Advertisement

Parliament ಅಧಿವೇಶನ ಇಂದಿನಿಂದ: ನಾಳೆ ಬಜೆಟ್‌, ವಂದೇ ಮಾತರಂ ಘೋಷಣೆಗೆ ನಿರ್ಬಂಧ!

12:40 AM Jul 22, 2024 | Team Udayavani |

ಹೊಸದಿಲ್ಲಿ: ಸಂಸತ್‌ನ ಬಜೆಟ್‌ ಅಧಿವೇಶನ ಸೋಮವಾರ ಆರಂಭವಾಗಲಿದ್ದು, ಮಂಗಳವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ದಾಖಲೆಯ 7ನೇ ಬಾರಿಗೆ ಬಜೆಟ್‌ ಮಂಡಿಸಲಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ 3ನೇ ಅವಧಿಯ ಮೊದಲ ಬಜೆಟ್‌ ಆಗಿದೆ.

Advertisement

2019ರಲ್ಲಿ ದೇಶದ ಮೊದಲ ಮಹಿಳಾ ಹಣಕಾಸು ಸಚಿವರಾಗಿ ನೇಮಕಗೊಂಡ ಬಳಿಕ ನಿರ್ಮಲಾ ಅವರು ಸತತ 6 ಬಜೆಟ್‌ ಮಂಡಿಸಿದ್ದಾರೆ. ಮಂಗಳವಾರ 7ನೇ ಬಾರಿಗೆ ಬಜೆಟ್‌ ಮಂಡಿಸುವ ಮೂಲಕ ಮಾಜಿ ಪ್ರಧಾನಿ ಮತ್ತು ವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ್ದ ದಿ| ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ನಿರ್ಮಲಾ ಮುರಿಯಲಿದ್ದಾರೆ. ಮೊರಾರ್ಜಿ ದೇಸಾಯಿ ಅವರು 1959ರಿಂದ 1964ರ ವರೆಗೆ ಸತತ 6 ಬಜೆಟ್‌ ಮಂಡಿಸಿದ್ದೇ ಗರಿಷ್ಠ ದಾಖಲೆಯಾಗಿತ್ತು. ಇದೇ ವೇಳೆ ಸಂಸತ್‌ನ ಉಭಯ ಸದನಗಳಲ್ಲಿ ಸಚಿವೆ ನಿರ್ಮಲಾ ಸೋಮವಾರ ಆರ್ಥಿಕ ಸಮೀಕ್ಷೆಯನ್ನೂ ಮಂಡಿಸಲಿದ್ದಾರೆ.

ಹಲವು ನಿರೀಕ್ಷೆಗಳು: ಈ ಬಾರಿಯ ಬಜೆಟ್‌ ಜನಪರವಾಗಿರಲಿದೆ ಎಂಬ ನಿರೀಕ್ಷೆ ಹಲವರಲ್ಲಿದೆ. ಆದಾಯ ತೆರಿಗೆ ವಿನಾಯಿತಿ ಮಿತಿ ಸದ್ಯ 3 ಲಕ್ಷ ರೂ. ವರೆಗೆ ಇದೆ. ಮಂಗಳವಾರದ ಬಜೆಟ್‌ನಲ್ಲಿ ಅದರ ಮಿತಿ ಹೆಚ್ಚು ಮಾಡುವ ನಿರೀಕ್ಷೆ ಹೊಂದಲಾಗಿದೆ. ಇದಲ್ಲದೆ ವೇತನ ದಾರರಿಗೆ ಅನುಕೂಲಕರವಾಗಿರುವ ಸ್ಟಾಂಡರ್ಡ್‌ ಡಿಡಕ್ಷನ್‌ ಮಿತಿಯನ್ನು ಈಗಿನ 50,000 ರೂ.ಗಳಿಂದ 1 ಲಕ್ಷ ರೂ. ವರೆಗೆ ಹೆಚ್ಚಿಸುವ ಸಾಧ್ಯತೆಗಳಿವೆ. ಇದಲ್ಲದೇ ನವೀಕರಿಸಲು ಸಾಧ್ಯವಿರುವ ಇಂಧನ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಒತ್ತು ನೀಡಲು ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಗೃಹ ನಿರ್ಮಾಣ ಕ್ಷೇತ್ರ: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ. ವಿಶೇಷವಾಗಿ ಪ್ರಧಾನಮಂತ್ರಿ ಆವಾಸ್‌ ಯೋಜನೆ- ಗ್ರಾಮೀಣವನ್ನು ಮತ್ತೂಮ್ಮೆ ಜಾರಿ ಮಾಡಿ,ನಗರಗಳಿಗೂ ಯೋಜನೆ ವಿಸ್ತರಿಸುವ ಸಾಧ್ಯತೆಗಳಿವೆ. ಅದರಲ್ಲಿ ಪ್ರತೀ ಮನೆಗೆ ಈಗ ಇರುವ 1.2 ಲಕ್ಷ ರೂ.ಗಳಿಂದ 2.4 ಲಕ್ಷ ರೂ. ವರೆಗೆ ಹಣಕಾಸಿನ ನೆರವು ಹೆಚ್ಚಿಸಬಹುದು. ಎಂಎಸ್‌ಎಂಇಗಳಿಗೆ ಸಾಲ: ಸಣ್ಣ, ಅತೀ ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಉದ್ದಿಮೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಸಾಲ ನೀಡುವ ಬಗ್ಗೆ ಬಜೆಟ್‌ನಲ್ಲಿ ಪ್ರೋತ್ಸಾಹದಾಯಕ ಯೋಜನೆಗಳು ಲಭಿಸುವ ನಿರೀಕ್ಷೆ ಇದೆ. ಮನೆಗಳ ಛಾವಣಿಯಲ್ಲಿ ಸೋಲಾರ್‌ ಫ‌ಲಕ ಅಳವಡಿಕೆಗೆ ವಿಶೇಷ ಕೊಡುಗೆ ಲಭಿಸಬಹುದು. ತೈಲೋತ್ಪಾದನೆ: 2030ರ ಒಳಗಾಗಿ ಸದ್ಯ ಇರುವ ತೈಲ ಮೂಲಗಳು ಬರಿದಾಗಲಿವೆ ಎಂಬ ವರದಿಗಳಿವೆ ಈ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡುವವರಿಗೆ ಹೆಚ್ಚಿನ ಉತ್ತೇಜನ ಸಿಗಬಹುದಾಗಿದೆ.

