Advertisement

ಸಂಸದೆ ಶೋಭಾ ಕಾನೂನಿಗಿಂತ ದೊಡ್ಡವರಾ?: ರಾಮಲಿಂಗಾರೆಡ್ಡಿ

06:25 AM Jan 02, 2018 | Team Udayavani |

ಬೆಂಗಳೂರು: ಸಂಸದೆ ಶೋಭಾ ಕರಂದ್ಲಾಜೆ ಏನು ಕಾನೂನಿಗಿಂತ ದೊಡ್ಡವರಾ ..?ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ. 

Advertisement

ಹೊಸ ವರ್ಷದ ಹಿನ್ನೆಲೆಯಲ್ಲಿ ಹಿರಿಯ ಪೊಲಿಸ್‌ ಅಧಿಕಾರಿಗಳು ತಮ್ಮನ್ನ ಭೇಟಿ ಮಾಡಿ ಶುಭಾಶಯ ಕೋರಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾಕತ್ತಿದ್ದರೆ ಮುಖ್ಯಮಂತ್ರಿ ನನ್ನನ್ನು ಬಂಧಿಸಲಿ ಎಂದು ಸವಾಲು ಹಾಕಿರುವ ಶೋಭಾ ಅವರನ್ನು ಮುಖ್ಯಮಂತ್ರಿ ಅಥವಾ ನಾನು ಬಂಧಿಸಲು ಆಗುತ್ತದೆಯೇ ? ತಪ್ಪು ಮಾಡಿದ್ದರೇ ಪೊಲಿಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

ಬಿಜೆಪಿಯವರು ರಾಜಕಾರಣಕ್ಕಾಗಿ ಹಿಂದುತ್ವ ಅಜೆಂಡಾ ಇಟ್ಟುಕೊಂಡಿದ್ದಾರೆ. ನಾವೂ ಹಿಂದುಗಳೇ, ಹಿಂದುತ್ವವನ್ನು ಯಾರೂ ಗುತ್ತಿಗೆ ಪಡೆದುಕೊಂಡಿಲ್ಲ. ನಾವು ಹಿಂದೂ ಧರ್ಮವನ್ನು ಶ್ರದ್ಧೆಯಿಂದ ಆಚರಿಸುತ್ತೇವೆ. ಬಿಜೆಪಿಯವರು ರಾಜಕೀಯಕ್ಕಾಗಿ ಹಿಂದುತ್ವ ಬಳಸಿಕೊಳ್ಳುತ್ತಾರೆಂದು ಆರೋಪಿಸಿದರು.  ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವೇ  ಅಧಿಕಾರಕ್ಕೆ ಬರುತ್ತದೆ ಎಂದರು.

ರಾಜ್ಯದಲ್ಲಿ ಕೋಮುಗಲಭೆಯಲ್ಲಿ 22 ಹಿಂದೂಗಳು ಸತ್ತಿದ್ದಾರೆ ಎಂದು ಬಿಜೆಪಿಯವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಅವರಲ್ಲಿ 8 ಜನ ವೈಯಕ್ತಿಕ ದ್ವೇಷದಿಂದ ಹಿಂದೂಗಳ ನಡುವೆಯೇ ನಡೆದ ಗಲಾಟೆಯಲ್ಲಿ  ಮೃತಪಟ್ಟಿದ್ದಾರೆ. ಈ ಸತ್ಯವನ್ನು ಬಿಜೆಪಿಯವರು ಹೇಳುವುದಿಲ್ಲ. ಪರೇಶ್‌ ಮೇಸ್ತಾ ಸಾವಿನ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು, ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಹೇಳಿದರು. ಇನ್ನು ಮಹದಾಯಿ ಹೋರಾಟಗಾರ ವೀರೇಶ್‌ ಸೊಬರದ್‌ ಮಠ ಅವರ ಮೇಲೆ ಹಲ್ಲೆಯಾಗಿರುವ ಬಗ್ಗೆ ದೂರು ದಾಖಲಾಗಿದ್ದು, ದೂರಿನ ಆಧಾರದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಪೊಲೀಸ್‌ ಬಂದೋಬಸ್ತ್ ಮೆಚ್ಚುಗೆ: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪೊಲಿಸ್‌ ಇಲಾಖೆ ಉತ್ತಮ ಕೆಲಸ ಮಾಡಿದ್ದರಿಂದ ಯಾವುದೇ ತೊಂದರೆಯಾಗಿಲ್ಲ. ಕೆಲವು ಜನರು ಅತಿಯಾಗಿ ಕುಡಿದಿದ್ದರಿಂದ ಅವರ ವಿರುದ್ದ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಪ್ರಕರಣ ದಾಖಲಾಗಿಲ್ಲ. ಕುಡಿದ ಮಹಿಳೆಯರನ್ನು ಪೊಲೀಸರೇ ಅವರ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದಾರೆ ಎಂದು ಪೊಲಿಸರ ಕಾರ್ಯವನ್ನು ಶ್ಲಾಘಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next