ಹೊಸದಿಲ್ಲಿ: “ಸಂವಿಧಾನದ ಮೇಲೆ ಹಣೆಯಿಟ್ಟು ನಮಸ್ಕರಿಸುವ ಪ್ರಧಾನಿ ಮೋದಿಯವರಿಗೆ ಸಂಭಾಲ್, ಮಣಿಪುರ, ಹತ್ರಾಸ್‌ನಲ್ಲಿ ನ್ಯಾಯಕ್ಕಾಗಿ ಸಂತ್ರಸ್ತರು ಪರಿತಪಿ ಸುತ್ತಿರುವುದು ಕಾಣುವುದಿಲ್ಲ. ಸಂವಿಧಾನವು ದೇಶದ ರಕ್ಷಾ ಕವಚವೇ ಹೊರತು ಅದು ಸಂಘದ ರೂಲ್‌ಬುಕ್ ಅಲ್ಲ ಎಂಬುದು ಮೋದಿಯವರಿಗೆ ಅರ್ಥ ಆಗಿಲ್ಲ.’
ಲೋಕಸಭೆಯಲ್ಲಿ ಸಂವಿಧಾನ ಕುರಿತ ಚರ್ಚೆಯ ವೇಳೆ ಶುಕ್ರವಾರ ಕಾಂಗ್ರೆಸ್ ನಾಯಕಿ, ವಯನಾಡ್ ಸಂಸದೆ ಪ್ರಿಯಾಂಕಾ ವಾದ್ರಾ ಅಬ್ಬರಿಸಿದ್ದು ಹೀಗೆ.
ದೇಶವು ಸಂವಿಧಾನವನ್ನು ಅಳವಡಿಸಿಕೊಂಡು 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಲೋಕಸಭೆಯಲ್ಲಿ ಆರಂಭವಾದ 2 ದಿನಗಳ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಅವರು ಒಟ್ಟು 32 ನಿಮಿಷ ಮಾತನಾಡಿದರು. ಸಂಸದೆಯಾಗಿ ತಮ್ಮ ಚೊಚ್ಚಲ ಭಾಷಣದಲ್ಲೇ ಪ್ರಿಯಾಂಕಾ ಕೇಂದ್ರ ಸರಕಾರದ ವಿರುದ್ಧ ಗುಡುಗಿದ್ದು ಕಂಡುಬಂತು. “ದೇಶಕ್ಕೆ ಸಂವಿಧಾನ ರಕ್ಷಾ ಕವಚ. ಅದು ನ್ಯಾಯ, ಏಕತೆ ಮತ್ತು ವಾಕ್‌ಸ್ವಾತಂತ್ರ್ಯದ ಪ್ರತೀಕ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ 10 ವರ್ಷಗಳಿಂದ ಆ ರಕ್ಷಣ ಕವಚವನ್ನು ಮುರಿಯಲು ಪ್ರಯತ್ನಿಸುತ್ತಿದೆ. ಪ್ರತೀ ಸಂದರ್ಭದಲ್ಲಿಯೂ ಸಂವಿಧಾನವನ್ನು ಹಣೆಗೊತ್ತಿಕೊಳ್ಳುವ ಪ್ರಧಾನಿಗೆ ಉತ್ತರಪ್ರದೇಶದ ಸಂಭಲ್ ಮತ್ತು ಮಣಿಪುರದಲ್ಲಿ ನಡೆದ ಹಿಂಸಾಚಾರಗಳಿಂದ ಏನೂ ಅನಿಸುತ್ತಿಲ್ಲ’ ಎಂದು ವಾಗ್ಧಾಳಿ ನಡೆಸಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ಬರುತ್ತಿದ್ದರೆ, ಈಗಾಗಲೇ ಸಂವಿಧಾನ ಬದಲಿಸುವ ಕೆಲಸ ಆರಂಭಿಸುತ್ತಿತ್ತು ಎಂದೂ ಪ್ರಿಯಾಂಕಾ ವಾದ್ರಾ ಆರೋಪಿಸಿದರು.
