Advertisement

ಮಕ್ಕಳಾಟವಾಗದಿರಲಿ ಸಂಸತ್‌ ಅಧಿವೇಶನ

10:56 PM Aug 12, 2021 | Team Udayavani |

ಆಡಳಿತ ಮತ್ತು ವಿಪಕ್ಷಗಳ ಪಟ್ಟು, ಪ್ರತಿಷ್ಠೆಯಿಂದಾಗಿ ಈ ಬಾರಿಯ ಮುಂಗಾರು ಅಧಿವೇಶನ ಕೊಚ್ಚಿ ಹೋಗಿದೆ. ಜು.19ರಂದು ಆರಂಭವಾದ ಈ ಬಾರಿಯ ಅಧಿವೇಶನದಲ್ಲಿ ಎರಡೂ ಸದನಗಳಲ್ಲೂ ಒಂದೇ ಒಂದು ದಿನವೂ ಸರಿಯಾಗಿ ಕಲಾಪ ನಡೆಯಲಿಲ್ಲ. ವಿಪಕ್ಷಗಳು ಪೆಗಾಸಸ್‌ ಗೂಢಾಚಾರ ವಿವಾದ ಮತ್ತು ಮೂರು ಕೃಷಿ ಕಾಯ್ದೆಗಳ ವಿರೋಧಿಸಿ ಪ್ರತಿಭಟನೆ ನಡೆಸಿದ ಕಾರಣದಿಂದಾಗಿ ಎರಡು ದಿನ ಮೊದಲೇ ಉಭಯ ಸದನಗಳ ಕಲಾಪವೂ ಅಂತ್ಯವಾಗಿದೆ. ಈ ಬಾರಿಯ ಸದನವಂತೂ ಮಕ್ಕಳಾಟಕ್ಕೂ ಕಡೆಯಾದಂತಿತ್ತು ಎಂದರೆ ತಪ್ಪಾಗಲಾರದು.

Advertisement

ಸಂಸದೀಯ ವ್ಯವಸ್ಥೆಯಲ್ಲಿ ವಾದ-ಪ್ರತಿವಾದ ಇದ್ದೇ ಇರುತ್ತದೆ. ಇದಿಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಯಾವುದೇ ರೀತಿಯಲ್ಲೂ ಬೆಲೆ ಇರುವುದಿಲ್ಲ. ಸರಕಾರಗಳು ಮಾಡಿದ್ದೆಲ್ಲವನ್ನೂ ವಿಪಕ್ಷಗಳು ಒಪ್ಪಲೇಬೇಕು ಎಂದೇನಿಲ್ಲ. ಹಾಗೆಯೇ ವಿಪಕ್ಷಗಳ ಎಲ್ಲ ವಾದವನ್ನು ಸರಕಾರಗಳು ಒಪ್ಪಬೇಕು ಅಂತೇನಿಲ್ಲ. ಆದರೆ ಪರಸ್ಪರ ಸಹಕಾರದಿಂದ, ಜನರ ತೆರಿಗೆ ಹಣ ಪೋಲಾಗದಂತೆ ನೋಡಿಕೊಳ್ಳಬೇಕಾದದ್ದು ಸರಕಾರ ಮತ್ತು ಜನಪ್ರತಿನಿಧಿಗಳ ಆದ್ಯ ಕರ್ತವ್ಯ.

