Advertisement

ಇಲ್ಲಿ ಪಾರ್ಕಿಂಗ್‌ ಶುಲ್ಕ ನೆಪ ಮಾತ್ರ!

02:54 PM Oct 19, 2019 | Team Udayavani |

ಹಾವೇರಿ: ನಗರದ ರೈಲ್ವೆ ಸ್ಟೇಷನ್‌ ಹಾಗೂ ಬಸ್‌ ನಿಲ್ದಾಣದಲ್ಲಿ ಪಾರ್ಕಿಂಗ್‌ ಶುಲ್ಕದ ಹೆಸರಿನಲ್ಲಿ ವಾಹನ ಸವಾರರಿಂದ ದುಪ್ಪಟ್ಟು ಹಣ ಸುಲಿಗೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆರೋಪ ಕೇಳಿ ಬಂದಿದೆ.

Advertisement

ಪಾರ್ಕಿಂಗ್‌ ಸ್ಥಳದ ಗುತ್ತಿಗೆ ನೀಡುವ ಮುನ್ನ ಪ್ರತಿ ವಾಹನಕ್ಕೂ ನಿರ್ದಿಷ್ಟ ಶುಲ್ಕ ನಿಗದಿ ಮಾಡಿ ನಿಗದಿ ಮಾಡಿದ ಶುಲ್ಕವನ್ನು ಮಾತ್ರ ಆಕರಣೆ ಮಾಡುವಂತೆ ಷರತ್ತು ವಿಧಿ ಸಿರಲಾಗಿರುತ್ತದೆ. ಆದರೆ, ಪಾರ್ಕಿಂಗ್‌ ಗುತ್ತಿಗೆ ಪಡೆದವರು ವಾಹನ ಸವಾರರಿಂದ ನಿಗದಿತ ದರಕ್ಕಿಂತ 2-3 ಪಟ್ಟು ಶುಲ್ಕ ವಸೂಲಿ ಮಾಡುತ್ತಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.

ಹಗಲು ದರೋಡೆ ದಂಧೆ: ನಗರದ ಸಾರ್ವಜನಿಕರು ನಿತ್ಯ ಬೇರೆ ಊರುಗಳಿಗೆ ತೆರಳುವ ಸಂದರ್ಭದಲ್ಲಿ ಬಸ್‌ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ಪಾರ್ಕಿಂಗ್‌ ಸ್ಥಳದಲ್ಲಿ ವಾಹನ ನಿಲ್ಲಿಸಿ ಹೋಗುತ್ತಾರೆ. ರೈಲ್ವೆ ನಿಲ್ದಾಣದಲ್ಲಿ ದ್ವಿಚಕ್ರ ವಾಹನಕ್ಕೆ ಹಗಲು ಹೊತ್ತಿನಲ್ಲಿ ಐದು ರೂ., ರಾತ್ರಿ ಹೊತ್ತು 20 ರೂ. ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಹಗಲು ಹೊತ್ತು ಏಳು ರೂ., ರಾತ್ರಿ ಸಮಯದಲ್ಲಿ 30 ರೂ. ವಸೂಲಿ ಮಾಡಲಾಗುತ್ತಿದೆ. ಬಸ್‌ ನಿಲ್ದಾಣದಲ್ಲಂತೂ ದ್ವಿಚಕ್ರ ವಾಹನಕ್ಕೆ ಹಗಲು ಹೊತ್ತಿನಲ್ಲಿ 10 ರೂ. ಹಾಗೂ ರಾತ್ರಿ 30 ರೂ. ವಸೂಲಿ ಮಾಡುವ ಮೂಲಕ ಹಗಲು ದರೋಡೆ ದಂಧೆಗೆ ಇಳಿದಿದ್ದಾರೆ. ನಿಯಮದ ಪ್ರಕಾರ 24 ಗಂಟೆಗೆ ಒಂದೇ ದರ ಇರಬೇಕು. ಆದರೆ, ಗುತ್ತಿಗೆದಾರರು ರಾತ್ರಿ, ಹಗಲು ಬೇರೆ ಬೇರೆ ದರ ನಿಗದಿಪಡಿಸುತ್ತಿದ್ದಾರೆ.

ಫಲಕ ಕಾಣದ ಸ್ಥಳದಲ್ಲಿಲ್ಲ: ಪಾರ್ಕಿಂಗ್‌ ಸ್ಥಳದ ಗುತ್ತಿಗೆ ಪಡೆದವರು ಪಾರ್ಕಿಂಗ್‌ ಸ್ಥಳದಲ್ಲಿ ಎಲ್ಲರಿಗೂ ಕಾಣುವ ಸ್ಥಳದಲ್ಲಿ ವಾಹನಗಳ ಪಾರ್ಕಿಂಗ್‌ಗೆ ನಿಗದಿಪಡಿಸಿದ ಪಾರ್ಕಿಂಗ್‌ ದರದ ಪಟ್ಟಿ ಅಳವಡಿಸಿರಬೇಕು. ರೈಲ್ವೆ ನಿಲ್ದಾಣದ ಒಂದು ಮೂಲೆಯಲ್ಲಿ ಪಾರ್ಕಿಂಗ್‌ ದರ ಪಟ್ಟಿ ಹಾಕಲಾಗಿದೆಯಾದರೂ ಬಸ್‌ ನಿಲ್ದಾಣದಲ್ಲಿ ಮಾತ್ರ ದರ ಪಟ್ಟಿ ಎಲ್ಲಿದೆ ಎಂಬುದು ಹಾಕಿದವರಿಗೇ ಗೊತ್ತು ಎಂಬ ಸ್ಥಿತಿ ಇದೆ. ಇದರಿಂದ ವಾಹನ ಸವಾರರು ನಿಗದಿತ ದರ ಗೊತ್ತಾಗದೇ ಗುತ್ತಿಗೆದಾರರು ಕೇಳಿದಷ್ಟು ಹಣ ನೀಡಿ ಬರುವಂತಾಗಿದೆ.

ಹುಟ್ಟಿಕೊಂಡ ಅನುಮಾನದ ಹುತ್ತ: ಬಸ್‌ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಹಗಲು, ರಾತ್ರಿ ಬೇರೆ ಬೇರೆ ದರ ನಿಗದಿಪಡಿಸುವುದು. ಹೆಚ್ಚಿನದರ ಪಡೆಯುತ್ತಿರುವುದು ಪಾರ್ಕಿಂಗ್‌ ಸ್ಥಳದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳಲ್ಲಿಯೂ ದಾಖಲಾಗುತ್ತದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಯಾರು ಇವರನ್ನು ಪ್ರಶ್ನಿಸುವ ಗೋಜಿಗೆ ಹೋಗದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

Advertisement

ಬಸ್‌ ನಿಲ್ದಾಣದ ಪಾರ್ಕಿಂಗ್‌ ಗುತ್ತಿಗೆದಾರರು ಹೆಚ್ಚಿನ ಹಣ ವಸೂಲಿ ಮಾಡುತ್ತಾರೆ ಎಂಬ ಆರೋಪ ಕೇಳಿಬಂದಿತ್ತು. ಈಗಾಗಲೇ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಹೆಚ್ಚಿಗೆ ಹಣ ವಸೂಲಿ ಮಾಡುವುದನ್ನು ಮುಂದುರಿಸಿದರೆ ಪಾರ್ಕಿಂಗ್‌ ಗುತ್ತಿಗೆದಾರರಿಗೆ ದಂಡ ಹಾಕಲಾಗುವುದು. -ಜಗದೀಶ, ಕೆಎಸ್‌ಆರ್‌ಟಿಸಿ ವಿಭಾಗಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next