Advertisement

ಕಚೇರಿಗಳ ಮುಂದೆ ವಾಹನಗಳ ನಿಲುಗಡೆ ಅವ್ಯವಸ್ಥೆ

02:46 PM Sep 16, 2019 | Team Udayavani |

ಚನ್ನರಾಯಪಟ್ಟಣ: ತಾಲೂಕು ಕೇಂದ್ರವಾದ ಚನ್ನರಾಯಪಟ್ಟಣದಲ್ಲಿ ವಿವಿಧ ಕಚೇರಿಗಳು, ಸಾರ್ವಜನಿಕ ಸ್ಥಳಗಳಲ್ಲಿ ವಾಹನಗಳ ನಿಲುಗಡೆಯ ವ್ಯವಸ್ಥೆ ಯಿಲ್ಲ. ಪುರಸಭೆ, ಮಿನಿ ವಿಧಾನ ಸೌಧ, ಸರ್ಕಾರಿ ಆಸ್ಪತ್ರೆ, ತರಕಾರಿ ಮಾರುಕಟ್ಟೆ, ತಾಲೂಕು ಪಂಚಾಯಿತಿ ಹೀಗೆ ಎಲ್ಲಾ ಕಚೇರಿಗಳಿಗೆ ಆಗಮಿಸುವ ಸಾರ್ವ ಜನಿಕರು ತಮ್ಮ ವಾಹನವನ್ನು ರಸ್ತೆ ಬದಿಯಲ್ಲಿಯೇ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ವಾಹನಗಳ ಸಂಚಾರ, ಪಾದಚಾರಿಗಳು ಪರದಾಡುವಂತಾಗಿದೆ.

Advertisement

ಜಿಲ್ಲೆಯಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣವೆಂದರೆ ಅದು ಚನ್ನರಾಯಪಟ್ಟಣ ಮಾತ್ರ. ಇಂತಹ ಪಟ್ಟಣದಲ್ಲಿ ಪಾರ್ಕಿಂಗ್‌ ಸಮಸ್ಯೆ ತಾಂಡವ ವಾಡುತ್ತಿದೆ. ಇದನ್ನು ಬಗೆ ಹರಿಸಲು ತಾಲೂಕು ಆಡಳಿತವಾಗಲಿ ಇಲ್ಲವೇ ಪುರಸಭೆಯವರಾಗಲಿ ಮುತುವರ್ಜಿ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಸ್ತೆ ಬದಿ ವಾಹನ ನಿಲುಗಡೆ: ಪಟ್ಟಣದಲ್ಲಿ ಅತಿ ಹೆಚ್ಚು ವಹಿವಾಟು ನಡೆಯುವ ರೇಣುಕಾಂಬಾ ರಸ್ತೆ, ಅಂಚೆ ಕಚೇರಿ ರಸ್ತೆ ಹಾಗೂ ಬಾಗೂರು ರಸ್ತೆಗಳ ಎರಡು ಇಬದಿಗಳಲ್ಲೂ ದ್ವಿಚಕ್ರ ವಾಹನಗಳದ್ದೆ ಕಾರುಬಾರು. ಇದಕ್ಕೆ ಕಡಿವಾಣ ಹಾಕಿ ವ್ಯಾಪಾರಸ್ತರಿಗೆ, ಪಾದಚಾರಿಗಳಿಗೆ ಅನುಕೂಲ ಮಾಡಲು ಅಧಿಕಾರಿ ಗಳಾಗಲೀ, ಜನಪ್ರತಿನಿಧಿಗಳಾಗಲಿ ಚಿಂತನೆ ನಡೆಸಿಲ್ಲ. ಊರ ಉಸಾಬರಿ ನಮಗ್ಯಾಗೆ ಎಂಬಂತೆ ಜಾಣ ಕುರುಡು ಅನುಸರಿಸುತ್ತಿದ್ದಾರೆ.

