Advertisement

ಪಾರ್ಕಿಂಗ್‌ ತಾಣಕ್ಕೆ ಹೋಗಲು ತೆಪ್ಪ ಬೇಕು!

10:06 PM Apr 08, 2021 | Team Udayavani |

ಕುಂದಾಪುರ: ಸಣ್ಣ ನಗರದಲ್ಲಿ ಇರುವ ಪ್ರದೇಶದಲ್ಲಿ ಮಾಡಲಾದ ವ್ಯವಸ್ಥೆಯೊಂದು ಅವೈಜ್ಞಾನಿಕ ಯೋಜನೆಯಿಂದಾಗಿ ಇದ್ದರೂ ಪ್ರಯೋಜನಕ್ಕಿಲ್ಲದ ಸ್ಥಿತಿ. ಕಣ್ಣಿಗೆ ಕಂಡರೂ ಅಲ್ಲಿಗೆ ವಾಹನ ಕೊಂಡೊಯ್ಯಲು ತೆಪ್ಪ ಅಥವಾ ದೋಣಿ ಬೇಕು!.

Advertisement

-ಇದು ಕುಂದಾಪುರ ಪುರಸಭೆ ಎದುರಿನ ಯೋಜನಾ ಪ್ರಾಧಿಕಾರ, ಎಸ್‌ಬಿಐ ಇರುವ ಕಟ್ಟಡದಲ್ಲಿನ ಪಾರ್ಕಿಂಗ್‌ಗೆಂದೇ ಮೀಸಲಾದ ವಿನ್ಯಾಸಗೊಳಿಸಲಾಗಿರುವ ನೆಲ ಮಹಡಿಯ ಸ್ಥಿತಿ.

ಅದ್ಯಾವ ಎಂಜಿನಿಯರ್‌ ಇದರ ವಿನ್ಯಾಸಗಾರರೋ ತಿಳಿಯದು. ಮಳೆಗಾಲದಲ್ಲಿ ಪೂರ್ತಿ ನೀರು ತುಂಬಿರುತ್ತದೆ. ರಸ್ತೆಯ ನೀರೆಲ್ಲ ಇದರಲ್ಲಿ ತುಂಬಿ ಕಟ್ಟಡಕ್ಕೇ ಆತಂಕದ ಸ್ಥಿತಿ ಇರುತ್ತದೆ. ಇನ್ನು ಮಳೆಗಾಲ ಮುಗಿದು ಕೆಲವು ಸಮಯದಲ್ಲಿ ನೀರು ಖಾಲಿಯಾದರೂ ಅಲ್ಲಿನ ಗಲೀಜು ಹಾಗೆಯೇ ಇರುತ್ತದೆ. ಮಳೆ ನೀರಿ ನೊಂದಿಗೆ ಬಂದ ಕೆಸರು ಸಹಿತ ಯಾವುದನ್ನೂ ಸರಿ ಯಾಗಿ ತೆಗೆದಿರುವುದಿಲ್ಲ. ಆದುದರಿಂದ ಅನಂತರವೂ ಇಲ್ಲಿ ವಾಹನಗಳ ನಿಲುಗಡೆಗೆ ಯಾವ ವಾಹನ ಮಾಲಕರೂ ಮನಸ್ಸು ಮಾಡುವುದಿಲ್ಲ. ಹಾಗಾಗಿ ಬೇಸಗೆ, ಮಳೆಗಾಲ ಎನ್ನದೇ ಇಲ್ಲಿ ವಾಹನಗಳಂತೂ ನಿಲ್ಲುವುದಿಲ್ಲ. ಒಟ್ಟಿನಲ್ಲಿ ಇದು ನಿಷ್ಕಲವಾಗಿದೆ.

