Advertisement

ತೆರಿಗೆ ರಹಿತ ಗ್ರಾಚ್ಯುಟಿ ಮಿತಿ ಏರಿಕೆಗೆ ಒಪ್ಪಿಗೆ

10:10 AM Mar 23, 2018 | Team Udayavani |

ಹೊಸದಿಲ್ಲಿ: ಸಂಸತ್‌ನಲ್ಲಿ ವಿಪಕ್ಷಗಳ ಗದ್ದಲದಿಂದಾಗಿ ಸತತ 14ನೇ ದಿನವಾಗಿರುವ ಗುರುವಾರ ಕೂಡ ಕಲಾಪ ನಡೆಸಲು ಸಾಧ್ಯವಾಗಿಲ್ಲ. ಆದರೆ ರಾಜ್ಯಸಭೆ ಯಲ್ಲಿ ಗ್ರಾಚ್ಯುಟಿ ಪಾವತಿ (ತಿದ್ದುಪಡಿ)ಕಾಯ್ದೆ ಮತ್ತು ಹೆರಿಗೆ ರಜೆ ವಿಸ್ತರಣೆ ಮಾಡುವ ಕುರಿತ ಮಸೂದೆಗೆ ಚರ್ಚೆ ಇಲ್ಲದೆಯೇ ಅನುಮೋದನೆ ಪಡೆಯಲಾಗಿದೆ.

Advertisement

ಹೇಗೆ ಅನ್ವಯ?: ಗ್ರಾಚ್ಯುಟಿ ಪಾವತಿ (ತಿದ್ದುಪಡಿ) ಮಸೂದೆ 2017ರ ಪ್ರಕಾರ, ತೆರಿಗೆರಹಿತ ಗ್ರಾಚ್ಯುಟಿ ಮಿತಿ 20 ಲಕ್ಷ ರೂ.ಗೆ ಏರಿಕೆಯಾಗಲಿದೆ. ಈವರೆಗೆ 10 ಲಕ್ಷ ರೂ.ಗಳವರೆಗಿನ ಗ್ರಾಚ್ಯುಟಿಗೆ ಮಾತ್ರ ತೆರಿಗೆ ವಿನಾಯ್ತಿ ಇತ್ತು. ಇನ್ನು ಮುಂದೆ 20 ಲಕ್ಷ ರೂ. ವರೆಗೂ ಈ ವಿನಾಯಿತಿ ಇರುತ್ತದೆ. ಪ್ರಸ್ತುತ ಸಂಘಟಿತ ವಲಯದ ನೌಕರರು 5 ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದರೆ, ಉದ್ಯೋಗ ತೊರೆದ ಬಳಿಕ ಅವರು 10 ಲಕ್ಷ ರೂ.ಗಳ ತೆರಿಗೆ ರಹಿತ ಗ್ರಾಚ್ಯುಟಿಗೆ ಅರ್ಹರಾಗಿರುತ್ತಾರೆ. ಏಳನೇ ವೇತನ ಆಯೋಗದ ಶಿಫಾರಸು ಅಂಗೀಕರಿಸಿದ ಬಳಿಕ ಅದರ ಮಿತಿ 20 ಲಕ್ಷ ರೂ.ಗಳಿಗೆ ಪರಿಷ್ಕರಣೆಯಾಗಿದೆ. ಹತ್ತು ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳು ಇರುವ ಸಂಸ್ಥೆಗೆ ಇದು ಅನ್ವಯವಾಗುತ್ತದೆ.

ಮಹಿಳೆಯರಿಗೂ ಪ್ರಯೋಜನ: ಹೆರಿಗೆ ರಜೆ ನಿಗದಿ ಮಾಡುವುದಕ್ಕೆ ಮತ್ತು ಅಂಥ ಮಹಿಳಾ ಉದ್ಯೋಗಸ್ಥರಿಗೆ ಗ್ರಾಚ್ಯುಟಿ ನೀಡುವ ಬಗ್ಗೆಯೂ ಸರಕಾರ ನಿರ್ಧಾರ ಕೈಗೊಳ್ಳಲಿದೆ. ಹೆರಿಗೆ ರಜೆ (ತಿದ್ದುಪಡಿ) ಕಾಯ್ದೆ 2017ರ ಅನ್ವಯ ಗರಿಷ್ಠ ರಜೆಯನ್ನು 26 ವಾರಗಳ ಕಾಲ ವಿಸ್ತರಿಸಿ ಈ ಹಿಂದೆಯೇ ಸರಕಾರ ಆದೇಶ ಹೊರಡಿಸಿತ್ತು.

ಶುಲ್ಕದ ನೆರವಿಗೆ ಮಿತಿ ಇಲ್ಲ: ಇನ್ನು ಮುಂದೆ ಸೇನಾ ಕಾರ್ಯಾಚರಣೆಯಲ್ಲಿ ನಾಪತ್ತೆಯಾಗಿರುವ, ಹುತಾತ್ಮರಾಗಿರುವ ಅಥವಾ ಅಂಗ ಊನಗೊಂಡಿರುವ ಯೋಧರ ಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ಶಿಕ್ಷಣ ಶುಲ್ಕ ಭರಿಸುವ ಪ್ರಸ್ತಾವಕ್ಕೆ ಕೇಂದ್ರ ಒಪ್ಪಿಗೆ ನೀಡಿದೆ. ಇದುವರೆಗೆ ಪ್ರತಿ ತಿಂಗಳು 10 ಸಾವಿರ ರೂ. ವರೆಗೆ ಮಾತ್ರ ಶುಲ್ಕ ಭರಿಸಲು ಅವಕಾಶವಿತ್ತು. ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಸರಕಾರದಿಂದ ಅನುದಾನ ಪಡೆಯುವ, ಮಿಲಿಟರಿ ಶಾಲೆ, ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಅಂಗೀಕೃತಗೊಂಡಿರುವ ಕಾಲೇಜುಗಳಲ್ಲಿ (ಸ್ವಾಯತ್ತ ಶಿಕ್ಷಣ ಸಂಸ್ಥೆಗಳೂ ಸೇರಿದಂತೆ) ಅಧ್ಯಯನ ಮಾಡುವವರಿಗೆ ಈ ಸೌಲಭ್ಯ ಅನ್ವಯವಾಗುತ್ತದೆ.

ವಿಪಕ್ಷಗಳ ಸಂಧಾನಕ್ಕೆ ಸಚಿವ ಗೋಯಲ್‌
ಸತತ 14 ದಿನಗಳಿಂದ ಸಂಸತ್‌ ಕಲಾಪ ನಡೆಸಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ವಿಪಕ್ಷಗಳ ಜತೆ ಸಂಧಾನಕ್ಕಾಗಿ ಕೇಂದ್ರ ಸರಕಾರ ಸಚಿವ ವಿಜಯ ಗೋಯಲ್‌ರನ್ನು ನಿಯೋಜಿಸಿದೆ. ಶೀಘ್ರವೇ ಅವರು ವಿಪಕ್ಷಗಳ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ಇರಾಕ್‌ನಲ್ಲಿ 39 ಭಾರತೀಯರ ಹತ್ಯೆ ಕುರಿತಂತೆ ಸಂಸತ್‌ಗೆ ತಪ್ಪು ಮಾಹಿತಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಲು ಕಾಂಗ್ರೆಸ್‌ ಮುಂದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next