ಪಶು ಆಸ್ಪತ್ರೆ ಆವರಣದಲ್ಲಿ ಪಾರ್ಕಿಂಗ್‌: ಹಳ್ಳಿಗಳಿಂದ ಪಟ್ಟಣಕ್ಕೆ ಬರುವ ದ್ವಿಚಕ್ರ ವಾಹನ ಸವಾರರು ಹಾಗೂ ಪಟ್ಟಣದ ದೂರದ ಬಡಾವಣೆಗಳಿಂದ ನಗರದ ಹೃದಯ ಭಾಗಕ್ಕೆ ದ್ವಿಚಕ್ರ ವಾಹನದಲ್ಲಿ ಆಗಮಿಸಿ ರಸ್ತೆ ಬದಿ ನಿಲ್ಲಿಸಿ ಮಾರುಕಟ್ಟೆಗೆ ತೆರಳಿ ಸಾಮಾನು, ತರಕಾರಿ, ಇತರೆ ವಸ್ತುಗಳನ್ನು ಖರೀದಿ ಮಾಡಲು ಹೋಗುತ್ತಾರೆ. ಕೆಲವರು ಮಾರುಕಟ್ಟೆಗೆ ಹೊಂದುಕೊಂಡಿರುವ ಪಶು ಆರೋಗ್ಯ ಕೇಂದ್ರದ ಆವರಣದಲ್ಲಿ ತಮ್ಮ ವಾಹನ ನಿಲ್ಲಿಸುವುದನ್ನು ರೂಢಿಸಿ ಕೊಂಡಿದ್ದಾರೆ.

ಪುರಸಭೆಯಲ್ಲಿನ ಕೆಲಸಗಳಿಗೆ ಪಟ್ಟಣದ ವಿವಿಧ ವಾರ್ಡ್‌ಗಳಿಂದ ಆಗಮಿಸುವ ಸಾರ್ವಜನಿಕರು ವಾಹನಗಳ ನಿಲುಗಡೆ ಅವ್ಯವಸ್ಥೆಯಿಂದ ಪರದಾಡು ತ್ತಾರೆ. ಮನೆ ತೆರಿಗೆ, ನಿವೇಶನ ತೆರಿಗೆ, ಅಂಗಡಿಗಳ ಪರವಾನಗಿ ನವೀಕರಣ ಮಾಡಿಸಿಕೊಳ್ಳಲು ಬರುವ ವರು ತಮ್ಮ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿ ಇಲ್ಲವೇ ಪ್ರವಾಸಿ ಮಂದಿರದ ರಸ್ತೆಯಲ್ಲಿ ನಿಲ್ಲಿಸುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗುತ್ತಿದೆ.

Advertisement

ಪುರಸಭೆ ನಿರ್ಲಕ್ಷ್ಯ: ಸಾರ್ವಜನಿಕರು ತೊಂದರೆ ಪಡು ತ್ತಿರುವುದನ್ನು ನಿತ್ಯವೂ ಕಣ್ಣಾರೆ ನೋಡುತ್ತಿರುವ ಪುರಸಭಾ ಅಧಿಕಾರಿಗಳು ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿ ಸಲು ಮುಂದಾಗುತ್ತಿಲ್ಲ. ಪುರಸಭೆ ಆಡಳಿತ ಮಂಡಳಿ ಇದ್ದಾಗಲೂ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚಿ ಸುವ ಇಚ್ಛಾಶಕ್ತಿಯನ್ನು 23 ಸದಸ್ಯರು ತೋರಿಲ್ಲ.

ಪುರಸಭೆಯ ಅಧಿಕಾರಿಗಳು ಹಾಗೂ ಸದಸ್ಯರ ತಮ್ಮ ವಾಹನಗಳನ್ನು ನಿಲ್ಲಿಸಲು ಸುರಕ್ಷಿತವಾದ ನಿಲ್ದಾಣ ವನ್ನು ಮಾಡಿಕೊಂಡಿದ್ದಾರೆ. ಅದೇ ಪುರಸಭೆಗೆ ತೆರಿಗೆ ನೀಡಿ ಪುರಸಭೆಗೆ ಆದಾಯ ನೀಡಲು ಬರುವ ನಾಗರಿಕರ ಬಗ್ಗೆ ಕನಿಕರ ತೋರುತ್ತಿಲ್ಲ.

