Advertisement

ಬಸ್‌ನಿಲ್ದಾಣದಲ್ಲಿ ಪಾರ್ಕಿಂಗ್‌ ಬಲು ದುಬಾರಿ

04:56 PM Oct 12, 2018 | |

ಹುಬ್ಬಳ್ಳಿ: ವಾಯವ್ಯ ಸಾರಿಗೆ ಕರ್ನಾಟಕ ಸಾರಿಗೆ ಸಂಸ್ಥೆಗಳ ಬಸ್‌ ನಿಲ್ದಾಣಗಳಲ್ಲಿನ ಪಾರ್ಕಿಂಗ್‌ ಶುಲ್ಕ ಗಣನೀಯವಾಗಿ ಹೆಚ್ಚಳವಾಗಿದ್ದು, ಶುಲ್ಕ ನಿಗದಿ ಅವೈಜ್ಞಾನಿಕವಾಗಿದೆ ಎಂದು ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

Advertisement

ಸಾರಿಗೆ ಸಂಸ್ಥೆಗಳ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಇತ್ತೀಚೆಗೆ ಹೊಸ ಆದೇಶದ ಪ್ರಕಾರ ಸೂಚಿಸಿರುವ ಪಾರ್ಕಿಂಗ್‌ ಶುಲ್ಕದಿಂದ ವಾಹನ ಸವಾರರ ಜೇಬಿಗೆ ಕತ್ತರಿ ಬೀಳುತ್ತಿದೆ. ಹಳೇ ದರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಶುಲ್ಕ ಏರಿಕೆಯಾಗಿದ್ದು, ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿ ನಗರದ ನಿಲ್ದಾಣಗಳಲ್ಲಿ ಒಂದು ದಿನ ಬೈಕ್‌ ನಿಲ್ಲಿಸಿದರೆ 50 ರೂ., ಕಾರಿಗೆ 100 ರೂ. ಪಾರ್ಕಿಂಗ್‌ ಶುಲ್ಕ ನಿಗದಿ ಮಾಡಿದೆ. ನಿತ್ಯವೂ ವಾಹನಗಳನ್ನು ಪಾರ್ಕ್‌ ಮಾಡುವ ಪ್ರಯಾಣಿಕರು ದ್ವಿಚಕ್ರ ವಾಹನಕ್ಕಾಗಿ ತಿಂಗಳಿಗೆ 1500 ರೂ. ಹಾಗೂ ಕಾರಿಗೆ 3000 ರೂ. ಶುಲ್ಕಕ್ಕಾಗಿಯೇ ವೆಚ್ಚ ಮಾಡುವಂತಹ ಪರಿಸ್ಥಿತಿ ಬಂದೊದಗಿದೆ!

ದುಬಾರಿ ಶುಲ್ಕ: 2017 ನವೆಂಬರ್‌ ತಿಂಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ದರ ಹೆಚ್ಚಳ ಮಾಡಿದೆ. ವಾಯವ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿನ ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿ ಬಸ್‌ ನಿಲ್ದಾಣಗಳಲ್ಲಿ 12-24 ತಾಸಿಗೆ ಬೈಕ್‌ಗೆ 50 ರೂ., ಕಾರುಗಳಿಗೆ 100 ರೂ. ಪಾರ್ಕಿಂಗ್‌ ಶುಲ್ಕ ನಿಗದಿ ಮಾಡಿದ್ದು, ದಿನವೊಂದಕ್ಕೆ ಇದೇ ದರ ನಿಗದಿ ಮಾಡಲಾಗಿದೆ. ಜಿಲ್ಲಾ ಹಾಗೂ ತಾಲೂಕು ನಿಲ್ದಾಣಗಳಲ್ಲಿ ಪಾರ್ಕಿಂಗ್‌ ಶುಲ್ಕಕ್ಕೆ ಹೋಲಿಸಿದರೆ ಇಲ್ಲಿ ಸಾಕಷ್ಟು ಹೆಚ್ಚಳವಾಗಿದೆ.

2018 ಅ. 3ರಿಂದ ಹೊಸದಾಗಿ ಪಾರ್ಕಿಂಗ್‌ ನಿರ್ವಹಣೆ ಪರವಾನಗಿ ಪಡೆದಿರುವ ಗುತ್ತಿಗೆದಾರರು ಹೊಸ ಶುಲ್ಕ ವಿಧಿಸುತ್ತಿದ್ದು, 12ರಿಂದ 24 ಗಂಟೆಗೆ 50 ರೂ. ಶುಲ್ಕ ನಿಗದಿ ಮಾಡಿರುವುದು ಸಾರಿಗೆ ಸಂಸ್ಥೆಯ ಜನರಿಂದ ಹಗಲು ದರೋಡೆ ಮಾಡುತ್ತಿದೆ ಎಂಬುವುದು ಸಾರ್ವಜನಿಕ ಅಸಮಾಧಾನವಾಗಿದೆ.

ಇತರೆಡೆ ಕಡಿಮೆ ಶುಲ್ಕ: ಧಾರವಾಡ, ಹುಬ್ಬಳ್ಳಿ ಹಾಗೂ ಬೆಳಗಾವಿ ಹೊರತುಪಡಿಸಿದರೆ ಜಿಲ್ಲಾ ಹಾಗೂ ವಿಭಾಗೀಯ ಕೇಂದ್ರ ಸ್ಥಾನದ ಬಸ್‌ ನಿಲ್ದಾಣಗಳಲ್ಲಿ 4-24 ತಾಸುಗಳಿಗೆ ಬೈಕ್‌ಗೆ 10 ರೂ., ಕಾರಿಗೆ 20 ರೂ. ಇದ್ದರೆ ಪ್ರತಿದಿನಕ್ಕೆ 20-40 ರೂ. ಶುಲ್ಕವಿದೆ. ಇನ್ನು ತಾಲೂಕು ಕೇಂದ್ರಗಳಲ್ಲಿನ ನಿಲ್ದಾಣಗಳಲ್ಲಿ ಬೈಕ್‌ಗೆ 4-24 ಗಂಟೆಗೆ 8 ರೂ. ಕಾರಿಗೆ 15 ರೂ. ಇದ್ದರೆ ಪ್ರತಿದಿನಕ್ಕೆ 16 ರೂ. ಮತ್ತು 30 ರೂ. ಇದೆ.

