ಉಡುಪಿ : ಕೆಳಪರ್ಕಳ ರಸ್ತೆ- ಮಣಿಪಾಲ ವಾಟರ್ ಟ್ಯಾಂಕ್‌ವರೆಗಿನ ಓಡಾಟ ಯಮಕೂಪವಾಗಿ ಪರಿಣಮಿ ಸಿದ್ದು, ನಿತ್ಯ ನಾಲ್ಕೈದು ವಾಹನಗಳು ಕೆಟ್ಟು ನಿಲ್ಲುತ್ತಿದ್ದು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗುತ್ತಿದೆ. ಘನ ವಾಹನ ಸವಾರರಿಗೆ ಇಲ್ಲಿ ವಾಹನ ಚಲಾಯಿಸಿಕೊಂಡು ಹೋಗುವುದು ಸವಾಲಾಗುತ್ತಿದೆ.
ಪರ್ಕಳದಲ್ಲಿ ರಾ.ಹೆ. (169ಎ) 400 ಮೀ. ಉದ್ದದ ನೇರ ರಸ್ತೆ ಕಾಮಗಾರಿ ನಡೆಯುತ್ತಿದೆ. ಭೂಸ್ವಾಧೀನ ವಿವಾದಕ್ಕೆ ಸಂಬಂಧಿಸಿ ಕೋರ್ಟ್‌ನಿಂದ ಮತ್ತೆ ತಡೆಯಾಜ್ಞೆ ಬಂದಿರುವುದರಿಂದ ಮತ್ತೆರಡು ತಿಂಗಳು ಕಾಮಗಾರಿ ಕುಂಟುತ್ತ ಸಾಗುವ ಸಾಧ್ಯತೆ ಇದೆ.
ಪ್ರಸ್ತುತ ಹಳೆಯ ರಸ್ತೆಯಲ್ಲಿ ವಾಹನಗಳು ಓಡಾಡುತ್ತಿದ್ದು, ಈ ಇಕ್ಕಟ್ಟಾದ ರಸ್ತೆ ತೀರ ಹದಗೆಟ್ಟಿದೆ. ಬೃಹತ್ ಗುಂಡಿಗಳು, ಜಲ್ಲಿ ಕಲ್ಲುಗಳು ಹರಡಿಕೊಂಡು ಅವ್ಯವಸ್ಥೆಯ ಆಗರವಾಗಿದೆ. ಟ್ಯಾಂಕರ್, ಲಾರಿ, ಬಸ್ ಮೊದಲಾದ ಘನ ವಾಹನಗಳು ಇಲ್ಲಿ ಸಂಚರಿಸಲು ಕಷ್ಟವಾಗುತ್ತಿದೆ. ನಿತ್ಯ ಐದಾರು ವಾಹನಗಳು ಇಲ್ಲಿ ಕೆಟ್ಟು ನಿಲ್ಲುತ್ತಿವೆ.
