ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ವಾಹನಗಳ ನಿಲುಗಡೆ ಶುಲ್ಕ ಸಂಗ್ರಹದ ಗುತ್ತಿಗೆ ಪಡೆಯಲು ನಿರೀಕ್ಷಿತ ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಒಂದೆರಡು ಕಡೆ ಗುತ್ತಿಗೆ ಪಡೆದವರು ನಿಗದಿಗಿಂತ ಹೆಚ್ಚಿನ ಶುಲ್ಕ ಪಡೆಯುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ.
ನಗರದಲ್ಲಿ ಪಾಕಿಂಗ್ ಸ್ಥಳಗಳ ಸಮರ್ಪಕ ನಿರ್ವಹಣೆಯೂ ಇಲ್ಲ, ಪಾಲಿಕೆಗೆ ಆದಾಯವೂ ಇಲ್ಲವಾಗಿದೆ. ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರ ಟೆಂಡರ್ ಸೀಮಿತ ಎನ್ನುವ ಸ್ಥಿತಿ ಈ ಹಿಂದೆ ಇತ್ತು. ಗುತ್ತಿಗೆ ಪಡೆದವರು ತಮಗೆ ತಿಳಿದಂತೆ ಹಣ ವಸೂಲಿ ಮಾಡುತ್ತಿದ್ದಾರೆ. ಟೆಂಡರ್ ಮುಗಿದ ನಂತರವೂ ಹಣ ಪಡೆಯುವುದು ಮುಂದುವರಿದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಅವಳಿನಗರದಲ್ಲಿನ ಎಲ್ಲ ವಾಹನ ಶುಲ್ಕ ಸಂಗ್ರಹ ಟೆಂಡರ್ ರದ್ದುಪಡಿಸಲಾಗಿತ್ತು.
ವ್ಯವಸ್ಥೆಯನ್ನು ಸರಿಪಡಿಸಿ, ನಂತರ ಹೊಸದಾಗಿ ಟೆಂಡರ್ ಕರೆಯಲಾಗುವುದು ಎಂಬುದು ಪಾಲಿಕೆ ಅಧಿಕಾರಿಗಳ ಹೇಳಿಕೆಯಾಗಿತ್ತು. ಆದರೆ, ಹೊಸ ಟೆಂಡರ್‌ಗೆ ಬಹುತೇಕ ಕಡೆ ಗುತ್ತಿಗೆದಾರರು ಮುಂದೆ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಕೆಲವೊಂದು ಕಡೆ ಟೆಂಡರ್ ಪಡೆದವರು ಹೆಚ್ಚುವರಿ ಹಣ ಪಡೆಯುತ್ತಾರೆ ಎಂಬ ದೂರು ವಾಹನ ಮಾಲೀಕರದ್ದಾಗಿದೆ. ವಾಹನ ನಿಲುಗಡೆ ಆದಾಯವೂ ಬರುವಂತಾಗಬೇಕು, ವಾಹನ ಸವಾರರಿಂದ ಹೆಚ್ಚುವರಿ ಹಣ ಪಡೆಯುವಿಕೆ ನಿಲ್ಲುವಂತಾಗಬೇಕು. ಈ ನಿಟ್ಟಿನಲ್ಲಿ ಕ್ರಮಕ್ಕೆ ಪಾಲಿಕೆ ಮುಂದಾಗಬೇಕಿದೆ.
ಬಿಡ್‌ದಾರರು ಬರುತ್ತಿಲ್ಲ : ಅವಳಿನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಟೆಂಡರ್ ಕರೆದರೆ ಬಿಡ್ಡದಾರರೇ ಬರುತ್ತಿಲ್ಲ. ಬಂದರೂ ಕಡಿಮೆ ಬಿಡ್ ಮಾಡುತ್ತಿದ್ದು, ಇದರಿಂದ ಹುಬ್ಬಳ್ಳಿಯಲ್ಲಿ ದಾಜೀಬಾನ ಪೇಟೆ, ಬ್ರಾಡ್‌ವೇ, ಜವಳಿಸಾಲ, ಕೊಯಿನ್ ರಸ್ತೆ, ವಿಕ್ಟೋರಿಯಾ ರಸ್ತೆ, ಕಾರವಾರ ರಸ್ತೆ, ಮರಾಠಾ ಗಲ್ಲಿ, ದೇಶಪಾಂಡೆ ನಗರ, ಐಬಿ ರಸ್ತೆ, ಕ್ಲಬ್ ರಸ್ತೆ, ಕೋರ್ಟ್ ಸರ್ಕಲ್, ಸ್ಟೇಶನ್ ರಸ್ತೆ, ಶಹಾ ಬಜಾರ ರಸ್ತೆ, ನ್ಯೂ ಕಾಟನ್ ಮಾರ್ಕೆಟ್, ನೀಲಿಜನ್ ರಸ್ತೆ ಹಾಗೂ ಧಾರವಾಡದಲ್ಲಿ ಸುಭಾಸ್ ರಸ್ತೆ, ರೈಲ್ವೆ ಸ್ಟೇಶನ್ ರಸ್ತೆ, ಲಕ್ಷ್ಮೀ ಟಾಕೀಜ್ ರಸ್ತೆ, ಕಿಟಲ್ ಕಾಲೇಜ್ ರಸ್ತೆ, ಕಾಸ್‌ಮಸ್ ಕ್ಲಬ್ ರಸ್ತೆ ಕಡೆಗಳಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿಗೆ ಟೆಂಡರ್ ಪ್ರಕ್ರಿಯೆ ಬಿಡ್‌ದಾರರು ಮುಂದಾಗುತ್ತಿಲ್ಲ. ದುರ್ಗದ ಬಯಲು, ಕೊಪ್ಪಿಕರ ರಸ್ತೆನಲ್ಲಿ ಮಾತ್ರ ಶುಲ್ಕ ಸಂಗ್ರಹ ಟೆಂಡರ್ ಪಡೆಯಲಾಗಿದೆ.