Advertisement

ವಿಪರ್ಯಾಸವೆಂದರೆ ತಾಲೂಕು ಕೇಂದ್ರವಾಗಿರುವ ಹುಬ್ಬಳ್ಳಿಯಲ್ಲಿ ಒಂದು ದಿನಕ್ಕೆ 50 ರೂ. ಹಾಗೂ ಕಾರಿಗೆ 100 ರೂ. ಶುಲ್ಕ ವಿಧಿಸಿರುವುದು ಅವೈಜ್ಞಾನಿಕವಾಗಿದೆ. ದಿನವೊಂದಕ್ಕೆ 50 ರೂ. ವಸೂಲಿ ಮಾಡುವ ಗುತ್ತಿಗೆದಾರರು ಪಾರ್ಕಿಂಗ್‌ ಸ್ಥಳಗಳಲ್ಲಿ ವಾಹನಗಳಿಗೆ ನೆರಳಿನ ಸೌಲಭ್ಯ ಕಲ್ಪಿಸಿಲ್ಲ.
ಸೈಕಲ್‌ಗ‌ೂ 50 ರೂ. ಕೊಡ್ಬೇಕು!

ಸರಕಾರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಪರಿಸರ ರಕ್ಷಣೆ ಹಾಗೂ ಆರೋಗ್ಯದ ದೃಷ್ಟಿಯಿಂದ ಸೈಕಲ್‌ ಬಳಕೆಗೆ ಹೆಚ್ಚು ಒತ್ತು ನೀಡುವಂತೆ ಪ್ರೋತ್ಸಾಹ ನೀಡುತ್ತಿವೆ. ಆದರೆ ಸಾರಿಗೆ ಸಂಸ್ಥೆ ಮಾತ್ರ ನಿಲ್ದಾಣಗಳಲ್ಲಿ ಸೈಕಲ್‌ಗ‌ಳನ್ನು ನಿಲ್ಲಿಸಿದರೂ 12 ತಾಸು ಮೀರಿದರೆ 50 ರೂ. ಪಾರ್ಕಿಂಗ್‌ ಶುಲ್ಕ ಪಾವತಿಸಬೇಕು. ಕನಿಷ್ಠ ಸೈಕಲ್‌ಗಾದರೂ ವಿನಾಯಿತಿ ನೀಡಬೇಕಿತ್ತು. ಅಲ್ಲದೆ ಸೈಕಲ್‌ ನಿಲ್ಲಿಸಲು ಸರಿಯಾದ ವ್ಯವಸ್ಥೆಯೂ ನಿಲ್ದಾಣದ ಪಾರ್ಕಿಂಗ್‌ ಸ್ಥಳದಲ್ಲಿಲ್ಲ. ದ್ವಿಚಕ್ರ ವಾಹನದಂತೆ ಸೈಕಲ್‌ ಪರಿಗಣಿಸಿರುವುದು ಹಾಸ್ಯಾಸ್ಪದವಾಗಿದೆ.

ಸುತ್ತೋಲೆ ಪ್ರಕಾರ ಹೊಸ ಗುತ್ತಿಗೆದಾರರಿಗೆ ಪಾರ್ಕಿಂಗ್‌ ನಿರ್ವಹಣೆ ಪರವಾನಗಿ ನೀಡಲಾಗಿದ್ದು,ದರ ನಿಗದಿ ಮಾಡಲಾಗಿದೆ. ನಿಗದಿ ಮಾಡಿದ ಶುಲ್ಕಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪಡೆದರೆ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
. ವಿವೇಕಾನಂದ ವಿಶ್ವಜ್ಞ, 
ವಿಭಾಗೀಯ ನಿಯಂತ್ರಣಾಧಿಕಾರಿ

ಪಾರ್ಕಿಂಗ್‌ ಶುಲ್ಕ ನಿಗದಿ ಮಾಡಿರುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ. ದಿನವೊಂದಕ್ಕೆ ಬೈಕ್‌ಗೆ 50 ರೂ. ಪಡೆಯುವ ಗುತ್ತಿಗೆದಾರರಾಗಲಿ ಅಥವಾ ಸಾರಿಗೆ ಸಂಸ್ಥೆಯಾಗಲಿ ನಮ್ಮ ವಾಹನಗಳಿಗೆ ನೆರಳಿನ ವ್ಯವಸ್ಥೆ ಮಾಡಿದೆಯೇ? ಸಾರಿಗೆ ಸಂಸ್ಥೆಯಿಂದ ಹಗಲು ದರೋಡೆ ನಡೆಯುತ್ತಿದ್ದು, ಕೂಡಲೇ ಅವೈಜ್ಞಾನಿಕ ಶುಲ್ಕ ರದ್ದುಗೊಳಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಶುಲ್ಕ ನಿಗದಿ ಮಾಡಬೇಕು.
ಮಂಜುನಾಥ ಗೌಡರ,
ವೈದ್ಯಕೀಯ ಪ್ರತಿನಿಧಿ

Advertisement

Udayavani is now on Telegram. Click here to join our channel and stay updated with the latest news.

Next