ವಾರಕ್ಕೆ ಎರಡು ಅಪಘಾತ ಸಂಭವಿಸಿ, ಸವಾರರ ಜೀವ ತೆಗೆಯುವಷ್ಟು ಅಪಾಯಕಾರಿಯಾಗಿದೆ. ಕಳೆದ ವಾರ ಲಾರಿಯೊಂದು ನಿಯಂತ್ರಣ ತಪ್ಪಿ ಕಾರಿನ ಮೇಲೆ ಬಿದ್ದು, ಕಾರಿನ ಪ್ರಯಾಣಿಕರು ಗಾಯ ಗೊಂಡಿದ್ದರು. ಶುಕ್ರವಾರ ರಾತ್ರಿ ಶಾಲಾ ಪ್ರವಾಸದ ಬಸ್ ಕೆಟ್ಟು ನಿಂತು ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಸಂಭವಿಸಿತ್ತು. ಪ್ರವಾಸಕ್ಕೆ ಬಂದಿದ್ದ ಶಾಲೆಯ ಮಕ್ಕಳು ಎರಡು ಗಂಟೆ ಕಾಲ ರಸ್ತೆ ಬದಿಯಲ್ಲಿ ನಿಂತು ಪರದಾಡುವಂತಾಗಿತ್ತು. ಈ ಘಟನೆಗೂ ಕೆಲ ಗಂಟೆಗಳ ಮುನ್ನ ಪೊಲೀಸ್ ಟ್ಯಾಂಕರ್ ಒಂದು ಕೆಟ್ಟು ನಿಂತಿತ್ತು. ಘನ ವಾಹನಗಳು ಈ ಏರು ರಸ್ತೆಯಲ್ಲಿ ಚಲಿಸಲು ಸಾಧ್ಯವಾಗದೇ ಅಧಿಕ ಒತ್ತಡದಿಂದ ಕ್ಲಚ್ ಪ್ಲೇಟ್, ಆ್ಯಕ್ಸಿಲ್, ಬ್ಲೇಡ್‌ಗಳಿಗೆ ಹಾನಿಯಾಗಿ ಕೆಟ್ಟು ನಿಲ್ಲುವಂತಾಗಿದೆ ಎಂದು ವಾಹನ ಚಾಲಕರ ಅಳಲು ತೋಡಿಕೊಂಡಿದ್ದಾರೆ.
ತಾತ್ಕಾಲಿಕ ಡಾಮರಿಗೆ ಆಗ್ರಹ
ಗುಂಡಿಯಿಂದ ಸಂಚಾರ ಕಷ್ಟವಾಗುತ್ತಿರುವ ಜತೆಗೆ ಧೂಳು ಮತ್ತಷ್ಟು ಸಮಸ್ಯೆ ನೀಡುತ್ತಿದೆ. ಹೊಸ ರಸ್ತೆಯಾಗುವವರೆಗೆ ಈ ರಸ್ತೆಗೆ ತುರ್ತಾಗಿ ತಾತ್ಕಾಲಿಕ ಡಾಮರು ಹಾಕಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪ್ರಾಧಿಕಾರವನ್ನು ವಾಹನ ಸವಾರರು ಒತ್ತಾಯಿಸಿದ್ದಾರೆ.
ಏನೆನ್ನುತ್ತದೆ ರಾ. ಹೆ.ಪ್ರಾಧಿಕಾರ
ಪರ್ಕಳದ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ನ್ಯಾಯಾಲಯದ ತಡೆ ಆಜ್ಞೆ ಹೊರತುಪಡಿಸಿ ಬೇರೆ ಪ್ರದೇಶದಲ್ಲಿ ಕೆಲಸ ನಡೆಯುತ್ತಿದೆ. ಹಳೆಯ ರಸ್ತೆಯನ್ನು ಡಾಮರು ಹಾಕಿ ತಾತ್ಕಾಲಿಕವಾಗಿ ಅಭಿವೃದ್ಧಿಪಡಿಸಲು ಕ್ರಮವಹಿಸಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಶೀಘ್ರ ತಾತ್ಕಾಲಿಕ ವ್ಯವಸ್ಥೆ
ಕೆಳಪರ್ಕಳ-ಮಣಿಪಾಲ ವಾಟರ್ ಟ್ಯಾಂಕ್‌ವರೆಗಿನ ರಸ್ತೆಯಲ್ಲಿ ಸುಗಮ ಸಂಚಾರ ವ್ಯವಸ್ಥೆಗಾಗಿ ತಾತ್ಕಾಲಿಕವಾಗಿ ಡಾಮರು ಹಾಕಿ ಅಭಿವೃದ್ಧಿ ಪಡಿಸುವಂತೆ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ.
– ಸುಮಿತ್ರಾ ನಾಯಕ್, ನಗರಸಭೆ ಅಧ್ಯಕ್ಷೆ.