Advertisement

ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್‌ನಿಂದ ಸಂಚಾರಕ್ಕೆ ತೊಂದರೆ

02:54 PM May 04, 2019 | Team Udayavani |

ಮಾಗಡಿ: ಪಟ್ಟಣದಲ್ಲಿ ಅಡ್ಡಾದಿಡ್ಡಿ ವಾಹನಗಳ ಪಾರ್ಕಿಂಗ್‌ನಿಂದ ವಾಹನಗಳ ಸಂಚಾರ ಮತ್ತು ಪಾದಚಾರಿಗಳಿಗೆ ಪ್ರಾಣ ಸಂಕಟವಾಗಿದೆ.

Advertisement

ಪಟ್ಟಣದ ಕಲ್ಯಾಗೇಟ್, ರಾಜಕುಮಾರ್‌ ರಸ್ತೆ, ಕೆಂಪೇಗೌಡ ವೃತ್ತ ಇತರೆಡೆ ದ್ವಿಚಕ್ರ ವಾಹನಗಳನ್ನು ರಸ್ತೆ ಬದಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಇತರೆ ವಾಹನ ಸಂಚಾರ ಹಾಗೂ ಪಾದಚಾರಿಗಳಿಗೆ ತುಂಬ ತೊಂದರೆಯಾಗುತ್ತಿದೆ. ಪಟ್ಟಣದಲ್ಲಿ ಜನ ಸಂಖ್ಯೆ ಜಾಸ್ತಿಯಾದಂತೆ ದಿನೇ ದಿನೇ ವಾಹನ ಸಂಚಾರದ ದಟ್ಟಣೆ ಹೆಚ್ಚಾಗುತ್ತಿದೆ. ಪಟ್ಟಣದ ಬಸ್‌ ನಿಲ್ದಾಣ, ಅರಳೇಪೇಟೆ, ರಾಜಕುಮಾರ್‌ ರಸ್ತೆ, ಕೆಂಪೇಗೌಡ ವೃತ್ತ, ಗೌರಮ್ಮನಕೆರೆ, ತಿರುಮಲೆ, ಹೊಸಪೇಟೆ, ಹೊಂಬಾಳಮ್ಮನಪೇಟೆ ಸೇರಿದಂತೆ ಇತರೆ ಭಾಗಗಳ ರಸ್ತೆಗಳ ವಾಹನ ಸಂಚಾರಕ್ಕೆ ಸವಾರರು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವಾಹನ ಸವಾರರು ನಿಯಮ ಪಾಲಿಸುತ್ತಿಲ್ಲ: ಪಟ್ಟಣದಲ್ಲಿ ವಾಹನ ಸವಾರರು ನಿಯಮ ಪಾಲನೆ ಮಾಡುತ್ತಿಲ್ಲ. ಬಹುತೇಕ ವಾಹನ ಸವಾರರಲ್ಲಿ ಪರವಾನಗಿಯೇ ಇಲ್ಲ. ಅದರಲ್ಲೂ ಚಿಕ್ಕ ಮಕ್ಕಳು ಸಹ ವಾಹನ ಚಾಲನೆ ಮಾಡುತ್ತಿದ್ದಾರೆ. ಇದರಿಂದಾಗಿ ವಾಹನವನ್ನು ಸರಿಯಾಗಿ ಓಡಿಸಲಾಗದೆ ರಸ್ತೆ ಮಧ್ಯೆಯೇ ಬಿದ್ದು, ಎದ್ದು ಕೈಕಾಲು ಮುರಿದುಕೊಂಡ ಪ್ರಸಂಗಗಳು ಆಗಾಗ್ಗೆ ನಡೆಯುತ್ತಿದೆ.

