Advertisement

ಪಾರ್ಕಿಂಗ್‌-ಟ್ರಾಫಿಕ್‌ ಸಮಸ್ಯೆ ಪರಿಹಾರಕ್ಕೆ ಪಾಲಿಕೆ-ಪೊಲೀಸರ ಸಲಹಾ ಸಮಿತಿ ರಚನೆ

11:59 PM Feb 16, 2021 | Team Udayavani |

ಲಾಲ್‌ ಬಾಗ್: ನಗರದಲ್ಲಿ ಪಾರ್ಕಿಂಗ್‌; ನೋ ಪಾರ್ಕಿಂಗ್‌ ವಲಯ ಸಹಿತ ಟ್ರಾಫಿಕ್‌ ವ್ಯವಸ್ಥೆ ಸುಧಾರಣೆ ಮಾಡುವ ಉದ್ದೇಶದಿಂದ ಮಹಾನಗರ ಪಾಲಿಕೆ ಹಾಗೂ ಪೊಲೀಸ್‌ ಇಲಾಖೆಯ ನೇತೃತ್ವದಲ್ಲಿ ಸಲಹಾ ಸಮಿತಿಯೊಂದನ್ನು ರಚನೆ ಮಾಡಲು ತೀರ್ಮಾನಿಸಲಾಗಿದೆ.

Advertisement

ಮಂಗಳೂರು ನಗರದಲ್ಲಿ ಟ್ರಾಫಿಕ್‌ ಸಮಸ್ಯೆ ಕುರಿತಂತೆ ಸೂಕ್ತ ನಿರ್ಣಯ ಕೈಗೊ ಳ್ಳಲು ಮೇಯರ್‌ ದಿವಾಕರ ಪಾಂಡೇಶ್ವರ ಅವರ ಅಧ್ಯಕ್ಷತೆಯಲ್ಲಿ ಮಂಗ ಳೂರು ಮಹಾನಗರ ಪಾಲಿಕೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಮಂಗಳೂರು ಡಿಸಿಪಿ (ಅಪರಾಧ ಮತ್ತು ಸಂಚಾರ) ವಿನಯ ಗಾಂವ್ಕರ್‌ ಮಾತನಾಡಿ, ನಗರದಲ್ಲಿ ಈ ಹಿಂದೆ 61 ಕಡೆ ನೋ ಪಾರ್ಕಿಂಗ್‌ ವಲಯ ವಾಗಿ ಗುರುತಿಸಲಾಗಿತ್ತು. ಬಳಿಕ ಪರಿಷ್ಕರಿಸಿ 54 ಕಡೆಗಳಿಗೆ ಸೀಮಿತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಸಲಹಾ ಸಮಿತಿ ಯನ್ನು ರಚನೆ ಮಾಡಿ ಅಂತಿಮ ನಿರ್ದೇಶನ ನೀಡಲಾಗುವುದು ಎಂದರು.

ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಮಂಗಳೂರು, ಪುತ್ತೂರು ಮತ್ತು ಬಂಟ್ವಾಳ ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಪೊಲೀಸ್‌ ಇಲಾಖೆಯಿಂದ ಇತ್ತೀಚೆಗೆ ಸರ್ವೇ ನಡೆಸಿದ್ದು, ಆ ಪ್ರಕಾರ ಲಾಕ್‌ಡೌನ್‌ ಬಳಿಕ ದ್ವಿಚಕ್ರ ವಾಹನ ಮತ್ತು ಮಿನಿ ನಾಲ್ಕು ಚಕ್ರ ವಾಹನಗಳ ಸಂಖ್ಯೆ ಶೇ. 20ರಷ್ಟು ಏರಿಕೆಯಾಗಿದೆ. ಆ ವಾಹನಗಳೆಲ್ಲ ರಸ್ತೆಗಿಳಿದು ವಾಹನ ದಟ್ಟಣೆ ಉಂಟಾಗುತ್ತಿದೆ ಎಂದರು.

