Advertisement

ಮಾರುಕಟ್ಟೆ ಅಲ್ಲಿ; ಪಾರ್ಕಿಂಗ್‌ ಇಲ್ಲಿ!

10:35 AM Feb 21, 2020 | Suhan S |

ಬೆಂಗಳೂರು: ಆಸ್ಪತ್ರೆ ಪಕ್ಕದಲ್ಲಿಯೇ ನಡೆಯುವ ಸಂತೆಗೆ ನಿತ್ಯ ಸಹಸ್ರಾರು ಜನ ಬರುತ್ತಾರೆ. ಆ ಪೈಕಿ ಬಹುತೇಕರು ಆಸ್ಪತ್ರೆ ಆವರಣದಲ್ಲಿ ವಾಹನ ನಿಲ್ಲಿಸಿ ಸಂತೆಗೆ ಹೋಗುತ್ತಾರೆ. ಇದರಿಂದ ಆಸ್ಪತ್ರೆಗಳ ಆವರಣ ವಾಹನಗಳ ನಿಲುಗಡೆ ತಾಣವಾಗಿ ಮಾರ್ಪಟ್ಟಿದೆ. ಪರಿಣಾಮ ನಿತ್ಯ ಆಸ್ಪತ್ರೆಗೆ ಬರುವ 50ಕ್ಕೂ ಹೆಚ್ಚು ಆ್ಯಂಬುಲೆನ್ಸ್‌ಗಳ ಓಡಾಟ, ನಿಲುಗಡೆಗೂ ಸಮಸ್ಯೆಯಾಗುತ್ತಿದೆ. – ಇದು ಎಂಟು ಆಸ್ಪತ್ರೆಗಳಿರುವ ವಿಕ್ಟೋರಿಯಾ ಸಮುಚ್ಛಯದ ಸ್ಥಿತಿ.

Advertisement

ಶತಮಾನಗಳ ಇತಿಹಾಸ ಹೊಂದಿರುವ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಹಾಗೂ ಸಮುತ್ಛಯದ ಇತರೆ ಆಸ್ಪತ್ರೆಗಳಿಗೆ ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಂದ ರೋಗಿಗಳನ್ನು ಕರೆತರಲಾಗುತ್ತದೆ. ಇದಕ್ಕಾಗಿನಿ ತ್ಯ 50ಕ್ಕೂ ಹೆಚ್ಚು ಆ್ಯಂಬುಲೆನ್ಸ್‌ಗಳು ಓಡಾಟ ನಡೆಸುತ್ತವೆ. ಆದರೆ, ಆಸ್ಪತ್ರೆಯ ಆವರಣದಲ್ಲಿ ಇವುಗಳ ನಿಲುಗಡೆ, ಸರಾಗವಾಗಿ ಓಡಾಟ ಮಾತ್ರ ಸಾಧ್ಯವಾಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಆಸ್ಪತ್ರೆ ಆವರಣದಲ್ಲಿ ತುಂಬೆಲ್ಲಾ ತೆಲೆಎತ್ತಿರುವ ಅನಧಿಕೃತ ವಾಹನ ನಿಲುಗಡೆ ತಾಣಗಳು ಹಾಗೂ ಅಲ್ಲಿ ನಿಲ್ಲುವ ಕೆ.ಆರ್‌.ಮಾರುಕಟ್ಟೆಗೆ ಬರುವವರ ವಾಹನಗಳು.

ಕೆ.ಆರ್‌. ಮಾರುಕಟ್ಟೆ ವಾಹನ ನಿಲುಗಡೆ ತಾಣವಿದ್ದರೂ, ಅಲ್ಲಿ ವಾಹನ ದಟ್ಟಣೆ, ಜನಜಂಗುಳಿ, ದರ ಹೆಚ್ಚು, ಇಕ್ಕಟ್ಟಿನ ಜಾಗ ಎಂಬ ಇತ್ಯಾದಿ ಕಾರಣಗಳಿಂದ ಆಸ್ಪತ್ರೆಯಲ್ಲಿ ನಿಲ್ಲಿಸುವುದೇ ಸೂಕ್ತ ಎಂದು ಸಾಕಷ್ಟು ಮಂದಿ ಗ್ರಾಹಕರು, ವ್ಯಾಪಾರಿಗಳು ವಿಕ್ಟೋರಿಯಾ ಆಸ್ಪತ್ರೆ ಸಮುಚ್ಛಯದಲ್ಲಿಯೇ ಕಡಿಮೆ ಖರ್ಚಿನಲ್ಲಿ ವಾಹನ ನಿಲ್ಲಿಸಿ ಹೋಗುತ್ತಿದ್ದಾರೆ. ಸ್ಥಳೀಯರು ಹಾಗೂ ಆಸ್ಪತ್ರೆ ಕೆಳ ವರ್ಗದ ಸಿಬ್ಬಂದಿ ಹೇಳುವಂತೆ ಆಸ್ಪತ್ರೆ ಸಮುತ್ಛಯದಲ್ಲಿ ನಿತ್ಯ ಒಂದು ಸಾವಿರಕ್ಕೂ ಹೆಚ್ಚು ವಾಹನಗಳು ನಿಲುಗಡೆಯಾಗಿದ್ದರೆ, ಅವುಗಳಲ್ಲಿ ಶೇ.50ರಷ್ಟು ಮಾರುಕಟ್ಟೆಗೆಂದು ಬಂದವರ ವಾಹನಗಳು.