ಪ್ರತೀ ವೈಫಲ್ಯಕ್ಕೆ ನೆಹರೂ ಕಾರಣವೇ?: ದೇಶದ ಪ್ರತೀ ವೈಫಲ್ಯಕ್ಕೂ ನೆಹರೂ ಕಾರಣವೆಂದು ಬಿಜೆಪಿ ನಾಯಕರು ಟೀಕಿಸುತ್ತಾರೆ. ಕೆಲವು ಸಚಿವರು ದೇಶಕ್ಕೆ ನೆಹರೂ ಕೊಡುಗೆ ಏನು ಎಂದು ಪ್ರಶ್ನಿಸುತ್ತಾರೆ. ಹಾಗಿದ್ದರೆ ಕೇಂದ್ರ ಸರಕಾರದ ಹೊಣೆಗಾರಿಕೆ ಏನು ಎಂದು ಪ್ರಶ್ನಿಸಿದ ಪ್ರಿಯಾಂಕಾ, ಸರಕಾರ ಈಗ ಏನು ಮಾಡಬೇಕು ಎಂಬುದರ ಬಗ್ಗೆ ಮಾತನಾಡಲಿ ಎಂದರು. ಪಠ್ಯ ಪುಸ್ತಕಗಳಿಂದ, ಭಾಷಣಗಳಿಂದ ನೆಹರೂ ಹೆಸರನ್ನು ತೆಗೆಯಬಹುದು. ದೇಶಕ್ಕೆ ಅವರು ನೀಡಿದ ಕೊಡುಗೆಗಳನ್ನು ಅಳಿಸಲಾಗದು ಎಂದರು.
ಹಿಮಾಚಲದಲ್ಲಿ ಒಬ್ಬ ವ್ಯಕ್ತಿಗಾಗಿ ಕಾನೂನು
ಹಿಮಾಚಲದಲ್ಲಿ ಎಲ್ಲ ಕಾನೂನುಗಳನ್ನು ಒಬ್ಬ ವ್ಯಕ್ತಿ(ಅದಾನಿ)ಗಾಗಿ ಮಾಡಲಾಗಿದೆ. ಹೀಗಾಗಿ, ರಾಜ್ಯದ ಸಣ್ಣ ಆ್ಯಪಲ್ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪ್ರಿಯಾಂಕಾ ಹೇಳಿದರು. ಆಗ ಬಿಜೆಪಿ ಸಂಸದರು ಹಿಮಾಚಲದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ ಎಂದರು. ಅದಕ್ಕೆ ತಿರು ಗೇಟು ಕೊಟ್ಟ ಪ್ರಿಯಾಂಕಾ, ಹಿಮಾಚಲದಲ್ಲಿ ಕೇಂದ್ರ ಸರಕಾರ ಅದಾನಿಗೆ ಬೃಹತ್ ಶೀತಲಗೃಹ ಸ್ಥಾಪನೆಗೆ ಅನುವು ಮಾಡಿಕೊಟ್ಟಿದೆ ಎಂದರು.
ಒಬ್ಬರಿಗಾಗಿ 142 ಕೋಟಿಯ ನಿರ್ಲಕ್ಷ್ಯ
ಕೇಂದ್ರ ಸರಕಾರ ಉದ್ಯಮಿ ಅದಾನಿ ಪರ ನಿಲುವು ಹೊಂದಿದೆ ಎಂದು ಅದಾನಿ ಹೆಸರೆತ್ತದೇ ಆರೋ ಪಿಸಿದ ಸಂಸದೆ, “ಒಬ್ಬರಿಗಾಗಿ 142 ಕೋಟಿ ಜನ ರನ್ನು ಸರಕಾರ ಮರೆತಿದೆ. ದೇಶದ ಬಂದರು, ಏರ್‌ಪೋರ್ಟ್, ಗಣಿ, ಸರಕಾರಿ ಉದ್ದಿಮೆಗಳನ್ನು ಒಬ್ಬ ವ್ಯಕ್ತಿಗೆ ಕೈ ಎತ್ತಿ ಕೊಡಲಾಗುತ್ತಿದೆ’ ಎಂದರು.
”ಪ್ರಿಯಾಂಕಾ ಭಾಷಣ ಅದ್ಭುತವಾಗಿತ್ತು. ನಾನು ಸದ ನ ದಲ್ಲಿ ಮಾಡಿದ ಚೊಚ್ಚಲ ಭಾಷ ಣ ಕ್ಕಿಂತ ಅವರ ಭಾಷಣ ಎಷ್ಟೋ ಚೆನ್ನಾ ಗಿತ್ತು. ಇದು ಹೀಗೆಯೇ ಮುಂದುವರಿಯಲಿ”- ರಾಹುಲ್ ಗಾಂಧಿ, ವಿಪಕ್ಷ ನಾಯಕ