Advertisement

ರಾಜ್ಯಸಭೆಯಲ್ಲಿ 7 ಮಸೂದೆ ಅಂಗೀಕಾರ

12:38 AM Sep 23, 2020 | mahesh |

ಹೊಸದಿಲ್ಲಿ: ಸಂಸತ್‌ ಅಧಿವೇಶನ ಸಮಾಪ್ತಿಯಾಗಲು ಒಂದು ದಿನ ಬಾಕಿ ಇರುವಂತೆಯೇ ಒಗ್ಗಟ್ಟು ಪ್ರದರ್ಶಿಸಿರುವ ವಿಪಕ್ಷಗಳು ಉಭಯ ಸದನಗಳನ್ನು ಬಹಿಷ್ಕರಿಸಿ ಸಭಾತ್ಯಾಗ ಮಾಡಿವೆ. ಇದರ ಬೆನ್ನಲ್ಲೇ ರಾಜ್ಯಸಭೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೂರೂವರೆ ತಾಸುಗಳ ಅವಧಿಯಲ್ಲಿ ಮಂಗಳವಾರ ಏಳು ಪ್ರಮುಖ ಮಸೂದೆಗಳನ್ನು ಅಂಗೀಕರಿಸಲಾಯಿತು.

Advertisement

ಈ ಬೆಳವಣಿಗೆಯ ಬೆನ್ನಲ್ಲೇ ಅಮಾನತಾಗಿರುವ 8 ಸದಸ್ಯರು ಸಂಸತ್‌ ಭವನದ ಹೊರಗೆ ಸೋಮವಾರ ಆರಂಭಿಸಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಕೈಬಿಟ್ಟಿದ್ದಾರೆ. ಕೃಷಿ ಮಸೂದೆಗಳ ವಿರುದ್ಧ ಹೋರಾಟವನ್ನು ಬೀದಿಗಿಳಿಯುವ ಮೂಲಕ ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ಅಮಾನತು ಪ್ರಶ್ನಿಸಿ 8 ಸದಸ್ಯರು ಧರಣಿ ಆರಂಭಿಸಿದ್ದರು. ಸಂಸದರಾದ ಫಾರೂಕ್‌ ಅಬ್ದುಲ್ಲಾ, ಜಯಾ ಬಚ್ಚನ್‌, ಅಹ್ಮದ್‌ ಪಟೇಲ್‌, ದಿಗ್ವಿಜಯ್‌ ಸಿಂಗ್‌, ಶಶಿ ತರೂರ್‌ ಸಹಿತ ವಿಪಕ್ಷಗಳ ನಾಯಕರು ಧರಣಿನಿರತರ ಬಳಿಗೆ ಆಗಮಿಸಿ ಅವರಿಗೆ ಬೆಂಬಲ ಘೋಷಿಸಿದ್ದರು. ಇದೇ ವೇಳೆ ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಅವರು ಅಮಾನತಾದ ಸದಸ್ಯರಿಗೆ ಬೆಂಬಲವಾಗಿ ಮಂಗಳವಾರ ಇಡೀ ದಿನ ಆಹಾರ ಸೇವಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಯಾವೆಲ್ಲ ಮಸೂದೆ?
ಸಹಕಾರ ಕ್ಷೇತ್ರದ ಬ್ಯಾಂಕ್‌ಗಳನ್ನು ಆರ್‌ಬಿಐ ನಿಯಂತ್ರಣಕ್ಕೆ ಒಳಪಡಿಸುವ ಬ್ಯಾಂಕಿಂಗ್‌ ನಿಯಂತ್ರಣ ಮಸೂದೆಯ ಸಹಿತ 7 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಮಸೂದೆಗಳ ಪೈಕಿ ಅಗತ್ಯ ವಸ್ತುಗಳ ಕಾಯ್ದೆ ವ್ಯಾಪ್ತಿಯಿಂದ ಬೇಳೆ-ಕಾಳುಗಳು, ಅಡುಗೆ ಎಣ್ಣೆ, ಈರುಳ್ಳಿ, ಬಟಾಟೆಯನ್ನು ಕೈಬಿಡುವ ತಿದ್ದುಪಡಿ ಮಸೂದೆ ಸೇರಿದೆ. ರಾಷ್ಟ್ರೀಯ ವಿಧಿ ವಿಜ್ಞಾನ ವಿ.ವಿ. ಮಸೂದೆ, ಕಂಪೆನಿಗಳ (ತಿದ್ದುಪಡಿ) ಮಸೂದೆ, ತೆರಿಗೆ ಮತ್ತು ಇತರ ಕಾಯ್ದೆಗಳು (ರಿಯಾ ಯಿತಿ ಮತ್ತು ಕೆಲವು ನಿಯಮ ಗಳಿಗೆ ತಿದ್ದುಪಡಿ) ಮಸೂದೆಗಳಿಗೆ ಅಂಗೀಕಾರ ನೀಡಲಾಗಿದೆ.

ವಿಪಕ್ಷಗಳು ಮತ್ತು ಆಡಳಿತ ಪಕ್ಷಗಳು ಕುಳಿತು ಮಾತನಾಡಿ ವಿಷಯ ಬಗೆಹರಿಸಿಕೊಳ್ಳಬೇಕು. ಈ ಮೂಲಕ ಸದನ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕು.
– ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಿ

Advertisement
Advertisement

Udayavani is now on Telegram. Click here to join our channel and stay updated with the latest news.

Next