10 ರೂ. ಕೊಟ್ಟರೆ ಸಾಕು; ವಾಹನ ನಿಲ್ಲಿಸಿದ್ದೇ ನಿಲುಗಡೆ ತಾಣ ವಾಹನ ನಿಲುಗಡೆಗೆಂದು ಗುತ್ತಿಗೆ ಪಡೆದ ಸಂಸ್ಥೆಯು ಏಳೆಂಟು ನಿಬ್ಬಂದಿಯನ್ನು ನಿಯೋಜನೆ ಮಾಡಿದ್ದು, ಇವರು ಸಮುತ್ಛಯದ ವಿವಿಧ ಕಟ್ಟಡಗಳ ಮುಂದೆ ಓಡಾಟ ನಡೆಸುತ್ತಿರುತ್ತಾರೆ. ಯಾರಾದರು ವಾಹನ ತಂದು ನಿಲ್ಲಿಸಿದರೆ ಶುಲ್ಕ ಕಟ್ಟುವಂತೆ ಹೇಳುತ್ತಾರೆ. ವಾಹನ ಸವಾರರು “ಪಾರ್ಕಿಂಗ್‌ ಎಲ್ಲಿ ಮಾಡುವುದು ?” ಎಂದು ಕೇಳಿದರೆ, ಪಾರ್ಕಿಂಗ್‌ ಸಿಬ್ಬಂದಿ “10 ರೂ.ಕೊಡಿ ಸಾರ್‌, ಎಲ್ಲಾದರೂ ನಿಲ್ಲಿಸಿ’ ಎನ್ನುತ್ತಾರೆ. ಇನ್ನು 10 ರೂ. ಶುಲ್ಕದಲ್ಲಿಯೇ ಬೆಳಗ್ಗೆ 6 ರಿಂದ ಸಂಜೆ 5ರವರೆಗೂ ನಿಲ್ಲಿಸಬಹುದು. ಸಂಜೆ 5 ಗಂಟೆಗೆ ನಂತರ ಬರುವ ರಾತ್ರಿ ಪಾಳಿಯ ಸಿಬ್ಬಂದಿಗೆ 10 ರೂ. ನೀಡಿದರೆ ಬೆಳಗ್ಗೆ 6ರವರೆಗೂ ನಿಲ್ಲಿಸಲು ಅವಕಾಶವಿದೆ.

ಅನಧಿಕೃತ ಪಾರ್ಕಿಂಗ್‌ ಸಮಸ್ಯೆ ಇದೆ :  ಈ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ ನಿರ್ದೇಶಕಿ ಡಾ.ಜಯಂತಿ ಅವರು, ವಿಕ್ಟೋರಿಯಾ ಸಮುತ್ಛಯವು ಅನಧಿಕೃತ ಪಾರ್ಕಿಂಗ್‌ ತಾಣವಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಮಾರುಕಟ್ಟೆಗೆ ಬಂದವರು ಆಸ್ಪತ್ರೆಯಲ್ಲಿ ವಾಹನ ನಿಲುಗಡೆ ಮಾಡುತ್ತಿರುವುದು ನಿಜ. ಇದರಿಂದ ಆಸ್ಪತ್ರೆಗೆ ಬರುವವರಿಗೆ ಸಮಸ್ಯೆಯಾಗುತ್ತಿದ್ದು, ಇದಕ್ಕೆ ಶೀಘ್ರದಲ್ಲಿಯೇ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು.