ಆದರೆ ಈ ಬಾರಿ ಆಗಿದ್ದೇ ಬೇರೆ. ನಿಜವಾಗಿಯೂ ಜನರ ಮೇಲೆ ಕಾಳಜಿ ಇದ್ದಿದ್ದರೆ ಸರಕಾರ ಮತ್ತು ವಿಪಕ್ಷಗಳು ದೇಶವನ್ನು ಹೆಚ್ಚಾಗಿ ಕಾಡುತ್ತಿರುವ ಕೊರೊನಾ ಬಗ್ಗೆ ಚರ್ಚೆ ಮಾಡಬೇಕಿತ್ತು. ಏಕೆಂದರೆ, ಕೆಲವೇ ದಿನಗಳಲ್ಲಿ ಕೊರೊನಾ ಮೂರನೇ ಅಲೆ ದೇಶವನ್ನು ಬಾಧಿಸಲಿದೆ ಎಂಬ ಅಂದಾಜು ಇದೆ. ಈ ಬಗ್ಗೆ ತಜ್ಞರು ಎಚ್ಚರಿಕೆಯನ್ನೂ ನೀಡಿದ್ದಾರೆ. ಎರಡನೇ ಅಲೆಯಂತೆ ಆಗಬಾರದು ಎಂಬ ಕಾರಣಕ್ಕಾಗಿ ಮತ್ತು ದೇಶದ ಜನರ ಪ್ರಾಣ ಉಳಿಸುವ ಸಲುವಾಗಿಯಾದರೂ ಸಂಸತ್‌ನ ಉಭಯ ಸದನಗಳಲ್ಲಿ ಕುಳಿತು ಚರ್ಚೆಯನ್ನಾದರೂ ನಡೆಸಬಹುದಾಗಿತ್ತು. ಹಾಗೆಯೇ, ಕೊರೊನಾದಿಂದಾಗಿ ಆರ್ಥಿಕತೆ ಕುಸಿತ ಕಂಡಿದೆ. ಆರ್ಥಿಕ ವ್ಯವಸ್ಥೆಯನ್ನು ಮೇಲೆತ್ತುವ ಸಲುವಾಗಿ ಸರಕಾರ ವಿಪಕ್ಷಗಳ ಸಲಹೆ ಕೇಳಬಹುದಾಗಿತ್ತು. ಆದರೆ ಈ ಯಾವುದೇ ಚರ್ಚೆಗಳು ಆಗಲೇ ಇಲ್ಲ. ಇದಕ್ಕೆ ಬದಲಾಗಿ ಜು.19ರಿಂದ ಅಧಿವೇಶನ ಕೊನೆಗೊಂಡ ಆ.11ರ ವರೆಗೂ ಸರಕಾರ ಮತ್ತು ವಿಪಕ್ಷಗಳು ಜಿದ್ದಿಗೆ ಬಿದ್ದವರಂತೆ ನಾ ಕೊಡೆ, ನೀ ಬಿಡೆ ಎಂಬಂತೆಯೇ ವರ್ತನೆ ಮಾಡಿದವು.

ಇದರ ನಡುವೆಯೇ ಕೊನೆ ದಿನ ರಾಜ್ಯಸಭೆಯಲ್ಲಿ ವಿಪಕ್ಷ ಸದಸ್ಯರು ಮತ್ತು ಮಾರ್ಷಲ್‌ಗಳ ನಡುವೆ ನಡೆದ ಗದ್ದಲವೂ ಒಪ್ಪತಕ್ಕದ್ದಲ್ಲ. ಮಾರ್ಷಲ್‌ಗಳೇ ನಮ್ಮ ಮಹಿಳಾ ಸಂಸದರ ಮೇಲೆ ದಾಳಿ ಮಾಡಿದ್ದಾರೆ ಎಂದು ವಿಪಕ್ಷಗಳ ಸದಸ್ಯರು ಆರೋಪಿಸಿದ್ದಾರೆ. ಆದರೆ ಸರಕಾರ ಈ ಆರೋಪವನ್ನು ತಳ್ಳಿಹಾಕಿದ್ದು, ವಿಪಕ್ಷಗಳ ಸದಸ್ಯರೇ ಮಹಿಳಾ ಮಾರ್ಷಲ್‌ಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದೆ. ಜತೆಗೆ ಈ ಬಗ್ಗೆ ಉನ್ನತ ಮಟ್ಟದ ತನಿಖೆಯೂ ಆಗಬೇಕು ಎಂದು ಸ್ಪೀಕರ್‌ ಓಂ ಬಿರ್ಲಾ ಮತ್ತು ರಾಜ್ಯಸಭಾ ಸಭಾಪತಿ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಲ್ಲಿ ಮನವಿ ಮಾಡಿಕೊಂಡಿದೆ.

ಏನೇ ಆಗಲಿ, ಈ ಬಾರಿ ಲೋಕಸಭೆಯಲ್ಲಿ 96 ಗಂಟೆಗಳ ಒಟ್ಟಾರೆ ಅವಧಿಯಲ್ಲಿ ಕಲಾಪ ನಡೆದಿರುವುದು 21 ಗಂಟೆ. ಹಾಗೆಯೇ, ರಾಜ್ಯಸಭೆಯ 98 ಗಂಟೆಗಳಲ್ಲಿ 28 ಗಂಟೆ ಕಲಾಪ ನಡೆದಿದೆ. ಅಂದರೆ, ಒಟ್ಟಾಗಿ ತೆಗೆದುಕೊಳ್ಳುವುದಾದರೆ ಎರಡೂ ಸೇರಿ ತಲಾ ಒಂದು ದಿನ ಕಲಾಪ ನಡೆದಂತೆ ಆಯಿತು. ಒಟ್ಟಾರೆಯಾಗಿ ಇಡೀ ಕಲಾಪ ಗದ್ದಲದಲ್ಲೇ ಮುಳುಗಿ ಯಾವುದೇ ಚರ್ಚೆ ಇಲ್ಲದಂತಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next