Advertisement
ಸಂಸತ್‌ನಲ್ಲಿ ಈ ಪರಿಯ ತಲ್ಲಣ ಸೃಷ್ಟಿಸಿದ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಾಥಮಿಕ ವಿಚಾರಣೆ ವೇಳೆ ತಿಳಿದುಬಂದ ಸಂಗತಿಗಳಿವು.
Related Articles
Advertisement
ಸಂಸತ್ ಭವನದ ಹೊರಗೆ ಘೋಷಣೆ ಕೂಗುತ್ತಾ, ಗ್ಯಾಸ್ ಕ್ಯಾನಿಸ್ಟರ್ ಸಿಡಿಸಿ ಪ್ರತಿಭಟನೆ ನಡೆಸಿದ ಆರೋಪಿ ನೀಲಂ ಹರಿಯಾಣದಾಕೆ. ಈಕೆ ಹಿಸಾರ್‌ನ ಪಿಜಿಯೊಂದರಲ್ಲಿ ವಾಸವಿದ್ದು, ಹರಿಯಾಣ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಆಕೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿರಲಿಲ್ಲ ಎಂದು ಆಕೆಯ ಕುಟುಂಬ ಹೇಳಿದೆ. ಆಕೆ ಯಾಕೆ ಈ ರೀತಿ ಮಾಡಿದಳು ಎಂಬುದು ನಮಗೆ ಗೊತ್ತಾಗುತ್ತಿಲ್ಲ. ಟಿವಿಯಲ್ಲಿ ನೀಲಂ ಅನ್ನು ನೋಡಿದ ಪರಿಚಿತರು ನಮಗೆ ಕರೆ ಮಾಡಿ ವಿಷಯ ತಿಳಿಸಿದರು ಎಂದು ನೀಲಂ ಸಹೋದರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಾಗರ್
ಸದನದೊಳಗೆ ದುಷ್ಕೃತ್ಯ ಎಸಗಿದ ಆರೋಪಿ ಸಾಗರ್ ಶರ್ಮಾ(28) ಉತ್ತರ ಪ್ರದೇಶದ ಲಕ್ನೋದ ರಾಮನಗರದ ನಿವಾಸಿ. ಪದವೀಧರ. ಈತ ದಿಲ್ಲಿಯಲ್ಲಿ ಪ್ರತಿಭಟನೆಯೊಂದರಲ್ಲಿ ಪಾಲ್ಗೊಳ್ಳುವುದಿದೆ ಎಂದು ಹೇಳಿ ಇತ್ತೀಚೆಗಷ್ಟೇ ಮನೆಯಿಂದ ತೆರಳಿದ್ದ. ಈತ ಆರಂಭದಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಅನಂತರ ಹುಟ್ಟೂರಿಗೆ ವಾಪಸ್ ಬಂದು, ಇ-ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದ. ಸಾಗರ್‌ನ ಅಪ್ಪ ಬಡಗಿಯಾಗಿದ್ದು, ಇವರ ಕುಟುಂಬವು ಕಳೆದೊಂದು ದಶಕದಿಂದಲೂ ಬಾಡಿಗೆ ಮನೆಯಲ್ಲಿ ವಾಸವಿದೆ.
ಪೊಲೀಸ್ ಆಗದ್ದಕ್ಕೆ ಹತಾಶೆಗೆ ಒಳಗಾಗಿದ್ದ ಅಮೋಲ್
ಸಂಸತ್ ಭವನದ ಹೊರಗೆ ಪ್ರತಿಭಟನೆ ನಡೆಸಿ ಪೊಲೀಸರ ಅತಿಥಿಯಾದ ಮತ್ತೂಬ್ಬ ಆರೋಪಿ ಮಹಾರಾಷ್ಟ್ರದ ಲಾತೂರ್ ನಿವಾಸಿ ಅಮೋಲ್ ಶಿಂಧೆ(25). ಪೊಲೀಸ್ ಆಗಬೇಕೆಂಬ ಆಸೆ ಹೊತ್ತಿದ್ದ ಈತನಿಗೆ ಪ್ರವೇಶ ಸಿಕ್ಕಿರಲಿಲ್ಲ. ಇದು ಆತನ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೂ ಮಿಲಿಟರಿ ಸರ್ವಿಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ.