Advertisement

ಫುಟ್‌ಪಾತ್‌ನಲ್ಲೇ ವಿಶ್ರಾಂತಿ; ರಸ್ತೆ  ತುಂಬಾ ಜನ :  ಆಸ್ಪತ್ರೆಯ ಎಲ್ಲೆಡೆ ಪಾದಾಚಾರಿ ಮಾರ್ಗಗಳಿವೆ. ಆದರೆ, ಅವುಗಳ ಮೇಲೆ ರೋಗಿಗಳು ಮತ್ತವರ ಸಂಬಂಧಿಗಳು ಮಲಗಿರುತ್ತಾರೆ. ಇದರಿಂದ ಜನ ಸಾಮಾನ್ಯ, ಆಸ್ಪತ್ರೆಗಳಿಂದ ಆಸ್ಪತ್ರೆ ವರ್ಗಾ ಹಿಸುವ ರೋಗಿಗಳು ರಸ್ತೆ ಮೇಲೆ ಓಡಾಟ ನಡೆಸುತ್ತಾರೆ. ಹೀಗಾಗಿ, ರಸ್ತೆಗಳಲ್ಲಿ ದಟ್ಟಣೆಯಾಗಿ ಆಂಬ್ಯುಲೆನ್ಸ್‌ ಓಡಾಟಕ್ಕೆ ಅಡಚಣೆ ಯಾಗುತ್ತಿದೆ. ಇದರಿಂದ ಆಂಬ್ಯುಲೆನ್ಸ್‌ಗಳು ನಗರದ ಟ್ರಾಫಿಕ್‌ ದಾಟಿಕೊಂಡು ಆಸ್ಪತ್ರೆ ಪ್ರವೇಶಿಸಿದರೂ, ಇಲ್ಲಿಯೂ ಸೂಕ್ತ ಸಂಚಾರಕ್ಕೆ ವ್ಯವಸ್ಥೆ ಇಲ್ಲದೆ ಚಾಲಕರು ಪರಡಾಟ ನಡೆಸುತ್ತಿದ್ದಾರೆ. “ಆಂಬ್ಯುಲೆನ್ಸ್‌ ನಿಲುಗಡೆ ಚಿಕ್ಕ ನಿಲುಗಡೆ ತಾಣವಿದೆ. ಅಲ್ಲಿಯೂ ಸದಾ ಖಾಸಗಿ ವಾಹನಗಳು ನಿಂತಿರುತ್ತವೆ. ರಸ್ತೆ ಮಧ್ಯೆಯೇ ನಿಲ್ಲಿಸಿಕೊಂಡು ಹೊರಹೋಗುತ್ತೇವೆ’ ಎನ್ನುತ್ತಾರೆ ಚಾಲಕರು.

ನಗರದ ಟ್ರಾಫಿಕ್‌ ದಾಟಿ ಬರುವುದರಲ್ಲಿಯೇ ತಡವಾಗಿರುತ್ತದೆ. ಆಸ್ಪತ್ರೆ ಆವರಣ ಪ್ರವೇಶಿಸಿದರೆ, ವಾಹನಗಳು, ಜನರೇ ತುಂಬಿರುತ್ತಾರೆ. ಇನ್ನಷ್ಟು ತಡವಾಗುವ ಜತೆಗೆ, ವಾಹನ ದಟ್ಟಣೆಯಿಂದ ವಾರ್ಡ್‌ಗೆ ರೋಗಿಗಳ ವರ್ಗಾವಣೆ ಕಷ್ಟವಾಗುತ್ತದೆ. ಅನಧಿಕೃತ ವಾಹನಗಳಿಗೆ ಕಡಿವಾಣ ಹಾಕಬೇಕು. ಮುಸ್ತಾಫಾ ಶರೀಫ್, ಆ್ಯಂಬುಲೆನ್ಸ್‌ ಚಾಲಕ

ಎಲ್ಲೆಲ್ಲೂ ವಾಹನ :  ಆಸ್ಪತ್ರೆ ಪ್ರವೇಶದಿಂದ ಹಿಡಿದು ಆಸ್ಪತ್ರೆಯ ಯಾವುದೇ ರಸ್ತೆ, ಕಟ್ಟಡ, ಕ್ಯಾಂಟೀನ್‌, ಪ್ರಯೋಗಾಲಯಗಳು ಕಡೆ ಕಣ್ಣಾಡಿಸಿದರೂ ಅಲ್ಲೆಲ್ಲಾ ಸಾಲು ವಾಹನಗಳೇ ಕಾಣುತ್ತವೆ. ಆಸ್ಪತ್ರೆಯ ಚಿಕ್ಕ ಜಾಗದಲ್ಲಿಯೂ ಎರಡು ಮೂರು ಬೈಕ್‌ ನಿಲ್ಲಿಸಲಾಗಿರುತ್ತದೆ. ವಿಶೇಷವೆಂದರೆ ಈ ಎಲ್ಲಾ ಕಡೆಗಳಲ್ಲಿಯೂ “ನೋ ಪಾರ್ಕಿಂಗ್‌’ ಬೋರ್ಡ್‌ ಇದೆ. ಆಸ್ಪತ್ರೆ ಪ್ರವೇಶ ಹಾಗೂ ಹಿಂಬದಿಯಲ್ಲಿ ಎರಡು ಕಡೆ ಮಾತ್ರ ಚಿಕ್ಕದಾದ ಅಧಿಕೃತ ವಾಹನ ನಿಲುಗಡೆ ಇದ್ದರೆ, 15ಕ್ಕೂ ಹೆಚ್ಚು ಕಡೆ ಅನಧಿಕೃತ ವಾಹನ ನಿಲುಗಡೆ ಮಾಡಲಾಗುತ್ತಿದೆ. ಮುಖ್ಯವಾಗಿ ಆಂಬ್ಯುಲೆನ್‌ ಓಡಾಟ ಮಾಡುವ ರಸ್ತೆಯ ಅರ್ಧಭಾಗವು ಕೂಡಾ ಅನಧಿಕೃತ ನಿಲುಗಡೆ ತಾಣವಾಗಿದೆ.

 

-ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next