ನಕ್ಷೆಯಲ್ಲಿ ಮಾತ್ರ! :

ಇತರ ಹೆಚ್ಚಿನ ಕಡೆಗಳಂತೆ ಇಲ್ಲಿಯದ್ದೂ ಇದೇ ಸ್ಥಿತಿ. ಹೊಸದಾಗಿ ಕಟ್ಟಡ ನಿರ್ಮಿಸುವಾಗ ಅನುಮತಿ ಪಡೆಯುವ ಸಂದರ್ಭ ನಕ್ಷೆಯಲ್ಲಿ ಪಾರ್ಕಿಂಗ್‌ ಜಾಗವನ್ನು ತೋರಿಸಲಾಗುತ್ತದೆ. ದೊಡ್ಡ ಕಟ್ಟಡಗಳಾದರೆ ನೆಲಮಹಡಿಯನ್ನು ಪಾರ್ಕಿಂಗ್‌ಗೆ ಎಂದು ನಮೂದಿಸ ಲಾಗುತ್ತದೆ. ಕಟ್ಟಡ ನಿರ್ಮಾಣ ವೇಳೆಯೂ ಆಕ್ಷೇಪ ಬರದಂತೆ ಈ ನೆಲ ಮಹಡಿ ವಾಹನಗಳ ಪಾರ್ಕಿಂಗ್‌ಗೇ ಇರುತ್ತದೆ. ಆದರೆ ವರ್ಷವಾಗುತ್ತಾ ಬರುತ್ತಿದ್ದಂತೆ ಅದರಲ್ಲಿ ಅಂಗಡಿ ಮಳಿಗೆ ಮಾಡಿ ಬಾಡಿಗೆಗೆ ನೀಡಲಾಗುತ್ತದೆ. ಗ್ರಾಹಕರ ವಾಹನಗಳೆಲ್ಲ ಯಥಾ ಪ್ರಕಾರ ರಸ್ತೆಗೆ ತಾಗಿಕೊಂಡೇ ನಿಲ್ಲಬೇಕಾದ ಸ್ಥಿತಿ.

Advertisement

ಮಾಲಕರೇ ಗ್ರಾಹಕರು! :

ಗ್ರಾಹಕರೇ ಮಾಲಕರು ಎಂಬುದು ವ್ಯಾಪಾರಿ ವಲಯದ ಮಾತು. ಆದರೆ ಪಾರ್ಕಿಂಗ್‌ ವಿಷಯಕ್ಕೆ ಬಂದಾಗ ಮಾತ್ರ ಇದು ಇಲ್ಲಿ ಉಲ್ಟಾ!. ಗ್ರಾಹಕರು ವಾಹನ ಪಾರ್ಕ್‌ ಮಾಡುವ ಸ್ಥಳದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಮಾಲಕರ ವಾಹನವೇ ನಿಂತಿರುತ್ತದೆ. ಅಂಗಡಿಗೆಂದು ಬರುವ ಗ್ರಾಹಕ ಎಲ್ಲೆಲ್ಲೋ ವಾಹನ ಇಟ್ಟು ಅಂಗಡಿಗೆ ನಡೆದು ಬಂದು, ಸಾಮಗ್ರಿ ಹೊತ್ತು ಸಾಗುವ ಪರಿಸ್ಥಿತಿ ಇದೆ.