ನಿರೀಕ್ಷೆಗಳೇನು?
ಆದಾಯ ತೆರಿಗೆ ವಿನಾಯಿತಿ ಮಿತಿ 3 ಲಕ್ಷದಿಂದ 5 ಲಕ್ಷ ರೂ.ಗೆ ಏರಿಕೆ
ಸ್ಟಾಂಡರ್ಡ್‌ ಡಿಡಕ್ಷನ್‌ ಮಿತಿ 50,000ರೂ.ಗಳಿಂದ 1 ಲಕ್ಷಕ್ಕೆ ಹೆಚ್ಚಳ
ಗೃಹ ನಿರ್ಮಾಣ ಕ್ಷೇತ್ರಕ್ಕೆ ಹೆಚ್ಚಿನ ನೆರವು
ಮೂಲಸೌಕರ್ಯ ಕ್ಷೇತ್ರಗಳಿಗೆ ಆದ್ಯತೆ
ನವೀಕೃತ ಇಂಧನ ಕ್ಷೇತ್ರಗಳಿಗೆ ಹೆಚ್ಚಿನ ಸವಲತ್ತು ಸಾಧ್ಯತೆ

Advertisement

ಅಧಿವೇಶನ ಪಕ್ಷಿನೋಟ
ಜು.22ರಿಂದ ಆ.12: ಅಧಿವೇಶನ ನಡೆಯುವ ದಿನಗಳು
19 ಕಲಾಪ ನಡೆವ ದಿನಗಳು
6ಹೊಸ ಮಸೂದೆಗಳ ಮಂಡನೆ ನಿರೀಕ್ಷೆ

ಅಧಿವೇಶನದ ವೇಳೆ “ವಂದೇ ಮಾತರಂ’ ಘೋಷಣೆಗೆ ನಿರ್ಬಂಧ!
ಅಧಿವೇಶನದ ಹಿನ್ನೆಲೆಯಲ್ಲಿ ಸಂಸತ್‌ನ ಆವರಣದೊಳಗೆ ಮತ್ತು ಹೊರಗೆ “ಜೈ ಹಿಂದ್‌’, “ವಂದೇ ಮಾತರಂ’ ಸೇರಿದಂತೆ ಯಾವುದೇ ಘೋಷಣೆಗಳನ್ನು ಮೊಳಗಿಸದಂತೆ ಉಭಯ ಸದನದ ಸದಸ್ಯರಿಗೆ ಸೂಚನೆ ನೀಡಲಾಗಿದೆ. ಸದನದ ಕಾರ್ಯಕಲಾಪ, ಶಿಸ್ತು, ಶಿಷ್ಟಾಚಾರಗಳನ್ನು ಪಾಲಿಸುವ ಸಲುವಾಗಿ ಈ ಘೊಷಣೆಗಳನ್ನು ಕೂಗದಿರಲು ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯಸಭಾ ಕಾರ್ಯಾಲಯವು “ರಾಜ್ಯಸಭಾ ಸದಸ್ಯರಿಗಾಗಿ ಕೈಪಿಡಿ’ಯಲ್ಲಿನ ಆಯ್ದ ಭಾಗಗಳನ್ನು ಹೊರತಂದಿದ್ದು, ಜುಲೈ 15ರಂದು ಬಿಡುಗಡೆಯಾದ ರಾಜ್ಯಸಭಾ ಬುಲೆಟಿನ್‌ನಲ್ಲಿ ಈ ಆಯ್ದ ಭಾಗಗಳನ್ನು ಪ್ರಕಟಿಸಲಾಗಿದೆ. ಅಲ್ಲದೇ ಸ್ಪೀಕರ್‌ ನಿರ್ಧಾರಗಳನ್ನು ಸದನದ ಒಳಗೆ ಮತ್ತು ಹೊರಗೆ ನೇರವಾಗಿ ಅಥವಾ ಪರೋಕ್ಷವಾಗಿ ಟೀಕೆ ಮಾಡಬಾರದು ಎಂದೂ ಪ್ರಕಟನೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next