ಬೆಂಗಳೂರು: ನಗರದ ಫ್ರೀಡಂ ಪಾರ್ಕ್‌ನಲ್ಲಿ ನಿರ್ಮಾಣವಾಗುತ್ತಿರುವ ಬಹುಮಹಡಿ ಪಾರ್ಕಿಂಗ್ ತಾಣದ ಮಾದರಿಯಲ್ಲೇ ಹೊಸೂರು ರಸ್ತೆಯ ಕಿದ್ವಾಯಿ ಗಂಥಿ ಆಸ್ಪತ್ರೆ ಆವರಣದಲ್ಲೂ ಬಹುಮಹಡಿ ವಾಹನ ನಿಲುಗಡೆ ತಾಣ ನಿರ್ಮಿಸಲು ಮುಂದಾಗಿರುವ ಬಿಬಿಎಂಪಿ, ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದೆ.
ಚಿಕಿತ್ಸೆಗಾಗಿ ನಿತ್ಯ ಆಸ್ಪತ್ರೆಗೆ ಸಾವಿರಾರು ಮಂದಿ ಭೇಟಿ ನೀಡುವುದರಿಂದ ಆಸ್ಪತ್ರೆ ಆವರಣದಲ್ಲಿ ಸಾರ್ವಜನಿಕರು, ವೈದ್ಯರ ವಾಹನಗಳ ನಿಲುಗಡೆಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಬಹುಮಹಡಿ ವಾಹನ ನಿಲುಗಡೆ ತಾಣ ನಿರ್ಮಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ.
ಈಗಾಗಲೇ ಎರಡು ಬಾರಿ ಸ್ಥಳ ಪರಿಶೀಲನೆ ನಡೆಸಿರುವ ಅಧಿಕಾರಿಗಳು ವಾಹನ ನಿಲುಗಡೆ ತಾಣ ನಿರ್ಮಾಣಕ್ಕೆ ಅಗತ್ಯ ಜಾಗ ನೀಡುವಂತೆ ಕೋರಿದ್ದು, ಸಂಸ್ಥೆ ನಿರ್ದೇಶಕ ಡಾ.ಕೆ.ಬಿ.ಲಿಂಗೇಗೌಡ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಒಂದು ಎಕರೆ ಜಮೀನು ನೀಡುವ ಭರವಸೆ ನೀಡಿದ್ದಾರೆ.
ಕಿದ್ವಾಯಿ ಸಂಸ್ಥೆ ಆವರಣದಲ್ಲಿ ಉದ್ದೇಶಿತ ಪಾರ್ಕಿಂಗ್ ತಾಣದಲ್ಲಿ 300 ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ಅದರಂತೆ ತಳ ಮಹಡಿ ಸೇರಿ ಒಟ್ಟು ಮೂರು ಮಹಡಿ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಿರುವ ಅಧಿಕಾರಿಗಳು, ಶೀಘ್ರದಲ್ಲಿಯೇ ಟೆಂಡರ್ ಆಹ್ವಾನಿಸಲು ಸಿದ್ಧತೆ ನಡೆಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಂ.ಕೆ.ಗುಣಶೇಖರ್, ಆಸ್ಪತ್ರೆಗೆ ನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಾರೆ. ಹೊಸೂರು ರಸ್ತೆಯಲ್ಲಿ ತೀವ್ರ ಸಂಚಾರ ದಟ್ಟಣೆಯಿದ್ದು, ರಸ್ತೆಬದಿ ವಾಹನ ನಿಲುಗಡೆಗೆ ಸಾಧ್ಯವಾಗದಂತಾಗಿದೆ. ಹೀಗಾಗಿ ಸಾರ್ವಜನಿಕರು ಹಾಗೂ ವೈದ್ಯರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಬಜೆಟ್‌ನಲ್ಲಿ 15 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.
ಬಿಬಿಎಂಪಿ ವತಿಯಿಂದ ಬಹುಮಹಡಿ ವಾಹನ ನಿಲುಗಡೆ ತಾಣ ನಿರ್ಮಣಕ್ಕಾಗಿ ಆಸ್ಪತ್ರೆ ಆವರಣದಲ್ಲಿ ಒಂದು ಎಕರೆ ಜಮೀನು ನೀಡಲಾಗಿದೆ. ಈಗಾಗಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಶೀಘ್ರ ಯೋಜನೆ ಜಾರಿಗೊಳಿಸುವ ಭರವಸೆ ನೀಡಿದ್ದಾರೆ. ಒಂದೊಮ್ಮೆ ಕಟ್ಟಡ ನಿರ್ಮಾಣ ಜವಾಬ್ದಾರಿ ಆಸ್ಪತ್ರೆಗೆ ವಹಿಸಿದರೂ ನಿರ್ಮಿಸಲು ಸಿದ್ಧರಿದ್ದೇವೆ.
-ಡಾ.ಕೆ.ಬಿ.ಲಿಂಗೇಗೌಡ, ಕಿದ್ವಾಯಿ ಸ್ಮಾರಕ ಗಂಥಿ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