ಹತ್ತರಲ್ಲಿ ಬಂದಿದ್ದು ಎರಡೇ ಕಡೆ! : ಹುಬ್ಬಳ್ಳಿಯಲ್ಲಿ 8 ಹಾಗೂ ಧಾರವಾಡದಲ್ಲಿ 2 ಪಾರ್ಕಿಂಗ್ ಶುಲ್ಕ ಸಂಗ್ರಹ ಟೆಂಡರ್ ಪ್ರಕ್ರಿಯೆ ನಡೆಸಿದರೆ, ಅದರಲ್ಲಿ ಕೇವಲ 2 ಕಡೆ ಮಾತ್ರ ಗುತ್ತಿಗೆ ಪಡೆಯಲಾಗಿದೆ. ಕೊಪ್ಪಿಕರ ರಸ್ತೆ ಶಿವಾಜಿ ಕ್ರಾಸ್‌ನಿಂದ ವನೆಸನ್ಸ್ ಕ್ರಾಸ್‌ವರೆಗೆ ಅರುಣ ಶಿರಕೆ ಎನ್ನುವವರಿಗೆ 8.20ಲಕ್ಷ ರೂ.ಗೆ ಗುತ್ತಿಗೆ ನೀಡಲಾಗಿದೆ. ದ್ವಿಚಕ್ರ ವಾಹನಗಳಿಗೆ ಮೊದಲ 2 ತಾಸಿಗೆ 5 ರೂ., ತದನಂತರ ಪ್ರತಿ ಒಂದು ತಾಸಿಗೆ 1 ರೂ. ಹೆಚ್ಚಳವಾಗುತ್ತಾ ಹೋಗುತ್ತದೆ. ಇನ್ನು ನಾಲ್ಕು ಚಕ್ರದ ವಾಹನಗಳಿಗೆ ಮೊದಲ 2 ತಾಸಿಗೆ 10 ರೂ.ಗಳು, ತದನಂತರ ಪ್ರತಿ ಒಂದು ತಾಸಿಗೆ 2 ರೂ. ಹೆಚ್ಚುತ್ತ ಹೋಗುತ್ತದೆ. ದುರ್ಗದ ಬಯಲು ಪ್ರದೇಶದಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹ ಗುತ್ತಿಗೆಯನ್ನು ಆಶಿಫ್ ನದಾಫ್ ಅವರಿಗೆ 7.91 ಲಕ್ಷ ರೂ. ಗೆ ನೀಡಲಾಗಿದೆ
ಪಾಲಿಕೆ ಆಯುಕ್ತರು ಏನಂದ್ರು? : ನಗರದಲ್ಲಿ ಎರಡು ಕಡೆ ವಾಹನ ನಿಲುಗಡೆ ಶುಲ್ಕ ಸಂಗ್ರಹ ಗುತ್ತಿಗೆ ನೀಡಲಾಗಿದ್ದು, ಅಲ್ಲಿ ನಿಗದಿಗಿಂತ ಹೆಚ್ಚಿನ ಹಣ ಪಡೆಯಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈಗಾಗಲೇ ಒಂದು ಬಾರಿ ಪರಿಶೀಲನೆ ಮಾಡಲಾಗಿದ್ದು, ಅಂತಹ ಪ್ರಕರಣಗಳು ಕಂಡುಬಂದಿಲ್ಲ. ಆದರೂ ಮತ್ತೂಮ್ಮೆ ಹೊರ ವ್ಯಕ್ತಿಗಳಿಂದ ಪರಿಶೀಲನೆ ಮಾಡಿಸಿ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದು ಕಂಡು ಬಂದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಇಲ್ಲವೇ ಟೆಂಡರ್ ರದ್ದು ಪಡಿಸಲಾಗುವುದು. ಅವಳಿನಗರದ ಪಾರ್ಕಿಂಗ್ ಶುಲ್ಕ ವಸೂಲಿ ಟೆಂಡರ್ ಪ್ರಕ್ರಿಯೆ ನಡೆಸಿ ಗುತ್ತಿಗೆ ನೀಡಲಾಗುವುದು ಎಂಬುದು ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಅವರ ಹೇಳಿಕೆ.
– ಬಸವರಾಜ ಹೂಗಾರ