Advertisement

ಪಾರ್ಕಿಂಗ್‌ ಸಮಸ್ಯೆ ಉಲ್ಬಣ; ರಸ್ತೆಯಲ್ಲೇ ವಾಹನ ನಿಲುಗಡೆ

08:28 AM Nov 28, 2022 | Team Udayavani |

ಉಡುಪಿ: ನಗರಸಭೆ ವ್ಯಾಪ್ತಿ ಉಡುಪಿ, ಮಣಿಪಾಲ, ಮಲ್ಪೆ ಭಾಗದಲ್ಲಿ ಪಾರ್ಕಿಂಗ್‌ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೆ ಸವಾರರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವಂತಾಗಿದೆ. ಪರಿಣಾಮ ವಾಹನ ಗಳು ಅಪಘಾತ ಕ್ಕೀಡಾಗುವುದು, ಪಾದಚಾರಿಗಳಿಗೆ ತೊಂದರೆ, ಮೊದಲಾದ ಸಮಸ್ಯೆಗಳು ಉಲ್ಬಣವಾಗುತ್ತಿವೆ. ಉಡುಪಿ, ಮಣಿಪಾಲ, ಮಲ್ಪೆ ಭಾಗದಲ್ಲಿ ವಾಣಿಜ್ಯ ಕಟ್ಟಡಗಳು ಇತ್ತೀಚೆಗೆ ಸಾಕಷ್ಟು ಸಂಖ್ಯೆಯಲ್ಲಿ ತಲೆ ಎತ್ತುತ್ತಿವೆ.

Advertisement

ಉಡುಪಿಯಲ್ಲಿ ಕೆ. ಎಂ. ಮಾರ್ಗ, ಕಲ್ಸಂಕ ದಿಂದ ಸಿಟಿ ಬಸ್‌ ನಿಲ್ದಾಣವರೆಗೂ ರಸ್ತೆ ಬದಿಯಲ್ಲಿ ವಾಹನಗಳು ನಿಲುಗಡೆ ಯಾಗಿರುತ್ತದೆ. ಸಿಟಿ ಬಸ್‌ ನಿಲ್ದಾಣ ಅಶ್ವತ್ಥಮರದ ಸಮೀಪ ಒನ್‌ವೇ ರಸ್ತೆ ಇದೀಗ ದ್ವಿಚಕ್ರ, ಕಾರು ನಿಲುಗಡೆ ತಾಣವಾಗಿದೆ. ಶಿರಿಬೀಡು ಜಂಕ್ಷನ್‌ನಿಂದ, ಬನ್ನಂಜೆ ಹೆದ್ದಾರಿ ಅಕ್ಕಪಕ್ಕ ವಾಹನಗಳು ಪಾರ್ಕಿಂಗ್‌ ಮಾಡಲಾಗುತ್ತಿವೆ.

ಗುಂಡಿಬೈಲಿನಲ್ಲಿ ವಾಹನಗಳು ರಸ್ತೆಯಲ್ಲೆ ನಿಲ್ಲಿಸುವುದರಿಂದ ದೊಡ್ಡಣಗುಡ್ಡೆ ಕಡೆಯಿಂದ ಮುಖ್ಯರಸ್ತೆಗೆ ಬಂದು ಉಡುಪಿ ಅಥವಾ ಅಂಬಾಗಿಲು ಕಡೆಗೆ ಹೋಗುವಾಗ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿವೆ.

ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವ, ಅತ್ಯಧಿಕ ಮೀನುಗಾರಿಕೆ ವಹಿವಾಟು ನಡೆಯುವ ಮಲ್ಪೆಯಲ್ಲಿಯೂ ವ್ಯವಸ್ಥಿತ ಪಾರ್ಕಿಂಗ್‌ ಸೌಲಭ್ಯವಿಲ್ಲ. ಬೀಚ್‌ ಸುತ್ತಮುತ್ತ ಪರಿಸರದಲ್ಲಿ ರಸ್ತೆಗಳ ಮೆಲೆ ಕಾರು, ಟೂರಿಸ್ಟ್‌ ವಾಹನಗಳು ಅಡ್ಡಾದಿಡ್ಡಿ ಪಾರ್ಕಿಂಗ್‌ ಆಗಿರುತ್ತವೆ. ಮಣಿಪಾಲದಲ್ಲಿಯೂ ಪಾರ್ಕಿಂಗ್‌ ಸೌಲಭ್ಯ ಲ್ಲದೇ ರಸ್ತೆ ಮೇಲೆ ಕಾರುಗಳು ನಿಂತಿರುತ್ತದೆ. ಇದರಿಂದ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾಗುತ್ತದೆ. ಶುಲ್ಕ ಪಾವತಿ ಪಾರ್ಕಿಂಗ್‌ ವ್ಯವಸ್ಥೆಯನ್ನು ಕೆಎಂಸಿ ಆಸ್ಪತ್ರೆ ವತಿಯಿಂದ ಕಲ್ಪಿಸಿದ್ದರೂ ಇದನ್ನು ಬಹುತೇಕರು ಬಳಕೆ ಮಾಡದೆ ಮುಖ್ಯಸ್ಥೆಯಲ್ಲೇ ಮಣಿಪಾಲ ಟೈಗರ್‌ ವೃತ್ತದಿಂದ ಈಶ್ವರನಗರದವರೆಗೂ ಎರಡೂ ಕಡೆಗಳಲ್ಲೂ ವಾಹನ ನಿಲ್ಲಿಸಿರುತ್ತಾರೆ. ಇದರಿಂದ ಪಾದಚಾರಿಗಳಿಗೂ ಸಮಸ್ಯೆಯಾಗುತ್ತಿವೆ.

ಮಲ್ಪೆ, ಉಡುಪಿ, ಮಣಿಪಾಲ ಭಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿ, ವ್ಯವಸ್ಥಿತವಾಗಿಸುವಂತೆ ನಗರಸಭೆ ಆಡಳಿತ ಮತ್ತು ಸಂಚಾರ ಠಾಣೆ ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬುದು ಜನ ಆಗ್ರಹವಾಗಿದೆ.

Advertisement

ನಾಗರಿಕರಿಗೆ ಜಾಗೃತಿ: ನಗರದಲ್ಲಿ ಅನಧಿಕೃತ ಪಾರ್ಕಿಂಗ್‌, ಸಂಚಾರ ದಟ್ಟಣೆ ಸಮಸ್ಯೆಗೆ ಸಂಬಂಧಿಸಿ ಸಂಚಾರ ಠಾಣೆ ಪೊಲೀಸರು ಎಲ್ಲ ರೀತಿಯಿಂದಲೂ ಶ್ರಮಿಸುತ್ತಿದ್ದಾರೆ. ಎಲ್ಲೆಂದರಲ್ಲಿ ಪಾರ್ಕಿಂಗ್‌ ಮಾಡುವುದರಿಂದ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ನಾಗರಿಕರಿಗೆ ಜಾಗೃತಿ ಮೂಡಿಸುತ್ತಿದ್ದೇವೆ.   –ಶಕ್ತಿವೇಲು, ಉಪ ನಿರೀಕ್ಷಕರು, ಸಂಚಾರಿ ಪೊಲೀಸ್‌ ಠಾಣೆ, ಉಡುಪಿ

ಪಾರ್ಕಿಂಗ್‌ ಸೌಕರ್ಯ: ನಗರ ವ್ಯಾಪ್ತಿ ಪಾರ್ಕಿಂಗ್‌ ವ್ಯವಸ್ಥೆ ಸುಧಾರಣೆಗೆ ಈಗಾಗಲೆ ತಾತ್ಕಾಲಿಕ ರೀತಿಯಲ್ಲಿ ಹಲವು ಕ್ರಮ ಕೈಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ನಗರದಲ್ಲಿ ವ್ಯವಸ್ಥಿತ ಪಾರ್ಕಿಂಗ್‌ ಸೌಕರ್ಯ ಕಲ್ಪಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು.   – ಡಾ| ಉದಯಕುಮಾರ್‌ ಶೆಟ್ಟಿ, ಪೌರಾಯುಕ್ತರು, ಉಡುಪಿ ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next