ಕೇಳುವವರೂ ಇಲ್ಲ : ಪಟ್ಟಣದಲ್ಲೊಂದು ಆರ್‌ಟಿಒ ಕಚೇರಿಯಿಲ್ಲ, ಕನಿಷ್ಠ ಪಕ್ಷ ಪೊಲೀಸರು ಸಹ ವಾಹನ ಸವಾರರಿಗೆ ನಿಯಮ ಪಾಲನೆ ಕುರಿತು ಯಾವುದೇ ಜಾಗೃತಿ ಫ‌ಲಕವನ್ನು ಸಹ ಹಾಕಿಲ್ಲ. ದ್ವಿಚಕ್ರ ವಾಹನದಲ್ಲಿ ಮೂರು ಮಂದಿ ಕುಳಿತುಕೊಂಡು ಸಂಚಾರ ಮಾಡುತ್ತಿದ್ದರೂ ಕೇಳುವವರೂ ಇಲ್ಲ ಎಂಬಂತಾಗಿದೆ. ರಸ್ತೆ ಮಧ್ಯೆಯೇ ಆಟೋ, ಕಾರುಗಳು, ಲಾರಿಗಳು ನಿಲ್ಲುತ್ತವೆ. ಕನಿಷ್ಠ ಪಕ್ಷ ರಸ್ತೆ ಬದಿಯಲ್ಲಿ ಪಾರ್ಕಿಂಗ್‌ ಮಾಡುವಂತೆ ತಿಳಿ ಹೇಳುವವರೇ ಇಲ್ಲ.

ಹೊರ ಠಾಣಿ ಸ್ಥಾಪನೆ ಅಗತ್ಯ: ಅಪಘಾತ ನಡೆದಾಗ ಒಂದೆರಡು ದಿನ ಪೊಲೀಸರನ್ನು ರಸ್ತೆಗಳಿಗೆ ಬಿಟ್ಟು ವಾಹನಗಳ ಗಾಜು ಪುಡಿ ಮಾಡುವುದು, ಅಮಾಯಕರಿಗೆ ಲಾಠಿ ರುಚಿ ತೋರಿಸಿ ಸುಮ್ಮನಾಗುತ್ತಾರೆ. ಇಷ್ಟೊಂದು ವಾಹನಗಳು ಪಟ್ಟಣದಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿದ್ದರೂ ಇಲ್ಲಿಯವರೆಗೂ ಕನಿಷ್ಠ ದೂರು ದಾಖಲಿಸಿಲ್ಲ, ನೋಟಿಸ್‌ ನೀಡಿಲ್ಲ. ಹೀಗಾದರೆ ಪಟ್ಟಣದಲ್ಲಿ ರಸ್ತೆಯಲ್ಲಿ ಸುಗಮ ಸಂಚಾರ ಕಾಣಲು ಅಸಾಧ್ಯ ಎಂಬ ಆರೋಪಗಳು ನಾಗರಿಕ ವಲಯದಲ್ಲಿ ಕೇಳಿ ಬರುತ್ತಿದೆ. ಸಂಬಂಧಪಟ್ಟ ಆರ್‌ಟಿಒ ಇಲಾಖೆ ಇಲ್ಲೊಂದು ಹೊರ ಠಾಣೆ ಸ್ಥಾಪನೆ ಮಾಡಿ ವಾಹನ ಸಂಚಾರದ ನಿಯಮ ಪಾಲನೆ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂಬ ಆಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Advertisement

ಪಟ್ಟಣದ ಯಾವುದೇ ರಸ್ತೆಯಲ್ಲಿಯಾದರೂ ನೋಡಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಂತೆ ವಾಹನಗಳು ನಿಲ್ಲುತ್ತವೆ. ಅದರಲ್ಲೂ ಬಹುತೇಕ ಅಂಗಡಿ ಮಾಲೀಕರಿರಬಹುದು, ಇತರರು ಸಹ ತಮ್ಮ ವಾಹನಗಳನ್ನು ಅಂಗಡಿಯ ಬದಿಯ ಕಿರಿದಾದ ರಸ್ತೆಯಲ್ಲಿಯೇ ನಿಲ್ಲಿಸಿರುತ್ತಾರೆ. ಮತ್ತೂಂದು ವಾಹನ ಸಾಗಬೇಕಾದರೆ ನಿಜಕ್ಕೂ ಚಾಲಕ ಹರಸಾಹಸ ಪಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next