು ಹಂತದಲ್ಲಿ ಸಂಸತ್ ಅಧಿವೇಶನ, ಫೆ.1ರಂದು ಬಜೆಟ್ ಮಂಡನೆ: ಪ್ರಹ್ಲಾದ ಜೋಶಿ

01:18 PM Jan 10, 2021 | Team Udayavani |

ಹುಬ್ಬಳ್ಳಿ: ಸಂಸತ್ತಿನ ಬಜೆಟ್ ಅಧಿವೇಶನವನ್ನು ಎರಡು ಹಂತದಲ್ಲಿ ನಡೆಸಲಾಗುತ್ತದೆ. ಜ‌. 29ರಿಂದ ಫೆ.15 ರವರೆಗೆ ಬಜೆಟ್ ಮಂಡನೆ ಸೇರಿದಂತೆ ಮೊದಲ ಹಂತದ ಅಧಿವೇಶನ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

Advertisement

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.30ರಂದು ಅಧಿವೇಶನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ವ ಪಕ್ಷಗಳ ಸಭೆ ನಡೆಯಲಿದೆ. ಫೆ.1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, 2021-22ನೇ ಸಾಲಿನ ಕೇಂದ್ರ ಆಯವ್ಯಯ ಮಂಡನೆ ಮಾಡಲಿದ್ದಾರೆ ಎಂದರು.

ಎರಡನೇ ಹಂತದ ಸಂಸತ್ತು ಅಧಿವೇಶನ ಮಾರ್ಚ್ 8ರಿಂದ ಏಪ್ರಿಲ್ 8 ರವರೆಗೆ ನಡೆಯಲಿದೆ. ಪ್ರಶ್ನೋತ್ತರ ಅವಧಿ ಸೇರಿದಂತೆ ಪೂರ್ಣ ಪ್ರಮಾಣದ ಅಧಿವೇಶನ ನಡೆಸಲಾಗುವುದು ಎಂದರು.

ಕೋವಿಡ್ ಲಸಿಕೆಯನ್ನು ಪ್ರಧಾನಿ, ಕೇಂದ್ರ ಸಚಿವರು ತೆಗೆದುಕೊಂಡಿಲ್ಲ ಎಂಬ ಆರೋಪಕ್ಕೆ, ಪ್ರತಿಕ್ರಿಯಿಸಿದ ಸಚಿವರು, ಇದೊಂದು ಬೇಜವಾಬ್ದಾರಿ ಹೇಳಿಕೆಗಳಾಗಿವೆ. ಲಸಿಕೆಯನ್ನು ಮೊದಲು ಕೊರೊನಾ ವಾರಿಯರ್ಸ್ ಗೆ ನೀಡಲು ನಿರ್ಧರಿಸಲಾಗಿದೆ. ಪ್ರಧಾನಿ, ಕೇಂದ್ರ ಸಚಿವರು ತೆಗೆದುಕೊಂಡರೆ, ಎಲ್ಲ ಸಂಸದರಿಗೂ ನೀಡಬೇಕಾಗುತ್ತದೆ. ಆಗ ವಾರಿಯರ್ಸ್‌, ಜನರಿಗಿಂತ ಇವರೇ ಮುಖ್ಯವಾದರೆ ಎಂದು ಆರೋಪಿಸುತ್ತಿದ್ದರು.

ಇದನ್ನೂ ಓದಿ:ಅವಕಾಶವಿದ್ದರೆ ರಾಜ್ಯದಲ್ಲಿ ನಾನೇ ಮೊದಲು ಕೋವಿಡ್ ಲಸಿಕೆ ಪಡೆಯುವೆ: ಡಾ.ಕೆ. ಸುಧಾಕರ್

Advertisement

ರಾಜಕೀಯವಾಗಿ ಇಲ್ಲವೆ ಪ್ರಧಾನಿ, ಬಿಜೆಪಿ ವಿರುದ್ದ ಟೀಕೆ ಬದಲು ಲಸಿಕೆ ಕಂಡು ಹಿಡಿದ ವಿಜ್ಞಾನಿಗಳಿಗಾದರೂ ಗೌರವ ನೀಡುವ, ಭಾರತದ ಹಿತವನ್ನು ಗೌರವಿಸುವ ವರ್ತನೆಯನ್ನು ಟೀಕಾಕಾರರು ತೋರಲಿ ಎಂದರು.

ಬಿಎಸ್ ವೈ ಭೇಟಿ ಮಾಹಿತಿಯಿಲ್ಲ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೆಹಲಿ ಭೇಟಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ ಚರ್ಚಿಸಲಿದ್ದು, ಸಚಿವ ಸಂಪುಟ ವಿಸ್ತರಣೆಯೂ ಚರ್ಚೆ ಆಗಬಹುದು ಎಂದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಜ.16-17 ರಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಜ.17ರಂದು ಬೆಳಗಾವಿಯಲ್ಲಿ ನಡೆಯುವ ಪಕ್ಷದ ಜನಸೇವಕ ಸಮಾವೇಶದ ಸಮಾರೋಪ ಸಮಾರಭದಲ್ಲೂ ಭಾಗವಹಿಸಲಿದ್ದಾರೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರಕಾರ 30 ಪರ್ಸೆಂಟ್ ಕಮಿಷನ್ ಸರಕಾರ ಎಂಬ ಕಾಂಗ್ರಸ್ಸಿಗರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ನವರು ಮಾತನಾಡುತ್ತಾರೆ ಎಂದರೆ ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next