ಹೊಸ ಕೆಮರಾ ಅಳವಡಿಕೆ
ಕಾಂಕ್ರೀಟ್‌ ರಸ್ತೆ ಹಾಗೂ ಹಂಪ್ಸ್‌ಗೆ ಮಾರ್ಕಿಂಗ್‌ ಕೆಲಸವನ್ನು ಸದ್ಯದಲ್ಲೇ ಪೂರ್ಣಗೊಳಿಸುತ್ತೇವೆ. ಹಳೆಯ ವಾಹನ ಗಳನ್ನು ರಸ್ತೆ ಬದಿ ನಿಲ್ಲಿಸಲಾಗುತ್ತಿದೆ ಎಂಬ ದೂರು ಬರುತ್ತಿದ್ದು, ಸಾರಿಗೆ ಇಲಾಖೆ ಮೂಲಕ ತೆರವುಗೊಳಿಸಲಾಗುವುದು. ಪೊಲೀಸ್‌ ಇಲಾಖೆ ಮುಂಭಾಗ ಹಳೆಯ ವಾಹನ ಇದ್ದರೆ, ನ್ಯಾಯಾಲಯದ ನಿರ್ದೇಶನದಂತೆ ತೆರವು ಮಾಡುತ್ತೇವೆ. ನಗರದಲ್ಲಿ ಸದ್ಯ 171 ಸಿಸಿ ಕೆಮರಾಗಳಿದ್ದು, ಅವು ಹಳೆಯದಾಗಿವೆ. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಹೈಡೆಫಿನೇಶನ್‌ ಹೊಸ ಕೆಮರಾಗಳು ಬರಲಿವೆ ಎಂದರು.

ಪಾಲಿಕೆ ಸದಸ್ಯ ನವೀನ್‌ ಡಿ”ಸೋಜಾ ಮಾತನಾಡಿ, ನಗರದಲ್ಲಿ ಪಾರ್ಕಿಂಗ್‌ ಮತ್ತು ನೋ ಪಾರ್ಕಿಂಗ್‌ ವಲಯವಾಗಿ ಗುರುತು ಮಾಡಿದ್ದರೂ ಅನೇಕ ಕಡೆ ಇನ್ನೂ ಸೂಚನ ಫಲಕ ಅಳವಡಿಸಿಲ್ಲ. ವಾಹನಗಳನ್ನು ಟೋಯಿಂಗ್‌ ಮಾಡುವಾಗ ಸಿಬಂದಿ ಸೌಜನ್ಯದಿಂದ ವರ್ತಿಸುತ್ತಿಲ್ಲ. ಟೋಯಿಂಗ್‌ ವೇಳೆ ಕೆಲವೊಂದು ವಾಹನಗಳಿಗೆ ಹಾನಿ ಉಂಟಾಗುತ್ತಿದ್ದು, ಇದಕ್ಕೆ ಯಾರು ಹೊಣೆ? ರಸ್ತೆ ವಿಸ್ತರಣೆಯ ಉದ್ದೇಶಕ್ಕೆ ಕಂಕನಾಡಿಯಿಂದ ಫ‌ಳ್ನೀರು ವರೆಗೆ ಅನೇಕ ಮಂದಿ ಜಾಗ ಬಿಟ್ಟು ಕೊಟ್ಟಿದ್ದಾರೆ. ಸದ್ಯ ಆ ಪ್ರದೇಶದಲ್ಲಿ ಅನಧಿಕೃತವಾಗಿ ಗೂಡಂಗಡಿ ನಿರ್ಮಾಣವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರು.

Advertisement

ಮಾಜಿ ಮೇಯರ್‌ ಭಾಸ್ಕರ್‌ ಕೆ. ಮಾತನಾಡಿ, ನಗರದಲ್ಲಿರುವ ಫುಟ್‌ಪಾತ್‌ ಪಾದಚಾರಿಗಳಿಗೆ ಬಳಕೆಯಾಗುತ್ತಿಲ್ಲ. ಟ್ರಾಫಿಕ್‌ ಸಭೆಗೆ ಬಸ್‌ ಮಾಲಕರ ಸಂಘದ ಅಧ್ಯಕ್ಷರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಮುಖರನ್ನು ಆಹ್ವಾನಿಸಬೇಕಿತ್ತು ಎಂದು ಸಲಹೆ ನೀಡಿದರು.

ಮನಪಾ ಸದಸ್ಯ ವಿನಯರಾಜ್‌ ಮಾತನಾಡಿ, ಕೆಲವೊಂದು ಕಡೆ ವಾಣಿಜ್ಯ ಕೇಂದ್ರಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ಆದರೂ, ಅಲ್ಲಿಗೆ ಪಾಲಿಕೆ ಅಧಿಕಾರಿಗಳು ಡೋರ್‌ ನಂಬರ್‌, ಉದ್ದಿಮೆ ಪರವಾನಿಗೆ ನೀಡಿದ್ದಾರೆ ಎಂದರು.