ಅವಕಾಶ ಮಾಡಿದರೂ…

ಪಾರ್ಕಿಂಗ್‌ ಸಮಸ್ಯೆ ಆಗದಂತೆ ಪುರಸಭೆ ಕೆಲವು ಉಪಕ್ರಮಗಳನ್ನೂ ಮಾಡಿದೆ. ಇಲ್ಲವೆಂದಲ್ಲ. ಇರುವ ರಸ್ತೆಯನ್ನು ಅಗಲಪಡಿಸಲಾಗದು. ಇದ್ದ ವ್ಯವಸ್ಥೆಯಲ್ಲೇ ಸಣ್ಣಪುಟ್ಟ ಮಾರ್ಪಾಡು ಮಾಡಿ ಪಾರ್ಕಿಂಗ್‌ಗೆ ಅವಕಾಶ ನೀಡಿದೆ. ಶಾಸ್ತ್ರಿ ಸರ್ಕಲ್‌ ಬಳಿ ಇಂಟರ್‌ಲಾಕ್‌ ಹಾಕಿ ರಿಕ್ಷಾ ತಂಗುದಾಣ ಹಾಗೂ ಇಂದಿರಾ ಕ್ಯಾಂಟೀನ್‌ ಬಳಿ ಬೈಕ್‌ ನಿಲ್ಲಿಸಲು ಅನುವು ಮಾಡಲಾಗಿದೆ. ಶಾಸ್ತ್ರಿ ಸರ್ಕಲ್‌ನಿಂದ ಚರ್ಚ್‌ರೋಡ್‌ವರೆಗೆ ಇಂಟರ್‌ಲಾಕ್‌ ಹಾಕಿ ವಾಹನ ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಕೋರ್ಟ್‌ ಬಳಿ, ಕೋರ್ಟ್‌ ಕ್ಯಾಂಟೀನ್‌ ಬಳಿಯೂ ಇದೇ ಮಾದರಿಯಲ್ಲಿ ಇಂಟರ್‌ಲಾಕ್‌ ಹಾಕಲಾಗಿದೆ. ಚಿಕ್ಕನ್‌ ಸಾಲ್‌ ರಸ್ತೆಯ ಪನ್ನೀರ್‌ ಜುವೆಲರ್‌ ಬಳಿ, ಚರ್ಚ್‌ರೋಡ್‌ ಬಳಿ, ಪಾರಿಜಾತ ಸರ್ಕಲ್‌ ಬಳಿ ವಿದ್ಯುತ್‌ ಕಂಬ, ಟ್ರಾನ್ಸ್‌ಫಾರ್ಮರ್‌ ತೆರವುಗೊಳಿಸಿ ರಸ್ತೆ ವಿಸ್ತ ರಿಸಲಾಗಿದೆ. ಆದರೆ ಈಗಿನ ವಾಹನಗಳ ಸಂಖ್ಯೆಗೆ ಇದು ಸಾಕಾಗುತ್ತಿಲ್ಲ. ಮಾತ್ರವಲ್ಲದೆ ಇಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುವುದರಿಂದ  ಸಮಸ್ಯೆ ಇನ್ನೂ ಸಮಸ್ಯೆಯಾಗಿಯೇ ಉಳಿದಿದೆ.

ವಾಹನದಟ್ಟಣೆ :

ಕುಂದಾಪುರ ಭಾಗಗಳಿಂದ ನೋಂದಣಿಯಾದ ವಾಹನಗಳಿಂದ ಪ್ರತಿ ವರ್ಷ 20 ಕೋ.ರೂ.ಗಿಂತ ಅಧಿಕ ತೆರಿಗೆ (ರಾಜಸ್ವ) ಸಂಗ್ರಹವಾಗುತ್ತದೆ. ಇಲ್ಲಿ ಈವರೆಗೆ 65 ಸಾವಿರಕ್ಕೂ ಅಧಿಕ ವಾಹನ ನೋಂದಣಿಯಾಗಿ ಉಪಯೋಗದಲ್ಲಿದೆ. ಕುಂದಾಪುರ ಭಾಗದ 28 ಸಾವಿರಕ್ಕೂ ಅಧಿಕ ಮಂದಿಗೆ ಚಾಲನೆ ಪರವಾನಿಗೆ ನೀಡಲಾಗಿದೆ. ಇಷ್ಟಲ್ಲದೆ ಇತರೆಡೆಯಿಂದ ಬರುವ ವಾಣಿಜ್ಯ, ಖಾಸಗಿ ಹಾಗೂ ಸಾರ್ವ ಜನಿಕ ವಾಹನಗಳು. ಕೊರೊನಾ ಬಳಿಕ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಸಾರ್ವಜನಿಕ ವಾಹನ ಬಳಸುವವರ ಸಂಖ್ಯೆ ಕಡಿಮೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next