ತಾಪಂ ಸಿಬ್ಬಂದಿ ವಾಹನ ನಿಲುಗಡೆಗೆ ಪರದಾಟ: ತಾಲೂಕು ಪಂಚಾಯಿತಿ ಹಾಗೂ ಮಿನಿ ವಿಧಾನ ಸೌಧದ ಆವರಣದಲ್ಲಿಯೂ ಇದೇ ಗೋಳು. ಸಿಬ್ಬಂದಿ ಗಳಿಗಾಗಿ ಒಂದು ನಿಲ್ದಾಣವನ್ನು ಮಾಡಿಸಿದ್ದಾರೆ. ಆದರೆ ಅಲ್ಲಿ ಸಿಬ್ಬಂದಿಗಳಿಗಿಂತ ಮುಂಚಿತವಾಗಿ ಕಚೇರಿ ಕೆಲಸಗಳಿಗೆ ಆಗಮಿಸುವ ಸಾರ್ವಜನಿಕರು ತಮ್ಮ ವಾಹನಗಳನ್ನು ಸಿಬ್ಬಂದಿ ನಿಲ್ದಾಣದಲ್ಲಿ ನಿಲ್ಲಿಸುತ್ತಾರೆ. ಇನ್ನು ಸರ್ಕಾರಿ ಕಚೇರಿಗಳಾದ ಅರಣ್ಯ ಇಲಾಖೆ, ಕೃಷಿ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆಯ ಗೇಟ್ ಮುಂಭಾಗದಲ್ಲಿ ವಾನಹಗಳನ್ನು ನಿಲ್ಲಿಸುವುದರಿಂದ ಕಚೇರಿಗೆ ಆಗಮಿಸುವವರಿಗೆ ಬಹಳ ತೊಂದರೆ ಆಗುತ್ತಿದೆ ಮಹಿಳೆಯರು ಹಾಗೂ ವಯೋವೃದ್ಧರು ಕಚೇರಿಗಳಿಗೆ ತೆರಳಲು ಹರಸಾಹಸ ಪಡಬೇಕಾಗಿದೆ.

ತಾಲೂಕು ಪಂಚಾಯಿತಿ ಕಟ್ಟಡದಲ್ಲಿ ಶಾಸಕರ ಕಚೇರಿ ಇರುವುದರಿಂದ ಹೆಚ್ಚು ಮಂದಿ ಇಲ್ಲಿಗೆ ಆಗಮಿಸುತ್ತಾರೆ.ಇಲ್ಲಿಯೂ ಪಾರ್ಕಿಂಗ್‌ ವ್ಯವಸ್ಥೆಯಿಲ್ಲ, ಪಂಚಾಯಿತಿ ಆವರಣದಲ್ಲಿ ಹೇಳುವವರಿಲ್ಲ ಕೇಳುವವರಿಲ್ಲ ಪಂಚಾಯಿತಿ ಕಾಂಪೌಡಿನ ಒಳಗೆ ಹೋದರೆ ಕಾಲಿಡಲು ಸ್ಥಳ ಇಲ್ಲದಂತೆ ವಾಹವನ್ನು ನಿಲ್ಲಿಸಿರುತ್ತಾರೆ. ಈ ಬಗ್ಗೆ ತಾಲೂಕು ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷ ಇಲ್ಲವೆ ಸದಸ್ಯರೂ ತಮ್ಮ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ವಾಹನಗಳ ನಿಲುಗಡೆಗೆ ಮಾಡಲು ಮುಂದಾಗಬೇಕಿದೆ.

ಸ್ಥಳವಿದೆ, ಇಚ್ಛಾಶಕ್ತಿ ಇಲ್ಲ: ಪಟ್ಟಣದಲ್ಲಿ ವಾಹನಗಳ ನಿಲ್ದಾಣವನ್ನು ಮಾಡಲು ಸ್ಥಳಾವಾಕಾಶವಿದೆ. ನಿಲ್ದಾಣ ಮಾಡಲು ಯಾರೂ ಮುಂದಾಗುತ್ತಿಲ್ಲ. ಮಿನಿ ವಿಧಾನ ಸೌಧದ ಎಡಭಾಗದಲ್ಲಿ ಸಾಕಷ್ಟು ಸ್ಥಳವಿದೆ ಇದನ್ನು ಉಪಯೋಗಿಸಿಕೊಂಡು ಪಾಂರ್ಕಿಂಗ್‌ ವ್ಯವಸ್ಥೆಗೆ ಅಗತ್ಯವಾದುದನ್ನು ಕಲ್ಪಿಸಿ ಹರಾಜು ಮಾಡಿದರೆ ಸರ್ಕಾರಕ್ಕೆ ಹಣವೂ ಬರುತ್ತದೆ. ಸಾರ್ವಜನಿಕರ ವಾಹನಗಳೂ ಸುರಕ್ಷಿತವಾಗಿರುತ್ತವೆ. ರಸ್ತೆಗಳಲ್ಲಿ ಸಂಚರಿಸುವವರಿಗೆ ತೊಂದರೆ ತಪ್ಪಿಸಿದಂತಾಗುತ್ತದೆ ಎನ್ನುವುದು ವಾಹನ ಸವಾರರ ಅಭಿಪ್ರಾಯವಾಗಿದೆ.

 

● ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next