ಸ್ಥಾಯೀ ಸಮಿತಿ ಸದಸ್ಯ ಕಿರಣ್‌ ಕುಮಾರ್‌ ಮಾತನಾಡಿ, ಕೊಟ್ಟಾರಚೌಕಿ ಮೇಲ್ಸೇತುವೆ ಅವೈಜ್ಞಾನಿಕವಾಗಿದೆ. ಮೇಲ್ಸೇತುವೆ ಆರಂಭವಾಗುವ ಕೋಡಿ ಕಲ್‌ ಕ್ರಾಸ್‌ ಬಳಿ ಬಸ್‌ ನಿಲುಗಡೆ ಮಾಡುತ್ತಿದ್ದು, ಆ ಪ್ರದೇಶ ಅಪಘಾತ ವಲಯವಾಗುತ್ತಿದೆ ಎಂದರು. ಪಾಲಿಕೆ ಸದಸ್ಯ ಅನಿಲ್‌ ಕುಮಾರ್‌ ಮಾತನಾಡಿ, ಪೊಲೀಸರು ಸಾರ್ವ ಜನಿಕರಲ್ಲಿ ಜನಸ್ನೇಹಿಯಾಗಿ ವರ್ತಿಸದೆ ಏಕ ವಚನ ಬಳಸುತ್ತಾರೆ ಎಂದರು.

ಚರ್ಚೆಗೆ ಬಂದ ಇತರ ವಿಷಯಗಳು
– ಬಜಾಲ್‌-ಪೈಸಲ್‌ನಗರಕ್ಕೆ, ವೀರ ನಗರಕ್ಕೆ ರಾತ್ರಿ 7 ಗಂಟೆ ಬಳಿಕ ಬಸ್‌ ಸೇವೆ ಇಲ್ಲ.
– ಕೆಪಿಟಿ-ಬಜಪೆ ರಸ್ತೆಯಲ್ಲಿ ಅಳವಡಿಸಿದ ಬ್ಯಾರಿಕೇಡ್‌ ವಾಹನ ಚಾಲಕರಿಗೆ ಕಾಣದೆ ಅಪಘಾತ ಸಂಭವಿಸುವ ಸಾಧ್ಯತೆ ಇದೆ.
– ಜಿಲ್ಲಾಧಿಕಾರಿ ಕಚೇರಿಯಿಂದ ಹ್ಯಾಮಿಲ್ಟನ್‌ ವೃತ್ತದ ವರೆಗಿನ ಪ್ರದೇಶದಲ್ಲಿ ನೋ ಪಾರ್ಕಿಂಗ್‌ ವಲಯ ಗುರುತಿಸಿಲ್ಲ.
– ಅಂಬೇಡ್ಕರ್‌ ವೃತ್ತದಲ್ಲಿ ಝೀಬ್ರಾ ಕ್ರಾಸ್‌ ಇಲ್ಲ, ಉಡುಪಿ ಕಡೆಯಿಂದ ಬರುವ ಬಸ್‌ಗಳ ನಿಲ್ದಾಣಕ್ಕೆ ಕೂಳೂರು ಬಳಿ ಜಾಗ ಪರಿಶೀಲಿಸಿ.
– ಚೊಕ್ಕಬೆಟ್ಟು-ಕಾಟಿಪಳ್ಳ ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸಲಾಗುತ್ತದೆ
– ಜಿಎಚ್‌ಎಸ್‌ ರಸ್ತೆಗೆ ಹಂಪ್ಸ್‌ ಅಗತ್ಯವಿದೆ.
– ಬಂದರು ರಸ್ತೆಯ ಪೊಲೀಸ್‌ ಠಾಣೆ ಬಳಿಯೇ ಲಾರಿ ನಿಲ್ಲಿಸಲಾಗುತ್ತಿದ್ದು, ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ.
– ಬೋಂದೆಲ್‌-ಪಚ್ಚನಾಡಿ ನಡುವಣ ಜನ ಸಂಚಾರ ಅಧಿಕವಾಗಿರುವ ಸಮಯದಲ್ಲಿ ಬಸ್‌ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next