ಪ್ರವೇಶ ಪಾಸ್ ಸಿಗುವುದು ಸುಲಭವೇ?
ಸಂಸತ್ ಪ್ರವೇಶಕ್ಕೆ ಪಾಸ್ ಸಿಗುವುದು ಅಷ್ಟು ಸುಲಭವಿಲ್ಲ. ಹಾಲಿ, ಮಾಜಿ ಸಂಸದರು, ಕೇಂದ್ರ ಸಚಿವರು, ರಾಜ್ಯಸಭೆ ಸದಸ್ಯರು ಅವರ ಕ್ಷೇತ್ರ ವ್ಯಾಪ್ತಿ ಮಾತ್ರವಲ್ಲದೇ ಅನ್ಯ ಕ್ಷೇತ್ರದ ಜನರಿಗೂ ಪಾಸ್ ನೀಡುವ ಅಧಿಕಾರ ಹೊಂದಿರುತ್ತಾರೆ. ಸಂಸತ್‌ಗೆ ತೆರಳಲು ಬಯಸುವ ವ್ಯಕ್ತಿ ಮೊದಲು ಸಂಸದರ ಕಚೇರಿಗೆ ಅರ್ಜಿ ಸಲ್ಲಿಸಬೇಕು.
ಸೂಕ್ತ ದಾಖಲಾತಿಗಳೊಂದಿಗೆ ಆ ಅರ್ಜಿಯನ್ನು ಸ್ಪೀಕರ್ ಕಚೇರಿಗೆ ರವಾನಿಸಲಾಗುತ್ತದೆ. ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಸ್ಪೀಕರ್ ಕಚೇರಿಯಿಂದ “ಪ್ರವೇಶ ಪಾಸ್’ ನೀಡಲಾಗುತ್ತದೆ. ಅದರಲ್ಲಿ ಯಾವ ದಿನ, ಎಷ್ಟು ಗಂಟೆಗೆ ಎಂದು ಸ್ಪಷ್ಟವಾಗಿ ನಮೂದಿಸಿರುತ್ತಾರೆ. ಪಾಸ್ ದೊರೆತ ಬಳಿಕ ನಿಗದಿತ ದಿನಾಂಕ ಹಾಗೂ ಸಮಯದಂದು ಪಾಸ್ ಪಡೆದ ವ್ಯಕ್ತಿ ಸಂಸತ್ ಭವನಕ್ಕೆ ತೆರಳಬೇಕು. ಅಲ್ಲಿ ವಿವಿಧ ಹಂತದ ಭದ್ರತಾ ಪರಿಶೀಲನೆ ಬಳಿಕ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಒಬ್ಬ ವ್ಯಕ್ತಿ ಸಂಸತ್‌ನ ಕಲಾಪವನ್ನು ವೀಕ್ಷಿಸಲು 30 ನಿಮಿಷ ಅವಕಾಶ ನೀಡಲಾಗುತ್ತದೆ. ಕೆಲವೊಮ್ಮೆ ಜನದಟ್ಟಣೆ ಇದ್ದರೆ ಭದ್ರತಾ ಸಿಬಂದಿ ನಿಗದಿತ ಸಮಯಕ್ಕಿಂತ ಮೊದಲೇ ಎಬ್ಬಿಸಿ ಕಳುಹಿಸುತ್ತಾರೆ. ವೀಕ್ಷಕರ ಗ್ಯಾಲರಿಯಲ್ಲೂ ಸೂಕ್ತ ಭದ್ರತೆ ನಿಯೋಜಿಸಲಾಗಿರುತ್ತದೆ. ಅಶಿಸ್ತು ತೋರಿದರೆ ಎಚ್ಚರಿಕೆ ನೀಡಿ ಹೊರಗೆ ಕಳುಹಿಸಿದ ಉದಾಹಣೆಗಳೂ ಇವೆ.